ರಜೆ ಬಿಡಿ, ಮೊದಲು ನೀರು ಕೊಡಿ
ಕೋಲಾರ: ಜಿಲ್ಲೆಯಲ್ಲಿ ಕುಡಿವ ನೀರಿನ ಸಮಸ್ಯೆ ತೀವ್ರಗೊಳ್ಳುತ್ತಿರುವುದರಿಂದ ಸಮಸ್ಯೆ ನಿವಾರಣೆ ಆಗುವವರೆಗೆ ತಾಲೂಕು ಮತ್ತು ಜಿಲ್ಲಾ ಮಟ್ಟದ ಅಧಿಕಾರಿಗಳು ರಜೆ ಮೇಲೆ ಹೋಗಬಾರದು, ತುರ್ತು ಕೆಲಸಗಳಿದ್ದರೆ ಮಾತ್ರ ಜಿಲ್ಲಾಧಿಕಾರಿಗಳ ಅನುಮತಿಯನ್ನು ಕಡ್ಡಾಯವಾಗಿ ಪಡೆದು ಕೇಂದ್ರಸ್ಥಾನ ಬಿಡಬೇಕೆಂದು ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಪಿ.ಎನ್. ಶ್ರೀನಿವಾಸಚಾರಿ ಸೂಚನೆ ನೀಡಿದರು.
ನಗರದ ಜಿಲ್ಲಾಧಿಕಾರಿ ಸಭಾಂಗಣದಲ್ಲಿ ಶನಿವಾರ ನೀರಿನ ಸಮಸ್ಯೆ ನಿವಾರಿಸಲು ಕರೆದಿದ್ದ ಜಿಲ್ಲಾ ಮಟ್ಟದ ಅಧಿಕಾರಿಗಳ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿ, ನೀರಿನ ಸಮಸ್ಯೆ ನಿವಾರಣೆಗಾಗಿ ಸಮರೋಪಾದಿಯಲ್ಲಿ ಕೆಲಸ ಮಾಡಬೇಕಾಗಿರುವುದರಿಂದ ಅನಗತ್ಯವಾಗಿ ರಜೆ ಹಾಕದೆ ಸಹಕಾರ ನೀಡಬೇಕೆಂದರು.ಅನೇಕ ಗ್ರಾಮದಲ್ಲಿ ನೀರಿಲ್ಲದ ಕೊಳವೆ ಬಾವಿಗಳಲ್ಲಿ ಪಂಪ್ ಮೋಟಾರ್‌ಗಳು ಹೊರ ತೆಗೆಯದೆ ತುಕ್ಕು ಹಿಡಿಯುತ್ತಿದ್ದು, ಅವುಗಳನ್ನು ಕೂಡಲೇ ಹೊರ ತೆಗೆದು ಹೊಸದಾಗಿ ಕೊರೆಯುವ ಕೊಳವೆ ಬಾವಿಗಳಿಗೆ ಅಳವಡಿಸಿಕೊಳ್ಳಬೇಕೆಂದು ಸೂಚಿಸಿದರು.ತಾಲೂಕು ಮಟ್ಟದ ಸಮಿತಿ ರಚಿಸಿ: ಇನ್ನು ಮುಂದೆ ಜಿಲ್ಲಾ ಪಂಚಾಯತಿ ತಾಂತ್ರಿಕ ವಿಭಾಗದಲ್ಲಿ ಕನಿಷ್ಠ ಹತ್ತು ಪಂಪ್ ಮೋಟಾರ್‌ಗಳನ್ನು ದಾಸ್ತಾನಿಟ್ಟುಕೊಂಡು, ತುರ್ತಾಗಿ ಕೊಳವೆ ಬಾವಿಗಳಿಗೆ ಪಂಪ್ ಮೋಟಾರ್ ಅಳವಡಿಸಬೇಕಾದರೆ ಉಪಯೋಗಿಸಿಕೊಳ್ಳಬೇಕೆಂದು ತಿಳಿಸಿದರು.
ಜಿಲ್ಲಾಧಿಕಾರಿ ಡಿ.ಕೆ. ರವಿ ಮಾತನಾಡಿ, ಈಗಾಗಲೇ ಪಟ್ಟಣ ಪ್ರದೇಶದಲ್ಲಿ ಪ್ರತಿ ಟ್ಯಾಂಕರ್ ನೀರಿಗೆ ರು.450 ನೀಡಲಾಗುತ್ತಿದೆ. ಆದರೆ ಅನೇಕ ಟ್ಯಾಂಕರ್ ಮಾಲೀಕರು ರು.450 ಗಳಿಗೆ ಬರುವುದಿಲ್ಲವೆಂದು ಹೇಳುತ್ತಿರುವುದರಿಂದ ಅಂತಹ ಟ್ಯಾಂಕರ್‌ಗಳನ್ನು ಆರ್‌ಟಿಒ ಸ್ವಾಧೀನಕ್ಕೆ ಪಡೆಯಲು ತಿಳಿಸಿರುವುದಾಗಿ ಹೇಳಿದರು. '
ಎಲ್ಲಾ ತಾಪಂಗಳಲ್ಲಿ ಸ್ಥಾಪಿಸಿರುವ ಸಹಾಯವಾಣಿಗಳ ದೂರವಾಣಿ ಸಂಖ್ಯೆಗಳನ್ನು ಪತ್ರಿಕೆಗಳಲ್ಲಿ ಪ್ರಚಾರ ಮಾಡಬೇಕು, ದಿನದ 24ಗಂಟೆ ಕಾಲ ಒಬ್ಬ ಸಹಾಯಕರನ್ನು ನೇಮಕ ಮಾಡಿರಬೇಕೆಂದು ಅಧಿಕಾರಿಗಳಿಗೆ ಸೂಚಿಸಿದರು.
ಶ್ರೀನಿವಾಸಪುರ ತಾಲೂಕಿನ 17 ಗ್ರಾಮಗಳು, ಮಾಲೂರು 44, ಬಂಗಾರಪೇಟೆ 37, ಮುಳಬಾಗಿಲು ತಾಲೂಕಿನಲ್ಲಿ 27 ಟ್ಯಾಂಕರ್‌ಗಳಲ್ಲಿ ನೀರು ಸರಬರಾಜು ಮಾಡಲಾಗುತ್ತಿದೆ ಎಂದು ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಗೆ ವಿವರಿಸಿದರು.ನಗರದಲ್ಲಿ ಪ್ರತಿಯೊಬ್ಬರಿಗೆ 45 ಲೀಟರ್ ನೀರು ಕೊಡಬೇಕು ಆದರೆ, 10 ಲೀಟರ್ ನೀರು ಕೊಡಲು ಆಗುತ್ತಿಲ್ಲ ಎಂದು ಜಿಲ್ಲಾಧಿಕಾರಿ ತಮ್ಮ ಅಸಹಾಯಕತೆ ವ್ಯಕ್ತಪಡಿಸಿದರು.