ನಿರ್ಮಲ ಅಭಿಯಾನ: ಗ್ರಾಮಸಭೆ ನಡೆದಿಲ್ಲ
ಸರ್ಕಾರದ ವಿವಿಧ ಯೋಜನೆಗಳ ಅನುಷ್ಠಾನ ಸಂಬಂಧ ಪ್ರತಿ ತಿಂಗಳು ಕಡ್ಡಾಯವಾಗಿ ಗ್ರಾಮ ಸಭೆಗಳು ನಡೆಸಬೇಕೆಂದು ಸರ್ಕಾರದ ಆದೇಶವಿದೆ. ಈ ಪೈಕಿ ಶೌಚಾಲಯಗಳ ಬಗ್ಗೆ ಜನತೆಯಲ್ಲಿ ಅರಿವು ಮೂಡಿಸಲು ಫಲಾನುಭವಿ ಆಯ್ಕೆ ಮಾಡಲು ನಿರ್ಮಲ ಭಾರತ ಅಭಿಯಾನಕ್ಕಾಗಿಯೇ ಪ್ರತ್ಯೇಕ ಗ್ರಾಮ ಸಭೆ ನಡೆಸಬೇಕಾದದ್ದು ಅಧಿಕಾರಿಗಳ ಕರ್ತವ್ಯ. ಆದರೆ, ಕೋಲಾರ ಜಿಲ್ಲೆಯ ಬಹುತೇಕ ಗ್ರಾಪಂಗಳಲ್ಲಿ ಈ ರೀತಿಯ ಸಭೆಗಳು ನಡೆಯದೇ ಇರುವುದು ವಿಪರ್ಯಾಸ.
ಕೋಲಾರ ಜಿಲ್ಲೆಯಲ್ಲಿ 5 ತಾಲೂಕುಗಳು, 27 ಹೋಬಳಿಗಳು, 1598 ಜನವಸತಿ ಇರುವ ಹಳ್ಳಿಗಳು, 156 ಗ್ರಾಮ ಪಂಚಾಯಿತಿಗಳು, 2 ನಗರಸಭೆ, 4 ಪುರಸಭೆಗಳು ಇವೆ.
ಪ್ರತಿಯೊಂದು ಗ್ರಾಮ ಪಂಚಾಯ್ತಿಯು ನಿರ್ಮಲ ಭಾರತ ಅಭಿಯಾನಕ್ಕಾಗಿ ಕಡ್ಡಾಯವಾಗಿ ಒಂದು ಗ್ರಾಮ ಸಭೆ ನಡೆಸಬೇಕೆಂದು ಕೇಂದ್ರ ಸರ್ಕಾರ ಸೂಚಿಸಿದೆ ಹಾಗೂ ಇದಕ್ಕಾಗಿ ಪ್ರತಿ ಗ್ರಾಪಂಗೆ ರು. 3 ಸಾವಿರ ವಿಶೇಷ ಅನುದಾನ ಮಂಜೂರು ಮಾಡಿದೆಯಾದರೂ ಸಂಬಂಧಪಟ್ಟ ಅಧಿಕಾರಿಗಳು ಗ್ರಾಮ ಸಭೆಗಳನ್ನು ಏಕೆ ನಡೆಸುತ್ತಿಲ್ಲವೆಂಬುದು ವಿಸ್ಮಯಕ್ಕೆ ಕಾರಣವಾಗಿದೆ.
ಜನತೆಯ ಆರೋಗ್ಯ, ಮಾನದ ಬಗ್ಗೆ ಕಾಳಜಿ ವಹಿಸಿ ಗ್ರಾಮ ಸಭೆಗಳನ್ನು ಕಡ್ಡಾಯವಾಗಿ ನಡೆಸುವಂತೆ ಇಚ್ಛಾಶಕ್ತಿ, ಬದ್ಧತೆ ಪ್ರದರ್ಶಿಸಬೇಕಾದ ಕೋಲಾರ ಜಿಲ್ಲೆಯ 28 ಮಂದಿ ಜಿಪಂ, 102 ಮಂದಿ ತಾಪಂ ಹಾಗೂ 2543 ಮಂದಿ ಗ್ರಾಪಂ ಸದಸ್ಯರು ಮೌನವಾಗಿರುವುದೇಕೆ? ಎಂಬುದು ಅನುಮಾನಕ್ಕೆ ಎಡೆ ಮಾಡಿದೆ.
ಗೋಡೆ ಬರಹ ಎಲ್ಲಾ ಕಡೆ ಇಲ್ಲ: ಶೌಚಾಲಯಗಳ ನಿರ್ಮಾಣ, ಜನತೆಯಲ್ಲಿ ನೈರ್ಮಲ್ಯದ ಬಗ್ಗೆ ಜಾಗೃತಿ, ನಿರ್ಮಲ ಭಾರತ ಅಭಿಯಾನದ ಉದ್ದೇಶ, ಪ್ರಗತಿ ಸಾಧನೆಗೆ ಸಂಬಂಧಿಸಿದ ಮಾಹಿತಿಯನ್ನು ಪ್ರತಿ ಗ್ರಾಪಂ ಕಚೇರಿ ಗೋಡೆ ಮೇಲೆ ಬರೆಸುವುದಕ್ಕೆ ಸರ್ಕಾರದ ಸುತ್ತೂಲೆ ಇದೆ.
ಆದರೆ, ಈ ಕಾರ್ಯವೂ ಸಹ ಕೋಲಾರ ಜಿಲ್ಲೆಯಲ್ಲಿ ನೆಟ್ಟಗೆ ಆಗದಿರುವುದರಿಂದ ಜನತೆ ಜಾಗೃತರಾಗಲು ಸಾಧ್ಯವಾಗುತ್ತಿಲ್ಲ.
ಪ್ರತಿ ಗ್ರಾಪಂ ಕಟ್ಟಡಗಳ ಮೇಲೆ ನಿರ್ಮಲ ಭಾರತದ ಕಾರ್ಯಕ್ರಮಗಳನ್ನು ಬರೆಸಲು ಪ್ರತಿ ಪಂಚಾಯ್ತಿಗೆ ರು.10 ಸಾವಿರ ರುಪಾಯಿ ಬಿಡುಗಡೆ ಮಾಡಲಾಗಿದೆ. ನೇಮಕಕ್ಕೂ ಉದಾಸೀನ: ಸ್ವಚ್ಛಗಾರರನ್ನು ನೇಮಕ ಮಾಡಿಕೊಳ್ಳುವುದಕ್ಕೆ ಸರ್ಕಾರ ಅವಕಾಶ ಕಲ್ಪಿಸಿದೆ. 156 ಗ್ರಾಪಂಗಲ್ಲಿ ಸರ್ಕಾರದ ಆದೇಶ ಪ್ರಕಾರ 156 ಸ್ವಚ್ಛಗಾರರು ಇರಬೇಕು. ಜಿಲ್ಲೆಯ 60ರಷ್ಟು ಕಡೆ ನೇಮಕವಾಗಿಲ್ಲ.
ಪುರಸ್ಕಾರದಲ್ಲೂ ವ್ಯತ್ಯಾಸ
ಗ್ರಾಮೀಣ ಪ್ರದೇಶದಲ್ಲಿ ನೈರ್ಮಲ್ಯ ಕಾಪಾಡುವ ಉದ್ದೇಶದಿಂದ ಕೇಂದ್ರ ಸರ್ಕಾರ 1986ರಲ್ಲಿ ಗ್ರಾಮೀಣ ನೈರ್ಮಲ್ಯ ಕಾರ್ಯಕ್ರಮ ಜಾರಿಗೆ ತಂದಿತು. ನಂತರ ಸದರಿ ಕಾರ್ಯಕ್ರಮವನ್ನು 1999ರಿಂದ ದೇಶದ್ಯಾಂತ ಸಂಪೂರ್ಣ ಸ್ವಚ್ಛತಾ ಆಂದೋಲನ ಎಂಬ ಹೆಸರಿನಿಂದ 11ನೇ ಪಂಚವಾರ್ಷಿಕ ಯೋಜನೆಯ ಅಂತ್ಯದವರೆಗೆ ಮುಂದುವರೆಸಿತು.
ಇದೇ ಕಾರ್ಯಕ್ರಮ 2012ರ ಏಪ್ರಿಲ್‌ನಿಂದ ನಿರ್ಮಲ ಭಾರತ ಅಭಿಯಾನ ಎಂದು ಪುನರ್ ನಾಮಕರಣ ಮಾಡಿ 12ನೇ ಪಂಚ ವಾರ್ಷಿಕ ಯೋಜನೆಯಲ್ಲಿ ಮುಂದುವರೆಸಲಾಗುತ್ತಿದೆ.ಗ್ರಾಮೀಣ ಪ್ರದೇಶದಲ್ಲಿ ನೈರ್ಮಲ್ಯ ಕಾಪಾಡಲು ಹೆಚ್ಚಿನ ಶ್ರಮವಹಿಸಿ ಸರ್ಕಾರದ ಯೋಜನೆಗಳನ್ನು ಪರಿಣಾಮಕಾರಿಯಾಗಿ ಅನುಷ್ಠಾನಕ್ಕೆ ತರುವ ಗ್ರಾಪಂ ಪಂಚಾಯಿತಿಗಳಿಗೆ ಪುರಸ್ಕಾರ ನೀಡುವ ಮೂಲಕ ಬೇರೆಯವರಲ್ಲಿ ಸ್ಫೂರ್ತಿಯನ್ನು ತುಂಬಲು ಪ್ರಯತ್ನ ನಡೆಯುತ್ತಿದೆ.
ಆದರೆ, ಕೋಲಾರ ಜಿಲ್ಲೆಯಲ್ಲಿ ಅರ್ಹರಿಗೆ ಪ್ರಶಸ್ತಿ ನೀಡಿ ಪುರಸ್ಕರಿಸುವ ಬದಲು ಅನರ್ಹರಿಗೆ ಪ್ರಶಸ್ತಿ ನೀಡಿರುವುದು ಬೆಳಕಿಗೆ ಬಂದಿದೆ. ಪ್ರತಿ ಗ್ರಾಪಂನಲ್ಲಿ ಕಡ್‌ಡಾಯವಾಗಿ ಶೌಚಾಲಯ ಇರಬೇಕು. ಪಂಚಾಯಿತಿಗೆ ನಿಗದಿಪಡಿಸಿರುವ ಶೌಚಾಲಯಗಳ ಗುರಿ ಸಾಧಿಸಿರಬೇಕು ಎಂಬ ನಿಯಮ ಉಲ್ಲಂಘನೆ ಮಾಡಿ ಕೋಲಾರ ತಾಲೂಕಿನ ವೇಮಗಲ್ ಗ್ರಾಪಂಗೆ ಕಳೆದ ಸಾಲಿನಲ್ಲಿ ಪ್ರಶಸ್ತಿ ಹಾಗೂ ರು.7 ಲಕ್ಷ ನಗರದ ಬಹುಮಾನ ನೀಡಿರುವುದು ಚರ್ಚೆಗೆ ಗ್ರಾಸವಾಗಿತ್ತು. ಈ ಕುರಿತು ನಿರ್ಮಲ ಭಾರತ ಅಭಿಯಾನ ಕೋಲಾರ ಜಿಲ್ಲಾ ಸಮನ್ವಯಾಧಿಕಾರಿ ನಾಯ್‌ಡು ಅವರನ್ನು ಕೇಳಿದರೆ ಪ್ರಶಸ್ತಿ ಆಯ್ಕೆ ಸಮಿತಿಯ ಶಿಫಾರಸ್ಸಿನ ಪ್ರಕಾರ ಪ್ರಶಸ್ತಿ ನೀಡಲಾಗಿದೆ.
ಪ್ರಶಸ್ತಿ ಸಿಗುತ್ತದೆ ಎಂಬ ಆಸೆಯಿಂದಲಾದರೂ ಬೇರೆ ಗ್ರಾಪಂಗಳು ಶೌಚಾಲಯ ನಿರ್ಮಿಣಕ್ಕೆ ಆಸಕ್ತಿ ತೋರಬಹುದೆಂಬ ಉದ್ದೇಶದಿಂದ ಈ ರೀತಿ ಮಾಡಿರಬಹುದೆಂದು ಅಭಿಪ್ರಾಯಪಟ್ಟಿದ್ದಾರೆ.