ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕೋಲಾರ

ಸದಾ ಸ್ವಾಗತ ಕೋರುವ ಬೀಗ!

Vishwanath S
Updated On : 4 May 2014, 1:25 am

ಬಾಗೇಪಲ್ಲಿ: ತಾಲೂಕು ಕೈಗಾರಿಕಾ ಮತ್ತು ವಾಣಿಜ್ಯ ಇಲಾಖೆ ಕಚೇರಿ ಇದೆ. ಆದರೆ, ಕಚೇರಿಯಲ್ಲಿ ಮಾತ್ರ ಇಲಾಖೆಗೆ ಸಂಬಂಧಪಟ್ಟ ಅಧಿಕಾರಿಗಳು ಹಾಗೂ ಸಿಬ್ಬಂದಿ ವರ್ಗದ ಸುಳಿವೇ ಇರುವುದಿಲ್ಲ. ಇದರಿಂದ ಈ ಇಲಾಖೆ ಸರ್ಕಾರದ ಲೆಕ್ಕದಲ್ಲಿ ಆಟಕ್ಕೆ ಇದ್ದರೂ ಸಹ ಸಾರ್ವಜನಿಕರ ವಿಷಯದಲ್ಲಿ ಲೆಕ್ಕಕ್ಕಿಲ್ಲ ಎನ್ನುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ.
ಬಾಗೇಪಲ್ಲಿ ತಾಲೂಕಿನ ಕೈಗಾರಿಕಾ ಮತ್ತು ವಾಣಿಜ್ಯ ಇಲಾಖೆ ಕಚೇರಿಗೆ ಸದಾ ಬೀಗ ಜಡಿಯಲಾಗಿರುತ್ತದೆ. ಇಲಾಖೆಯ ವಿಸ್ತರಣಾಧಿಕಾರಿ ಹಾಗೂ ಸಿಬ್ಬಂದಿ ವರ್ಗದವರು ಈ ಕಚೇರಿಗೆ ಯಾವಾಗ ಬರುತ್ತಾರೆ? ಯಾವಾಗ ಹೋಗುತ್ತಾರೆ? ತಿಳಿಯದ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ.
ಸಮಾರಂಭಕ್ಕೆ ಮಾತ್ರ ಹಾಜರು: ಕೇವಲ ಸಭೆ ಸಮಾರಂಭಗಳಲ್ಲಿ ಮಾತ್ರ  ಕೈಗಾರಿಕಾ ಮತ್ತು ವಾಣಿಜ್ಯ ಇಲಾಖೆಯ ತಾಲೂಕು ವಿಸ್ತರಣಾಧಿಕಾರಿ ಕಾಣಿಸಿಕೊಳ್ಳುವುದು ಬಿಟ್ಟರೆ ಉಳಿದಂತೆ ಇತರೆ ಸಮಯದಲ್ಲಿ ಕಚೇರಿಗೆ ಬೀಗ ಹಾಕಿದ್ದು, ಈ ಹಿನ್ನೆಲೆಯಲ್ಲಿ ಈ ಇಲಾಖೆಗೆ ಸಂಬಂಧಿಸಿದಂತೆ ತಾಲೂಕಿನ ವಿವಿಧ ಗ್ರಾಮಗಳಿಂದ ವಿವಿಧ ಕೆಲಸಗಳ ನಿಮಿತ್ತ ಬರುವ ಸಾರ್ವಜನಿಕರ ಅಹವಾಲುಗಳಿಗೆ ಸ್ಪಷ್ಟ ಉತ್ತರ ಸಿಗದೆ ಬಂದ ದಾರಿಗೆ ಸುಂಕವಿಲ್ಲ ಎನ್ನುವಂತೆ ವಾಪಸ್ ಹೋಗಬೇಕಾಗಿದೆ. ನಿರುದ್ಯೋಗಿ ಯುವಕರು, ಮಹಿಳೆಯರು ಮತ್ತು ರೈತರು ಇಲಾಖೆಯಲ್ಲಿ ಸಿಗುವ ಸೌಲಭ್ಯಗಳಿಂದ ವಂಚಿತರಾಗುತ್ತಿದ್ದಾರೆ. ಕಾಟಾಚಾರಕ್ಕಾಗಿ ಇಲ್ಲಿ ಕಾರ್ಯ ನಿರ್ವಹಿಸುತ್ತಿರುವ ವಿಸ್ತರಣಾಧಿಕಾರಿಗಳು ಕೇವಲ ಸಭೆ ಸಮಾರಂಭಗಳಲ್ಲಿ ಮಾತ್ರ ಕಾಣಿಸಿಕೊಳ್ಳುತ್ತಿರುತ್ತಾರೆ.  ಸಿಬ್ಬಂದಿ ಸುಳಿವೇ ಇಲ್ಲ: ತಿಂಗಳಾನುಗಟ್ಟಲೇ ಕಚೇರಿಗೆ ಬೀಗ ಹಾಕಿರುವುದರಿಂದ ಈ ಇಲಾಖೆಯಲ್ಲಿ ಅಧಿಕಾರಿಗಳು ಸೇರಿದಂತೆ ಸಿಬ್ಬಂದಿ ವರ್ಗದವರು ಇಲ್ಲಿ ಕೆಲಸ ನಿರ್ವಹಿಸುತ್ತಿಲ್ಲ. ಇದರಿಂದ ಸರ್ಕಾರದ ಲೆಕ್ಕದಲ್ಲಿಯಾದರೂ ಈ ಇಲಾಖೆ ಇದೆಯೇ ಎಂಬ ಅನುಮಾನ ಸಾರ್ವಜನಿಕರನ್ನು ಕಾಡುತ್ತಿದೆ. ಈ ಇಲಾಖೆಯಲ್ಲಿ ಅಧಿಕಾರಿಗಳು ಹಾಗೂ ಸಿಬ್ಬಂದಿ ವರ್ಗದವರು ಕೆಲಸ ನಿರ್ವಹಿಸದಿದ್ದರೂ ಸಹ ಸರ್ಕಾರದಿಂದ ಪ್ರತಿ ತಿಂಗಳ ಸಂಬಳ ಮಾತ್ರ ಎಣಿಸಿಕೊಳ್ಳುವುದರಿಂದ ಬೊಕ್ಕಸಕ್ಕೆ ಮಾತ್ರ ನಷ್ಟ ಉಂಟಾಗುತ್ತಿದೆ. ಅಧಿಕಾರಿಗಳು ಇತ್ತ ಗಮನ ಹರಿಸಬೇಕು ಎಂದು ಜನರು ಒತ್ತಾಯಿಸಿದ್ದಾರೆ.
ಪ್ರಗತಿಪರ ಚಳವಳಿಗೆ ಕನ್ನಡ ಕೊಡುಗೆ ಅಪಾರ: ನಂಗಲಿ
ಕೋಲಾರ: ಅನೇಕ ಕಾಲಘಟ್ಟಗಳಲ್ಲಿ ಹಲವು ರೀತಿಯ ಸಾಹಿತ್ಯ ಚಳವಳಿಗಳು ನಡೆದಿವೆ. ಆದರೆ, ಬೆಳಕು ಕಂಡಿದ್ದು ವಚನ ಸಾಹಿತ್ಯ ಚಳವಳಿ ಎಂದು ಸಾಹಿತಿ ಪ್ರೊ.ಚಂದ್ರಶೇಖರ ನಂಗಲಿ ಪ್ರತಿಪಾದಿಸಿದರು.
 ಕೋಲಾರ ನಗರದ ಗೋಕುಲ ವಿದ್ಯಾಸಂಸ್ಥೆ ಶನಿವಾರ ಆಯೋಜಿಸಿದ್ದ ಸಂಸ್ಥೆ ವಾರ್ಷಿಕೋತ್ಸವ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು. ವಚನ ಸಾಹಿತ್ಯಕ್ಕೆ ಬಸವಣ್ಣ, ಪುರಂದರದಾಸರು, ಅಕ್ಕಮಹಾದೇವಿ ಮತ್ತಿತರರು ಮಹತ್ವದ ಕಾಣಿಕೆ ನೀಡಿದ್ದು, ಸಮಾಜದಲ್ಲಿ ಬದಲಾವಣೆ ತರಲು ಆದರ್ಶ ಪಾಲಿಸುವುದು ಈಗ ಪ್ರಸ್ತುತವಾಗಿದೆ ಎಂದರು.
 ಪೂರ್ಣಚಂದ್ರ ತೇಜಸ್ವಿ ಸಾಹಿತ್ಯ ಮಾಲಿಕೆಯು ಜನತಾ ಪ್ರತಿಯಂತೆ ತನಗೆ ತೋರುತ್ತದೆ ಹಾಗಾಗಿ ಇಂತಹ ಸಾಹಿತಿಯ ಮಾರ್ಗಸೂಚಿಯನ್ನು ಪಾಲಿಸದಿದ್ದರೆ ನಿಮ್ಮ ಜೀವನ ತೇಜಸ್ಸಿನಿಂದ ದೂರವಾಗುವುದರಲ್ಲಿ ಸಂಶವೇ ಇಲ್ಲ ಎಂದರು.ಕನ್ನಡ, ತೆಲುಗು, ತಮಿಳು ಜೊತೆಗೆ ಉರ್ದು ಭಾಷೆಯೂ ಜಿಲ್ಲೆಯಲ್ಲಿ ಪ್ರಚಲಿತವಾಗಿದ್ದು, ಬಹು ಭಾಷೆಗಳ ಜಗತ್ತಿನ ವಿಶಿಷ್ಟ ಜಿಲ್ಲೆ ನಮ್ಮದಾಗಿದ್ದು, ಇಲ್ಲಿನ ಜನ ಬಹುಭಾಷಿಕರಾಗಿರುವುದನ್ನು ಕಾಣಬಹುದಾಗಿದೆ ಎಂದರು. ಜಿಲ್ಲಾ ಕಸಾಪ ಅಧ್ಯಕ್ಷ ನಾಗರಾಜ್, ಗೋಕುಲ ವಿದ್ಯಾಸಂಸ್ಥೆ ಕಾರ್ಯದರ್ಶಿ ವಿ.ನಾರಾಯಣಸ್ವಾಮಿ ಮಾತನಾಡಿದರು. ವಾಣಿಜ್ಯ ವಿಭಾಗ ಮುಖ್ಯಸ್ಥೆ ಜಯಂತಿ ವಾರ್ಷಿಕ ವರದಿ ವಾಚಿಸಿದರು. ನಗರಸಭೆ ಮಾಜಿ ಸದಸ್ಯ ಯಶೋಧಾ ನಾರಾಯಣಸ್ವಾಮಿ, ಸುಮಂಗಲಾ ಉಪಸ್ಥಿತರಿದ್ದರು.
ಭದ್ರತೆ ಸೊಲ್ಲೇ ಇಲ್ಲದ ಟೇಕಲ್ ರೇಲ್ವೆ ನಿಲ್ದಾಣ
ಟೇಕಲ್: ಬ್ರಿಟಿಷರ ಕಾಲದಲ್ಲಿ ಸ್ಥಾಪಿತವಾದ ಟೇಕಲ್ ರೇಲ್ವೆ ನಿಲ್ದಾಣ ಸುಸಜ್ಜಿತವಾಗಿದ್ದು, ಭದ್ರತೆ ಇಲ್ಲದೆ ಪ್ರಯಾಣಿಕರು ನಿತ್ಯ ಆತಂಕದಲ್ಲಿ ಕಾಲಕಳೆಯುವುದಾಗಿದೆ. ಇತ್ತಿಚೇಗೆ ತಮಿಳುನಾಡಿನ ಚೆನ್ನೈನಲ್ಲಿ  ಸಂಭವಿಸಿದ ಬಾಂಬ್ ಸ್ಫೋಟ ಪ್ರಕರಣದಿಂದ ಬಹುತೇಕ ರೇಲ್ವೆ ನಿಲ್ದಾಣಗಳಲ್ಲಿ ಹೈ ಅಲರ್ಟ್ ಘೋಷಿಸಲಾಗಿದೆ.
 ಆದರೆ ಟೇಕಲ್‌ನಲ್ಲಿ ಇದ್ಯಾವುದರ ಅರಿವೆ ಇಲ್ಲದೆ, ಸೂಕ್ತ ಭದ್ರತಾ ವ್ಯವಸ್ಥೆ, ಮಾತ್ರವಲ್ಲ, ಕನಿಷ್ಠ ರೇಲ್ವೆ ಪೊಲೀಸರನ್ನು ಹುಡುಕಬೇಕಾದ ಪ್ರಸಂಗ ಇದೆ. ದಕ್ಷಿಣ ಭಾರತದಲ್ಲೇ ಅತಿ ದೊಡ್ಡ ರೈಲ್ವೆ ಜಂಕ್ಷನ್ ಬಂಗಾರಪೇಟೆ ನಿಲ್ದಾಣದಿಂದ ಸುಮಾರು 14 ಕಿ.ಮೀ. ದೂರದಲ್ಲಿರುವ ಟೇಕಲ್ ರೇಲ್ವೆ ನಿಲ್ದಾಣದಿಂದ ದಿನನಿತ್ಯ ಹೊರ ರಾಜ್ಯಗಳಿಗೆ ಹಾದು ಹೋಗುವ ರೈಲುಗಳ ಸಂಖ್ಯೆ ಬರೊಬ್ಬರಿ 25ಕ್ಕೂ ಹೆಚ್ಚು. ಅದರಲ್ಲೂ ಚೆನ್ನೈ ಕಡೆಗೆ 12 ರೈಲುಗಳು ಹೊರಡುತ್ತದೆ ಅಷ್ಟೇ ರೈಲುಗಳು ಮತ್ತೆ ಬರುತ್ತದೆ. ಆದರೆ, ಈ ನಿಲ್ದಾಣದಲ್ಲಿ ಸರಿಯಾದ ಭದ್ರತಾ ವ್ಯವಸ್ಥೆಯಿಲ್ಲ. ಟಿಕೆಟ್ ಕೌಂಟರ್‌ನಿಂದ ಹಿಡಿದು ನಾಲ್ಕು ದಿಕ್ಕುಗಳಿಂದ ಜನ ಬಂದು ಹೋಗುತ್ತಿದ್ದು ಅತೀ ಹೆಚ್ಚು ಅಪರಿಚಿತರೇ ಓಡಾಡುತ್ತಿರುತ್ತಾರೆ. ಹಾಗೂ ರಾತ್ರಿ ವೇಳೆ ಕೆಲವು ಪುಂಡು-ಪೋಕರಿಗಳು ಅಲ್ಲಿಯೇ ಕುಡಿದು ಮಧ್ಯದ ಬಾಟಲು ಹಾಕಿರುತ್ತಾರೆ. ಈ ನಿಟ್ಟಿನಲ್ಲಿ ರಾತ್ರಿ ಮತ್ತು ಹಗಲು ರೇಲ್ವೆ ಪೊಲೀಸರು ನಿಲ್ದಾಣಕ್ಕೆ ಮತ್ತು ಸಾರ್ವಜನಿಕರಿಗೆ ಭದ್ರತೆ ಕೊಟ್ಟರೆ ಉತ್ತಮವಾಗುತ್ತದೆ ಎನ್ನುವುದು ಜನತೆಯ ಆಶಯವಾಗಿದೆ.
ಘರ್ಷಣೆ: ವ್ಯಕ್ತಿಗೆ ಗಾಯ
ಟೇಕಲ್: ಟೇಕಲ್ ಗ್ರಾಮದಲ್ಲಿ ಕರಗ ಮಹೋತ್ಸವ ಅಂಗವಾಗಿ ಹಣ ವಸೂಲಿ ಮಾಡುತ್ತಿದ್ದಾಗ ವ್ಯಕ್ತಿಯೊಬ್ಬನನ್ನು ಶಿಕ್ಷಕನೊಬ್ಬ ಚಾಕುವಿನಿಂದ ಇರಿದು ಹಲ್ಲೆ ಮಾಡಿರುವ ಘಟನೆ ನಡೆದಿದೆ.
 ಗ್ರಾಮದ ಹೊಟ್ಟೆಪ್ಪ ಗಾಯಗೊಂಡ ವ್ಯಕ್ತಿ. ಈತ ಬುಧವಾರ ಗ್ರಾಮದ ಆಂಜನೇಯ ದೇವಾಲಯದ ಬಳಿ ಕರಗ ಮಹೋತ್ಸವ ಬಗ್ಗೆ ಮಾತನಾಡುತ್ತಿದ್ದಾಗ ಹಣ ವಸೂಲಿ ವಿಚಾರಕ್ಕೆ ಶಿಕ್ಷಕ ಅಮರನಾರಾಯಣ ಹಾಗೂ ಹೊಟ್ಟೆಪ್ಪನ ಮಧ್ಯೆ ಮಾತಿನ ಚಕಮಕಿ ನಡೆದು ನಂತರ ರಾತ್ರಿ ಹೊಟ್ಟೆಪ್ಪನ ಮನೆ ಬಳಿಗೆ ಹೋಗಿ ಶಿಕ್ಷಕ ಹಾಗೂ ತಾಯಿ ವೆಂಕಟಮ್ಮ ಅವಾಚ್ಯ ಶಬ್ಧಗಳಿಂದ ನಿಂದಿಸಿ ಎದೆಗೆ ಚಾಕುವಿನಿಂದ ಇರಿಯಲಾಗಿದೆ ಎಂದು ಮಾಸ್ತಿ ಪೊಲೀಸ್ ಠಾಣೆಯಲ್ಲಿ ದೂರು ನೀಡಲಾಗಿದೆ. ಎರಡೂ ಕಡೆ ಕೇಸು ದಾಖಲಾಗಿದ್ದು, ಮುಂದಿನ ಕ್ರಮ ಕೈಗೊಳ್ಳಲಾಗಿದೆ.
ಅಮಾನತು: ನಲ್ಲದಿಮ್ಮನಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಶಿಕ್ಷಕ ಅಮರನಾರಾಯಣ ಗ್ರಾಮದಲ್ಲಿ ಪ್ರಚೋದನಕಾರಿ ಕೆಲಸಕ್ಕೆ ಪ್ರೋತ್ಸಾಹ ನೀಡಲಾಗುತ್ತಿದ್ದರೆಂದು ಈತನನ್ನು ಅಮಾನತುಪಡಿಸಬೇಕೆಂದು ಕ್ಷೇತ್ರ ಶಿಕ್ಷಣಾಧಿಕಾರಿಗೆ ಕೊಟ್ಟಿರುವ ದೂರಿನಲ್ಲಿ ಸಾರ್ವಜನಿಕರು ಆರೋಪಿಸಿದ್ದಾರೆ.
ಮಹಿಳೆ ಮೇಲೆ
ಬಲತ್ಕಾರ ಯತ್ನ
ಚಿಂತಾಮಣಿ: ತೋಟದಲ್ಲಿ ಕೆಲಸ ಮಾಡುತ್ತಿದ್ದ ಒಂಟಿ ಮಹಿಳೆ ಮೇಲೆ ವ್ಯಕ್ತಿಯೊಬ್ಬ ಬಲತ್ಕಾರಕ್ಕೆ ಯತ್ನಿಸಿದ ಘಟನೆ ಕೆಂಚಾರ್ಲಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯ ರಂಗೇನಹಳ್ಳಿ ಗ್ರಾಮದಲ್ಲಿ ಶನಿವಾರ ನಡೆದಿದೆ. ತಾಲೂಕಿನ ರಂಗೇನಹಳ್ಳಿ ಗ್ರಾಮದ ಗೃಹಿಣಿಯೊಬ್ಬರು ಒಂಟಿಯಾಗಿ ತೋಟದಲ್ಲಿ ಕೆಲಸ ಮಾಡುತ್ತಿದ್ದಾಗ, ಅದೇ ಗ್ರಾಮದ ಮೂರ್ತಿ ಎಂಬಾತ ಆಕೆ ಜೊತೆ ಅಸಭ್ಯವಾಗಿ ವರ್ತಿಸಿ ಬಲತ್ಕಾರಕ್ಕೆ ಯತ್ನಿಸಿದ್ದಾನೆ. ಆ ಸಮಯದಲ್ಲಿ  ಆಕೆ ಗಾಬರಿಗೊಡು ಓಡಿಹೋಗಿ ನೆರೆಹೊರೆ ಸಹಾಯದಿಂದ ಪಾರಾಗಿರುವುದಾಗಿ ಪೊಲೀಸರಿಗೆ ದೂರು ನೀಡಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಕೆಂಚಾರ್ಲಹಳ್ಳಿ ಪೊಲೀಸರು ಕ್ರಮ ಕೈಗೊಂಡಿದ್ದಾರೆ.
ವ್ಯಕ್ತಿ ಆತ್ಮಹತ್ಯೆ
ಚಿಂತಾಮಣಿ: ಜೀವನದಲ್ಲಿ ಜಿಗುಪ್ಸೆಗೊಂಡ ವ್ಯಕ್ತಿಯೊಬ್ಬ ಮನೆಯಲ್ಲಿ ನೇಣು ಬಿಗಿದು ಸಾವನ್ನಪ್ಪಿರುವ ಘಟನೆ ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯ ಊಲವಾಡಿ ಗ್ರಾಮದಲ್ಲಿ ನಡೆದಿದೆ.ತಾಲೂಕಿನ ಕಸಬಾ ಹೋಬಳಿ ಊಲವಾಡಿ ಗ್ರಾಮದ ಸುರೇಶ್(32) ಮೃತ ವ್ಯಕ್ತಿ. ಕಳೆದ ಮಂಗಳವಾರ ಮನೆಯಲ್ಲಿ ಯಾರೂ ಇಲ್ಲದ ಸಂದರ್ಭದಲ್ಲಿ ಮನೆಯಲ್ಲಿಯೇ ನೇಣು ಬಿಗಿದುಕೊಂಡು ಸಾವನ್ನಪ್ಪಿದ್ದಾನೆ. ಮನೆಯಲ್ಲಿ ಯಾರೂ ಇಲ್ಲದ ಕಾರಣ ಶವವು ಕೊಳೆತ ರೂಪದಲ್ಲಿ ಗೋಚರಗೊಂಡಿದ್ದನ್ನು ಕಂಡ ನೆರೆಹೊರೆಯರು ತಕ್ಷಣ ಗ್ರಾಮಾಂತರ ಠಾಣೆ  ಪೊಲೀಸರಿಗೆ ದೂರು ನೀಡಿದ್ದಾರೆ. ಈ ಸಂಬಂಧ ಪೊಲೀಸರು ಕ್ರಮ ಕೈಗೊಂಡಿದ್ದಾರೆ.
ವ್ಯಕ್ತಿ ಶವ ಪತ್ತೆ
ಟೇಕಲ್: ಪಟ್ಟಣದ ರೇಲ್ವೆ ನಿಲ್ದಾಣ ಸಮೀಪ ಶುಕ್ರವಾರ ಬೆಳಗ್ಗೆ ಸುಮಾರು 32 ವರ್ಷದ ಅಪರಿಚಿತ ಪುರುಷನೊಬ್ಬ ರೈಲಿಗೆ ಸಿಲುಕಿ ಮೃತಪಟ್ಟಿದ್ದು, ಇನ್ನು ವಿವರ ಲಭ್ಯವಾಗಿಲ್ಲ ಎಂದು ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತಿಳಿಸಿದ್ದಾರೆ.
ಇಂದು ಉಪನ್ಯಾಸ
ಚಿಂತಾಮಣಿ: ಚಿಂತಾಮಣಿ ಶಂಕರ ಸೇವಾ ಸಮಿತಿ ಮತ್ತು ತಾಲೂಕು ಬ್ರಾಹ್ಮಣ ಮಹಾಸಭಾ ಸಂಯುಕ್ತವಾಗಿ ಚಿಂತಾಮಣಿ ಶಂಕರ ಮಠದಲ್ಲಿ ಆಚರಿಸುತ್ತಿರುವ ಶಂಕರ ಜಯಂತಿ ಅಂಗವಾಗಿ ಭಾನುವಾರ ಬೆಳಿಗ್ಗೆ 11 ಗಂಟೆಗೆ ಪ್ರವಚನಕಾರ ತಳಗವಾರ ಟಿ.ಎಲ್. ಆನಂದ್ ಅವರಿಂದ ಶಂಕರ ಭಗವತ್ಪಾದರ ಜೀವನ ವೃತ್ತಾಂಶ ಮತ್ತು ಸಂದೇಶ ಎಂಬ ವಿಷಯವಾಗಿ ಉಪನ್ಯಾಸ ಏರ್ಪಡಿಸಲಾಗಿದೆ.

ರಾಮಪ್ಪ ಅಂತ್ಯಕ್ರಿಯೆ
ಮುಳಬಾಗಲು: ಜೆಡಿಎಸ್ ಹಿರಿಯ ಮುಖಂಡ ಚಿಕ್ಕನಹಳ್ಳಿ ಗ್ರಾಮದ ರಾಮಪ್ಪ(70) ಶುಕ್ರವಾರ ನಿಧನರಾದರು. ಕೋಮುಲ್ ನಿರ್ದೇಶಕ ಕಾಡೇನಹಳ್ಳಿ ನಾಗರಾಜ್, ಶ್ಯಾಮೇಗೌಡ, ಬೇವಹಳ್ಳಿ ಶಂಕರಪ್ಪ ಮತ್ತಿತರರು ಅಂತಿಮ ದರ್ಶನ ಪಡೆದು ಸಂತಾಪ ವ್ಯಕ್ತಪಡಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement