'ಕಾನೂನಿನ ಅರಿವಿದ್ದರೆ ಆರಂಭದಲ್ಲೆ ಅಪರಾಧ ತಡೆ ಸಾಧ್ಯ'
ಬಂಗಾರಪೇಟೆ: ಮನುಷ್ಯನ ಹುಟ್ಟಿನಿಂದ ಸಾಯುವವರೆಗೆ ಕಾನೂನಿನ ಅರಿವಿದ್ದರೆ ಸಾಮಾಜಿಕವಾಗಿ ಸಮೃದ್ಧಿಯಾಗಿ ಸುಖ ಜೀವನ ನಡೆಸಬಹುದು. ಯಾವುದೇ ವ್ಯಕ್ತಿ ಕಾನೂನಿನ ಕಟ್ಟಳೆಗಳನ್ನು ತಿಳಿಯುವುದರ ಮೂಲಕ ಅಪರಾಧಗಳನ್ನು ಪ್ರಾರಂಭಿಕ ಹಂತದಲ್ಲಿಯೇ ತಡೆಗಟ್ಟಬಹುದು ಎಂದು ಪ್ರಧಾನ ಸಿವಿಲ್ ನ್ಯಾಯಾಧೀಶ ಕೆ.ಎಂ. ಬಸವರಾಜಪ್ಪ ಹೇಳಿದರು.
ಅವರು ಭಾನುವಾರ ತಾಲೂಕಿನ ಬೂದಿಕೋಟೆ, ಗುಲ್ಲಹಳ್ಳಿ, ಕಾಮಸಮುದ್ರ ಗ್ರಾಮ ಪಂಚಾಯ್ತಿ ಕೇಂದ್ರಗಳಲ್ಲಿ ರಾಜ್ಯ ಕಾನೂನು ಪ್ರಾಧಿಕಾರ, ಬಂಗಾರಪೇಟೆ ವಕೀಲರ ಸಂಘ ಏರ್ಪಡಿಸಿದ್ದ ಕಾನೂನು ಅರಿವು ನೆರವು ಕಾರ್ಯಕ್ರಮದಲ್ಲಿ ಗುಲ್ಲಹಳ್ಳಿ ಗ್ರಾಮದಲ್ಲಿ ನಡೆದ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡುತ್ತಾ ಕಾನೂನು ಎಂದರೇ ಸಾಮಾನ್ಯ ಜ್ಞಾನವಷ್ಟೇ ಈ ಆಧುನಿಕ ಯುಗದಲ್ಲಿ ಎಲ್ಲರೂ ಕಾನೂನಿನ ಅರಿವನ್ನು ತಿಳಿಯಬೇಕಾಗಿದ್ದು 21 ಶತಮಾನ ಬಂದರೂ ಬಾಲ್ಯವಿವಾಹ, ವರದಕ್ಷಿಣೆಯಂತಹ ಕಾನೂನು ವಿರೋಧ ಚಟುವಟಿಕೆಗಳು ನೆಡಯುತ್ತಿರುವುದು ಸರಿಯಲ್ಲ. ಇದರಿಂದ ಹೆಣ್ಣುಮಕ್ಕಳೇ ಶೋಷಿತರಾಗಿ ಸಮಾಜ ಹೊರೆಯಾಗುವುಂತಹ ಸನ್ನಿವೇಶಕ್ಕೆ ಎಲ್ಲರೂ ಕಾರಣರಾಗುತ್ತಿದ್ದೇವೆ. ಜನರೊಂದಿಗೆ ಹೊಂದಾಣಿಕೆ ಮಾಡಿಕೊಂಡು ಹೋಗುವುದೇ ಕಾನೂನು, ನೆರೆಹೊರೆಯವರೊಂದಿಗೆ ಸೌಹಾರ್ಧಯುತವಾಗಿ ಬದುಕುವುದರಿಂದ ಬಹುತೇಕ ಸಮಸ್ಯೆಗಳನ್ನು ತಡೆಗಟ್ಟಬಹುದು ಎಂದರು.
ಅಪರ ಸಿವಿಲ್ ನ್ಯಾಯಾಧೀಶ ಮರಿಯಪ್ಪ ಮಾತನಾಡಿ ಕಾನೂನು ಕಟ್ಟಲೆಗಳ ಬಿಗಿಯಾಗುತ್ತಿದ್ದರೂ ಅಪರಾಧಗಳು ಜಾಸ್ತಿಯಾಗುತ್ತಿದೆ. ಇದಕ್ಕೆ ಜನರಲ್ಲಿ ಕಾನೂನಿನ ಬಗ್ಗೆ ಅರಿವಿಲ್ಲದೆ ಇರುವುದು ಪ್ರಮುಖ ಕಾರಣ, ಕಾನೂನು ಎಂದರೇ ಇನ್ನೊಬ್ಬರಿಗೆ ತೊಂದರೆಯಾಗದಂತೆ ಬದುಕುವುದಲ್ಲದೇ ಮತ್ತೊಬ್ಬರ ಹಕ್ಕುಗಳನ್ನು ದೌರ್ಜನ್ಯ ಮಾಡಿ ಕಿತ್ತುಕೊಳ್ಳುವುದರಿಂದ ಸಮಸ್ಯೆಗಳು ಹುಟ್ಟುಹಾಕುತ್ತಿದೆ. ಅದಕ್ಕೆ ಸತ್ಯ, ನ್ಯಾಯ ಮಾರ್ಗಗಳಿಂದ ನಾವು ಬದುಕು ಸಾಗಿಸಿದರೆ ಉತ್ತಮ ಸಮಾಜವನ್ನೇ ನಿರ್ಮಿಸಬಹುದು ಎಂದರು. ವಕೀಲರಾದ ಜಯಪ್ರಕಾಶ್, ಅಶ್ವಥ ನಾರಾಯಣಮೂರ್ತಿ ಅಮರೇಶ್, ಎಸ್. ನಾರಾಯಣಪ್ಪ, ಕೆ.ಸಿ. ಪ್ರಸಾದ್, ಗಾಯಿತ್ರಿ, ಶಶಿಕುಮಾರ್ ಸಿಡಿಪಿಒ ರಾಮನ್ ಮಾತನಾಡಿದರು.
ವಕೀಲರಾದ ಎಸ್. ರಾಜಗೋಪಾಲ್, ದಾಕ್ಷಾಯಿಣಿ, ಬೂದಿಕೋಟೆ ಗ್ರಾ.ಪಂ ಅಧ್ಯಕ್ಷೆ ನಾಗವೇಣಿ, ಕಾಮಸಮುದ್ರ ಗ್ರಾ.ಪಂ ಅದ್ಯಕ್ಷೆ ಗೌರಮ್ಮ ನಾರಾಯಣಪ್ಪ, ಸಬ್‌ಇನ್ಸ್‌ಪೆಕ್ಟರ್ ವಸಂತಕುಮಾರ್, ಗುಲ್ಲಹಳ್ಳಿ ಗ್ರಾ.ಪಂ ಪಿ.ಡಿ.ಓ ರಾಧಾಕೃಷ್ಣ, ಕಾಮಸಮುದ್ರ ಪಿ.ಡಿ.ಓ ಮಂಜುನಾಥ, ಕಾರ್ಯದರ್ಶಿ ಸೋಮಶೇಖರ್ ಹಾಜರಿದ್ದರು.