ತತ್ವಜ್ಞಾನಿ ಶಂಕರರ ಸ್ಮರಣೆ
ನಗರದ ಕೋಟೆ ಪ್ರದೇಶದಲ್ಲಿನ ಶಂಕರ ಮಠದಲ್ಲಿ ಶಂಕರ ಜಯಂತಿ ಅಂಗವಾಗಿ ವಿಶೇಷ ಪೂಜೆಗಳು ನಡೆಯಿತಲ್ಲದೆ ಶಂಕರರ ಮೂರ್ತಿಯನ್ನು ಭವ್ಯವಾಗಿ ಅಲಂಕರಿಸಿ ನಗರದ ಮುಖ್ಯ ಬೀದಿಗಳಲ್ಲಿ ಮೆರವಣಿಗೆ ನಡೆಸಲಾಯಿತು
ಶಂಕರ ಮಠದಲ್ಲಿ ಭವ್ಯ ರಥೋತ್ಸವ
ಕ.ಪ್ರ.ವಾರ್ತೆ , ಕೋಲಾರ , ಮೇ 4
ದಾರ್ಶನಿಕರ ಮತ್ತು ತತ್ವಜ್ಞಾನಿಗಳ ದಿನವನ್ನು ಜಿಲ್ಲಾಡಳಿತ ಮರೆತರೂ ನಗರದ ಶಂಕರ ಸೇವಾ ಸಂಘ ಟ್ರಸ್ಟ್ ವತಿಯಿಂದ ಭಾನುವಾರ ನಗರದಲ್ಲಿ ಶಂಕರಾಚಾರ್ಯರ ಭವ್ಯ ರಥೋತ್ಸವ ಶ್ರದ್ಧಾಭಕ್ತಿಗಳಿಂದ ನಡೆಸಿತು.
ನಗರದ ಕೋಟೆ ಪ್ರದೇಶದಲ್ಲಿನ ಶಂಕರ ಮಠದಲ್ಲಿ ಶಂಕರ ಜಯಂತಿ ಅಂಗವಾಗಿ ವಿಶೇಷ ಪೂಜೆಗಳು ನಡೆಯಿತಲ್ಲದೆ ಶಂಕರರ ಮೂರ್ತಿಯನ್ನು ಭವ್ಯವಾಗಿ ಅಲಂಕರಿಸಿ ನಗರದ ಮುಖ್ಯ ಬೀದಿಗಳಲ್ಲಿ ಮೆರವಣಿಗೆ ನಡೆಸಲಾಯಿತು.
ತೊಟ್ಲಿ ಗ್ರಾಮದ ರಮೇಶ್ ತಂಡದ ವಾದ್ಯ ಮೇಳಗಳೊಂದಿಗೆ ಮೆರವಣಿಗೆ ಸಾಗಿ ಬಂತು. ನಗರದ ಕಾಲೇಜು ವೃತ್ತ, ಬ್ರಾಹ್ಮಣರ ಬೀದಿ, ದೊಡ್ಡಪೇಟೆ , ಕಾಳಮ್ಮ ಗುಡಿ ರಸ್ತೆ ಮೂಲಕ ರಥ ನಗರದಲ್ಲಿ ಸಂಚರಿಸಿ ಶಂಕರಮಠವನ್ನು ಸೇರಿತು.
ದೇಶ ಪರ್ಯಟನೆ ಮಾಡಿ ಅಖಂಡ ಭಾರತ ಕಲ್ಪನೆಯನ್ನು ಸಾಕಾಗೊಳಿಸಿದ ಕೀರ್ತಿ ಶಂಕರರದು ಎಂದ ಅವರು, ಷಟ್ಮಠಗಳ ಸ್ಥಾಪನೆಯೊಂದಿಗೆ ಯಾವುದೇ ರೀತಿಯಲ್ಲೂ ದೇವರನ್ನು ಪೂಜಿಸಬಹುದು ಎಂದು ಸಾರಿದ ಅದ್ವೈತ ಸಿದ್ಧಾಂತದ ಪ್ರತಿಪಾದಕರಾದರು ಎಂದು ಸ್ಮರಿಸಲಾಯಿತು.
ಮಹಿಳಾ ಮಂಡಳಿ ಮತ್ತು ಶಂಕರ ಸೇವಾ ಸಮಿತಿ ವತಿಯಿಂದ ಸಹಯೋಗದಲ್ಲಿ ಸಾಮೂಹಿಕ ಶಂಕರ ಸ್ತೋತ್ರ ಗಾಯನ, ಅನ್ನದಾಸೋಹ ಏರ್ಪಡಿಸಲಾಗಿತ್ತು. ಶಂಕರಸೇವಾ ಸಮಿತಿ ಅಧ್ಯಕ್ಷ ಕಾರ್ತೀಕ್ ಕೃಷ್ಣಮೂರ್ತಿ, ಖಜಾಂಚಿ ಕಿಟ್ಟಪ್ಪ, ಕಾರ್ಯದರ್ಶಿ ಜೆ.ಎನ್.ರಾಮಕೃಷ್ಣ, ಡಾ. ಕೃಷ್ಣಮೂರ್ತಿ, ಅಚ್ಚುತಾ, ಡಿಸಿ ಕಚೇರಿಯ ವೆಂಕಣ ಇದ್ದರು.
ಮಾಲೂರಲ್ಲಿ ಶಂಕರಾಚಾರ್ಯ ಸಂಸ್ಕೃತಿ
ಮಾಲೂರು: ಹಿಂದೂ ಸಂಸ್ಕೃತಿಯನ್ನು ಪ್ರಂಪಚಕ್ಕೆ ಪರಿಚಯಿಸಿದ ಶ್ರೀ ಶಂಕರಾಚಾರ್ಯ ಹಾಗೂ ರಾಮಾನುಚಾರ್ಯರು ತಮ್ಮ ಸಾಹಿತ್ಯದ ಮೂಲಕ ಹಿಂದೂ ಧರ್ಮದ ಸುಧಾರಕರಾಗಿದ್ದರು ಎಂದು ಚಂಪಕ ಧಾಮದ ಜ್ಯೋತಿಷಿ ಅಂಜನ್ ಕುಮಾರ್ ಹೇಳಿದರು. ಇಲ್ಲಿನ ಕೋಲಾರ ರಸ್ತೆಯ ಚಂಪಕಧಾಮ ಮಂದಿರದಲ್ಲಿ ಭಾನುವಾರ ಆಯೋಜಿಸಿದ್ದ ಶ್ರೀ ಶಂಕರಚಾರ್ಯ ಹಾಗೂ ಶ್ರೀ ರಾಮಾನುಚಾರ್ಯರ ಜಯಂತಿಯಲ್ಲಿ ಮಾತನಾಡಿ, ಸಾಮೂಹಿಕ ಉಪನಯನ ಕಾರ್ಯಕ್ರಮದಲ್ಲಿ ಮೂವರು ವಟುಗಳಿಗೆ ಬ್ರಹ್ಮೋಪದೇಶ ನೀಡಲಾಯಿತು. ನಂತರ ಪಲ್ಲಕ್ಕಿ ಉತ್ಸವ ನಡೆಯಿತು.
ಚಿಕ್ಕಬಳ್ಳಾಪುರ ಜಯಂತ್ಯುತ್ಸವ
ಚಿಕ್ಕಬಳ್ಳಾಪುರ: ಶ್ರೀ ಶಂಕರ ಭಗವತ್ಪಾದಾಚಾರ್ಯರ ಜಯಂತ್ಯುತ್ಸವದ ಅಂಗವಾಗಿ ಗಾಯಿತ್ರಿ ಸೇವಾ ಸಮಿತಿ ಮತ್ತು ಮಹಿಳಾ ಮಂಡಳಿ ಸಮಿತಿ ಆಶ್ರಯದಲ್ಲಿ ಗಾಯಿತ್ರಿದೇವಿ ಸಮೇತ ತ್ರಿಮತಾಚಾರ್ಯರ ಉತ್ಸವವು ನಡೆಯಿತು. ನಗರದ ಬಸವನಗುಡಿ ರಸ್ತೆಯಲ್ಲಿಯರುವ ಸ್ಥಾನಕ ನಂದೀಶ್ವರಸ್ವಾಮಿ ದೇವಾಲಯದಲ್ಲಿ ವಿಶೇಷ ಪೂಜೆ ನಡೆಸಿದ ನಂತರ ಊರಿನ ಪ್ರಮುಖ ಬೀದಿಗಳಲ್ಲಿ ವಿಶೇಷ ಹೂವಿನ ಪಲ್ಲಕ್ಕಿ ಉತ್ಸವ ಕೈಗೊಳ್ಳಲಾಯಿತು.ನಾದಸ್ವರ ವೇದಘೋಷ ಸೇರಿದಂತೆ ವಿವಿಧ ಭಜನಾ ಮಂಡಳಿಗಳು, ಶ್ರೀ ಗಾಯಿತ್ರಿ ಸೇವಾ ಸಮಿತಿ ಮತ್ತು ಮಹಿಳಾ ಮಂಡಳಿ ಸಮಿತಿ ಸದಸ್ಯರು ಸೇರಿದಂತೆ ಹಲವರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಮಾಲೂರಲ್ಲಿ ಅದ್ಧ್ದೂರಿ ಜಯಂತಿ
ಮಾಲೂರು: ಇಲ್ಲಿನ ಬ್ರಾಹ್ಮಣ ಸಂಘದ ಶ್ರೀ ಶಂಕರ ಜಯಂತಿ ಅದ್ಧ್ದೂರಿಯಾಗಿ ನಡೆಯಿತು. ಬೆಳಿಗ್ಗೆ ಶಂಕರನಾರಾಯಣಸ್ವಾಮಿಗೆ ಅಭಿಷೇಕ, ಅರ್ಚನೆ ನೆಡೆಯಿತು. ವಿಪ್ರ ಬಾಂಧವರಿಂದ ವೇದ ಪಠಣ ಹಾಗೂ ಸೌಂದರ್ಯ ಲಹರಿ ಸಂಚಾಲನಾ ಸಮಿತಿ ರವರಿಂದ ಶ್ರೀ ಶಂಕರ ಸ್ತ್ರೋತ್ರ ಪಠಣ ನಡೆಯಿತು.ಬಿ.ಸಿ. ವೆಂಕಟರಮಣ, ಅಶ್ವಥ್ನಾರಾಯಣ್ಶಾಸ್ತ್ರಿ ಇದ್ದರು.
ಚಿಂತಾಮಣಿಯಲ್ಲಿ ಉಪನ್ಯಾಸ
ಚಿಂತಾಮಣಿ: ಶಾಸ್ತ್ರಗಳಿಂದ ಭಗವಂತನ ಮೇಲೆ ನಂಬಿಕೆ ಮೂಡದಿದ್ದರೆ ಅಧ್ಯಾತ್ಮ ತತ್ವಗಳಿಗೆ ಅರ್ಥವಿಲ್ಲ ಎಂದು ಸಾರಿದ ಶಂಕರಾಚಾರ್ಯರ ಭೋಧನೆಗಳು ಸರ್ವಕಾಲಿಕ ಎಂದು ಪ್ರವಚನಕಾರ ತಳಗವಾರ ಟಿ.ಎಲ್. ಆನಂದ್ ಅಭಿಪ್ರಾಯಪಟ್ಟರು. ಚಿಂತಾಮಣಿ ಶಂಕರ ಸೇವಾ ಸಮಿತಿ ಮತ್ತು ತಾಲೂಕು ಬ್ರಾಹ್ಮಣ ಮಹಾಸಭಾ ಆಶ್ರಯದಲ್ಲಿ ಶಂಕರ ಮಠದಲ್ಲಿ ಆಯೋಜಿಸಿದ್ದ ಶ್ರೀ ಶಂಕರ ಭಗವತ್ಪಾದರ ಜೀವನ ವೃತ್ತಾಂತ ಮತ್ತು ಸಂದೇಶ ವಿಷಯವಾಗಿ ಉಪನ್ಯಾಸ ನೀಡಿ, ಶಂಕರಾಚಾರ್ಯರ ಸಂದೇಶಗಳು ಹಿಮಾಲಯದಂತೆ ಮಹೋನ್ನತವಾದವೆಂದರು. ಭ್ರಾಹ್ಮಣ ಸಂಘದ ಅಧ್ಯಕ್ಷ ವಕೀಲ ಬಿ.ಆರ್. ಶ್ರೀನಾಥ್ ಸುರೇಶ್, ಅಶ್ವತ್ಥ್, ರೂಪಶ್ರೀ, ಮುಕುಂದ ಇದ್ದರು.
ಶ್ರೀರಾಮಾನುಜ ವಿದ್ಯಾಪೀಠ ಉದ್ಘಾಟನೆ
ಕೋಲಾರ: ನಗರದ ಖಾದ್ರಿಪುರದಲ್ಲಿನ ಕೇಶವ ನಗರದಲ್ಲಿ ಭಾನುವಾರ ಶ್ರೀಭಗವತ್ ರಾಮಾನುಜಾಚಾರ್ಯರ 997ನೇ ಜಯಂತಿಯನ್ನು ಜಿಲ್ಲಾ ಶ್ರೀ ವೈಷ್ಣವ ಸಂಘದಿಂದ ಆಚರಿಸಲಾಯಿತು.
ಇದೇ ಸಂದರ್ಭದಲ್ಲಿ ಶ್ರೀ ರಾಮಾನುಜಾ ವಿಧ್ಯಾ ಪೀಠದ ಉದ್ಘಾಟನೆ ನೆರವೇರಿತು. ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ವೈಷ್ಣವ ಸಮುದಾಯದವರಿಗೆ ಶ್ರೀರಾಮಾನುಜಾ ಚಾರ್ಯರ ಭಾವಚಿತ್ರವನ್ನು ಉಚಿತವಾಗಿ ವಿತರಣೆ ಮಾಡಲಾಯಿತು. ಸಂಘದ ಅಧ್ಯಕ್ಷ ಪದ್ಮನಾಭಚಾರ್, ಪ್ರಧಾನ ಕಾರ್ಯದರ್ಶಿ ಮಂಜುನಾಥಚಾರ್, ಖಜಾಂಚಿ ನಾರಾಯಣಸ್ವಾಮಿ ಹಾಗೂ ಮಹಿಳಾ ನಿರ್ದೇಶಕಿ ಪದ್ಮಾವತಿ ಇದ್ದರು.
ವಾರ್ಷಿಕೋತ್ಸವ
ಮಾಲೂರು: ತಾಲೂಕಿನ ದೊಡ್ಡ ಕುಂತೂರು ಗ್ರಾಮದ ಶ್ರೀ ಭೀರೇಶ್ವರಸ್ವಾಮಿಯ 14 ನೇ ವಾರ್ಷಿಕೋತ್ಸವ ಭಾನುವಾರ ಅದ್ಧೂರಿಯಾಗಿ ನಡೆಯಿತು. ಸುತ್ತಮುತ್ತಲ ಗ್ರಾಮದ ಮುತ್ತೈದೆಯರು ಬೆಳಿಗಿನಿಂದಲೇ ದೇವಾಲಯಕ್ಕೆ ಪೂರ್ಣ ಕುಂಭದೂಂದಿಗೆ ಭೇಟಿ ನೀಡಿ ದೀಪದಾರತಿ ಮಾಡಿದರು. ಓಂ ಪೂಜೆ ಕರಗವನ್ನು ದೇವಾಲಯಕ್ಕೆ ಧಾರ್ಮಿಕ ವಿಧಿವಿಧಾನದೂಂದಿಗೆ ದೇವಾಲಯಕ್ಕೆ ತರಲಾಯಿತು. ಮುತ್ತೈದೆಯರಿಗೆ ಬಳೆ ತೂಡಿಸುವ ವ್ಯವಸ್ಥೆ ಮಾಡಿದ್ದರು. ತತ್ವ ಪೂಜೆ ನಡೆಯಿತು. ಎಚ್. ಕೃಷ್ಣಪ್ಪ, ಗುಟ್ಟಪ್ಪ, ಅಣ್ಣಯ್ಯಪ್ಪ, ಕೆ.ಕೆ. ಕೃಷ್ಣಪ್ಪ ಇದ್ದರು.