ಬೆಂಕಿ ಬಿದ್ದಾಗ ಬಾವಿ ತೋಡುವ ಸರ್ಕಾರ!
ಶಿಡ್ಲಘಟ್ಟ: ತಾಲೂಕಿನಾದ್ಯಂತ ಕುಡಿಯುವ ನೀರಿನ ಅಭಾವ ಎದರಾಗಿದ್ದು, ಜನ, ಜಾನುವಾರು, ಗಿಡ ಮರಗಳೂ ನೀರಿಲ್ಲದೆ ಪರಿತಪಿಸುವಂತಾಗಿದೆ.
1,300 ಅಡಿ ಆಳ ಸೇರಿರುವ ನೀರನ್ನು ಮೇಲೆತ್ತಲು ವಿದ್ಯುತ್ ಸಮಸ್ಯೆ ಬೃಹದಾಕಾರವಾಗಿದ್ದು ಕೈಗೆ ಸಿಕ್ಕ ನೀರು ಬಾಯಿಗೆ ಬರದಂತಾಗಿದೆ. ತಾಲೂಕಿನಾದ್ಯಂತ ಶೇ.80ಕ್ಕೂ ಅಧಿಕ ಕೊಳವೆ ಬಾವಿಗಳು ಒಣಗಿವೆ. ಜನಪ್ರತಿನಿಧಿಗಳು ನೀರಿನ ಸಮಸ್ಯೆ ಬಗ್ಗೆ ವಹಿಸಿರುವ ನಿರ್ಲಕ್ಷ್ಯದಿಂದ ಜನ ಕೆಂಡಾಮಂಡಲರಾಗಿದ್ದಾರೆ. ಮುಂದಾಲೋಚನೆ ಇಲ್ಲದ ಅಧಿಕಾರಿಗಳು ಬೇಸಿಗೆ ಬಂದಾಗ ಮಾತ್ರ ಕುಡಿಯುವ ನೀರಿನ ಬಗ್ಗೆ ಗಮನ ಹರಿಸುತ್ತಿದ್ದು, ಬಾಯಾರಿದಾಗ ಬಾವಿ ತೋಡುವ ಪ್ರಯತ್ನ ಮಾಡುತ್ತಿರುವುದು ಜನರ ಅಕ್ರೋಶಕ್ಕೆ ಕಾರಣವಾಗಿದೆ.
ತಾಲೂಕಿನಾದ್ಯಂತ 40ಕ್ಕೂ ಅಧಿಕ ಗ್ರಾಮಗಳಲ್ಲಿ ತೀವ್ರ ಕುಡಿಯುವ ನೀರಿನ ಸಮಸ್ಯೆ ಉಂಟಾಗಿದ್ದು, 29 ಗ್ರಾಮಗಳಿಗೆ ಟ್ಯಾಂಕರ್ ಮೂಲಕ ನೀರು ಸರಬರಾಜು ಮಾಡಲಾಗುತ್ತಿದೆ. 11 ಖಾಸಗಿ ಬೋರ್ವೆಲ್ಗಳನ್ನು ವಶಕ್ಕೆ ಪಡೆದು 90 ಹಳ್ಳಗಳಿಗೆ ಕುಡಿಯುವ ನೀರಿನ ವ್ಯವಸ್ಥೆ ಕೈಗೊಳ್ಳಲಾಗಿದೆ. ತೀವ್ರ ಸಮಸ್ಯೆ ಎದರಿಸುತ್ತಿರುವ 29 ಗ್ರಾಮಗಳಿಗೆ ಟ್ಯಾಂಕರ್ ಮೂಲಕ 2 ದಿನಕ್ಕೊಮ್ಮೆ ನೀರು ಸರಬರಾಜು ಮಾಡಲಾಗುತ್ತಿದೆ. 5 ರಿಗ್ ಯಂತ್ರಗಳು ಸತತವಾಗಿ ಕೊಳವೆ ಬಾವಿಗಳನ್ನು ಕೊರೆಯುವ ಕೆಲಸ ಮಾಡುತ್ತಿವೆ.
ಕುಡಿಯುವ ನೀರಿನ ವಿಚಾರವಾಗಿ ಶಾಸಕ ಎಂ ರಾಜಣ್ಣರ ಅಧ್ಯಕ್ಷತೆಯಲ್ಲಿ ಇತ್ತೀಚೆಗೆ ನಡೆದ ಟಾಸ್ಕ್ಫೋರ್ಸ್ ಸಭೆಯಲ್ಲಿ ರು. 10.5 ಕೋಟಿ ವೆಚ್ಚದ ನೀರಿನ ಯೋಜನೆಗೆ ಜಿಲ್ಲಾಧಿಕಾರಿಗಳಿಗೆ ಪ್ರಸ್ತಾವನೆ ಸಲ್ಲಿಸಲಾಗಿದ್ದು, ರು. 8.5ಕೋಟಿ ಬಿಡುಗಡೆ ಮಾಡಲಾಗಿದೆ. ಶೇ.90ಕ್ಕೂ ಅಧಿಕ ಹಳ್ಳಿಗಳಲ್ಲಿ ನೀರಿನ ಸಮಸ್ಯೆ ಇದ್ದು ಕುಡಿಯುವ ನೀರಿನ ಯೋಜನೆಗಳು ಆಮೆ ವೇಗದಲ್ಲಿ ನಡೆಯುತ್ತಿವೆ. ನೀರು ಸಿಕ್ಕಿರುವ ಕೊಳವೆ ಬಾವಿಗಳಿಗೆ ವಿದ್ಯುತ್ ಸಂಪರ್ಕವಿಲ್ಲದೆ, 30 ವರ್ಷಗಳ ಹಿಂದಿನ ಪೈಪ್ ಲೈನ್ ದುರಸ್ತಿ ಮಾಡದೆ ಇರುವುದು ವಾಸ್ತವಾಂಶ.
ಒಟ್ಟು 131 ಗ್ರಾಮಗಳಲ್ಲಿ ನೀರಿನ ಸಮಸ್ಯೆ ತಲೆದೋರಿದ್ದು, 177 ಕೊಳವೆ ಬಾವಿಗಳು, 96 ಪಂಪು ಮೋಟಾರುಗಳು, 90 ಸಾವಿರ ಮೀಟರ್ ಪೈಪ್ ಲೈನ್ಗಾಗಿ ಒಟ್ಟು ರು. 10.31 ಕೋಟಿ ಕ್ರಿಯಾ ಯೋಜನೆ ಸಿದ್ಧಪಡಿಸಿ ಜಿಲ್ಲಾಧಿಕಾರಿಗಳಿಗೆ ಸಲ್ಲಿಸಲಾಗಿದೆ. ಹೊಸ ಕೊಳವೆ ಬಾವಿಗಳನ್ನು ಕೊರೆಸಲು ಹಾಗೂ ಪಂಪು ಹೌಸ್ ನಿರ್ಮಾಣ ಮಾಡಲಷ್ಟೆ ಹಣ ಲಬ್ಯವಿದ್ದು, ಇತರೆ ಸಲಕರಣೆಗಳಿಗೆ ಹಣ ಇಲ್ಲವೆಂದು ಅಧಿಕಾರಿಗಳು ತಮ್ಮ ಅಸಹಾಯಕತೆಯನ್ನು ಕನ್ನಡಪ್ರಭಕ್ಕೆ ತಿಳಿಸಿದ್ದಾರೆ. ಸಾವಿರ ಅಡಿಗಳ ಕೊಳವೆ ಬಾವಿಗಳಿಗೆ ಸರ್ಕಾರ ರು. 1.75 ಲಕ್ಷ ನೀಡುತ್ತಿದ್ದು, ಈ ಹಣ ಸಾಕಾಗುತ್ತಿಲ್ಲವೆಂದು ಪಂಪು ಮೋಟಾರ್ ಅಳವಡಿಸಲು ಹೆಚ್ಚುವರಿಯಾಗಿ ರು. 2 ಲಕ್ಷ ವೆಚ್ಚ ತಗುಲುತ್ತಿದೆ. ಇತರೆ ಮೂಲಗಳಿಂದ ಹಣ ಸರಿತೂಗಿಸುತ್ತಿರುವುದಾಗಿ ಹೊಣೆ ಹೊತ್ತ ಅಧಿಕಾರಿಗಳು ತಿಳಿಸಿದ್ದಾರೆ.
ಕೈಗೊಂಡಿರುವ ಯೋಜನೆಗಳು
110, ಬೇಕಾದ ಹಣ ರು. 973 ಲಕ್ಷ, 85 ಕಾಮಗಾರಿಗಳು ಪೂರ್ಣಗೊಂಡಿದ್ದು, 25 ಪ್ರಗತಿಯಲ್ಲಿವೆ. ಜನವರಿಯಲ್ಲಿ ಬಿಡಗಡೆ ಮಾಡಲಾದ ಹಣ ರು. 122.55 ಲಕ್ಷ, ಸಣ್ಣ ನೀರಾವರಿ ಒಟ್ಟು ಕಾಮಗಾರಿಗಳು 16, ಪೂರ್ಣಗೊಂಡಿರುವ ಕಾಮಗಾರಿಗಳು 10, ಪ್ರಗತಿಯಲ್ಲಿರುವುದು 6, 2013-14ರ ಒಟ್ಟು ಕಾಮಗಾರಿಗಳ ಸಂಖ್ಯೆ 20, ಪೂರ್ಣಗೊಂಡಿರುವ ಕಾಮಗಾಗಿರಗಳು 3, ಪ್ರಗತಿಯಲ್ಲಿರುವುದು 17.
ಟಾಸ್ಕ್ಫೋರ್ಸ್ ಕಾಮಗಾರಿಗಳ ವಿವರ
- ಗೊರಮಡುಗು ರು. 3.30 ಲಕ್ಷ
- ತಲದುಮ್ಮನ ಹಳ್ಳಿ ರು. 2 ಲಕ್ಷ,
- ಕೇಶವಾಪುರ ರು. 3.20 ಲಕ್ಷ,
- ಚೊಕ್ಕಂಡ ಹಳ್ಳಿ ರು. 1.90 ಲಕ್ಷ,
- ಅಮರಾವತಿ ರು. 2 ಲಕ್ಷ
- ಗುಡಿ ಹಳ್ಳಿ ರು. 1.80 ಲಕ್ಷ
- ಆಮೂರ ತಿಮ್ಮನ ಹಳ್ಳಿ ರು. 1.80 ಲಕ್ಷ
- ಒಟ್ಟು ರು. 16 ಲಕ್ಷಗಳಲ್ಲಿ ಕಾಮಗಾರಿಗಳನ್ನು ಪೂರ್ಣಗೊಳಿಸಲಾಗಿದೆ.
-ರೂಪಸಿ ರಮೇಶ್