ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕೋಲಾರ

ಕೋಮುಲ್ ಚುನಾವಣೆಗೆ ಸಿದ್ಧತೆ

Vishwanath S
Updated On : 5 May 2014, 12:44 pm

ಕೋಲಾರ: ಮೇ 26ರಂದು ನಡೆಯಲಿರುವ ಕೋಲಾರ-ಚಿಕ್ಕಬಳ್ಳಾಪುರ ಜಿಲ್ಲಾ ಹಾಲು ಒಕ್ಕೂಟದ ಚುನಾವಣೆಗೆ ಜೆಡಿಎಸ್ ಸಿದ್ಧತೆ ನಡೆಸಿದೆ.
ಮಾಜಿ ಸಚಿವ ಕೆ. ಶ್ರೀನಿವಾಸಗೌಡ, ಜೆಡಿಎಸ್ ಜಿಲ್ಲಾಧ್ಯಕ್ಷ ವೆಂಕಟಶಿವಾರೆಡ್ಡಿ ಹಾಗೂ ಪಕ್ಷದ ಮುಖಂಡರು ಕೋಚಿಮುಲ್ ಆಡಳಿತವನ್ನು ಹಿಡಿಯಲು ಕಾರ್ಯತಂತ್ರ ರೂಪಿಸುತ್ತಿದ್ದಾರೆ. ಇದರ ಭಾಗವಾಗಿ ಭಾನುವಾರ ನಗರದಲ್ಲಿ ಜೆಡಿಎಸ್‌ನಿಂದ ಕೋಲಾರ ತಾಲೂಕು ಹಾಲು ಉತ್ಪಾದಕರ ಸಹಕಾರ ಸಂಘಗಳ ಅಧ್ಯಕ್ಷ ಹಾಗೂ ಸದಸ್ಯರ ಸಭೆ ಆಯೋಜಿಸಲಾಗಿತ್ತು. ಕೋಲಾರ ತಾಲೂಕಿನಿಂದ ಕೋಚಿಮುಲ್‌ಗೆ ಒಬ್ಬ ನಿರ್ದೇಶಕರ ಆಯ್ಕೆಯಾಗಬೇಕಾಗಿದ್ದು ಜೆಡಿಎಸ್‌ನಿಂದ ಸ್ಪರ್ಧಿಸಲು 7 ಮಂದಿ ಅಪೇಕ್ಷಿತರಾಗಿದ್ದಾರೆ.
ಮಾಜಿ ಸಚಿವ ಶ್ರೀನಿವಾಸಗೌಡರ ಸಹೋದರ ಕುಡುವನಹಳ್ಳಿ ಶಿವಣ್ಣ, ಛತ್ರಕೋಡಿಹಳ್ಳಿ ರಾಮಕೃಷ್ಣೇಗೌಡ, ಎಲವಾರ ಸೊಣ್ಣೇಗೌಡ, ಕೆಂದಟ್ಟಿ ಚಂದ್ರೇಗೌಡ, ಮಡಿವಾಳ ರಾಜಣ್ಣ, ಹೊಸಮಟ್ನಹಳ್ಳಿ ವೆಂಕಟೇಶ್‌ಗೌಡ ಹಾಗೂ ಎಲಚಿಪುರ ನಾಗರಾಜು ಸ್ಪರ್ಧಿಸಲು ಪ್ರಬಲ ಪೈಪೋಟಿ ನಡೆಸಿದ್ದಾರೆ.
ಸಭೆಯಲ್ಲಿ ಭಾಗವಹಿಸಿದ್ದ ಈ ಏಳು ಮಂದಿ ಆಕಾಂಕ್ಷಿಗಳು ಚುನಾವಣೆಗೆ ಸ್ಪರ್ಧಿಸಲು ಪಟ್ಟು ಹಿಡಿದಿದ್ದರಿಂದ ಒಮ್ಮತ ಮೂಡಿಸಲು ಮುಖಂಡರು ಯತ್ನಿಸಿ ವಿಫಲವಾದ ಹಿನ್ನಲೆಯಲ್ಲಿ ಮತ್ತೆ ಮೇ 7ರಂದು ಮಾಜಿ ಸಚಿವ ಕೆ.ಶ್ರೀನಿವಾಸಗೌಡರ ಮನೆಯಲ್ಲಿ ಆಕಾಂಕ್ಷಿಗಳ ಸಭೆ ಕರೆಯಲಾಗಿದೆ. ಜೆಡಿಎಸ್ ಕೋಚಿಮುಲ್ ಅಧಿಕಾರ ಹಿಡಿಯಬೇಕಾದರೆ ಒಮ್ಮತದಿಂದ ಚುನಾವಣೆ ಎದುರಿಸಿದರೆ ಮಾತ್ರ ಸಾಧ್ಯ, ಪೈಪೋಟಿ ಬೇಡ, ಆಕಾಂಕ್ಷಿಗಳು ತಾವೇ ಒಂದು ನಿರ್ಧಾರಕ್ಕೆ ಬನ್ನಿ ಎಂದು ಶ್ರೀನಿವಾಸಗೌಡರು ಸಲಹೆ ನೀಡಿದರು.
ಎಲ್ಲಾ ಆಕಾಂಕ್ಷಿಗಳು ಕೆಲ ನಿಮಿಷ ಅಂತರಿಕ ಸಭೆ ಸೇರಿ ಚರ್ಚಿಸಿದರಾದರೂ ಒಮ್ಮತ ಮೂಡದ ಹಿನ್ನಲೆಯಲ್ಲಿ ಮೇ 7ಕ್ಕೆ ಸಭೆ ಮುಂಡೂಡಲಾಯಿತು.
ಸಭೆಯಲ್ಲಿ ಜೆಡಿಎಸ್ ಜಿಲ್ಲಾಧ್ಯಕ್ಷ ವೆಂಕಟಶಿವಾರೆಡ್ಡಿ, ಕಾರ್ಯಾಧ್ಯಕ್ಷ ಬಣಕನಹಳ್ಳಿ ನಟರಾಜ್, ಜಿಪಂ ಸದಸ್ಯೆ ಮಂಗಮ್ಮ ಮುನಿಸ್ವಾಮಿ, ಕೋಮುಲ್ ನಿರ್ದೇಶಕ ಮದ್ದೇರಿ ರಾಮೇಗೌಡ, ಕುರ್ಕಿ ರಾಜ ರಾಜೇಶ್ವರಿ, ಜಿಪಂ ಮಾಜಿ ಸದಸ್ಯ ನಾಗನಾಳ ಸೋಮಣ್ಣ, ನಗರಸಭೆ ಮಾಜಿ ಅಧ್ಯಕ್ಷ ರವೀಂದ್ರ ಕುಮಾರ್ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement