ರಾಜಕೀಯ ಪಕ್ಷಗಳ ನಿರ್ಬಂಧ ಕೋರಿ ಆಯೋಗಕ್ಕೆ ಒತ್ತಾಯ
ಕೋಲಾರ: ರಾಜಕೀಯ ಪಕ್ಷಗಳಿಂದ ಸಾರ್ವಜನಿಕ ನೆಮ್ಮದಿ ಭಂಗ ಆಗುತ್ತಿರುವ ಹಿನ್ನೆಲೆಯಲ್ಲಿ ರಾಜಕೀಯ ಪಕ್ಷ ಚಟುವಟಿಕೆಗಳನ್ನು ನಿರ್ಬಂಧಿಸಬೇಕೆಂದು ಒತ್ತಾಯಿಸಿ ಕೋಲಾರ ಲೋಕಸಭಾ ಪಕ್ಷೇತರ ಅಭ್ಯರ್ಥಿ ಕೆ. ನರೇಂದ್ರಬಾಬು ಇಲ್ಲಿನ ಚುನಾವಣಾಧಿಕಾರಿ ಕಚೇರಿ ತಹಶೀಲ್ದಾರ್ ರಮೇಶ್ ಮೂಲಕ ಕೇಂದ್ರ ಚುನಾವಣಾ ಆಯೋಗಕ್ಕೆ ಮನವಿ ಸಲ್ಲಿಸಿದರು.
ರಾಜಕೀಯ ಪಕ್ಷಗಳ ಮುಖಂಡರು ಪ್ರತಿ ಸ್ಪರ್ಧಿಗಳ ಮತ್ತು ಪ್ರತಿ ಪಕ್ಷಗಳ ಹೆಸರಿಗೆ ಕಳಂಕ ತರುವುದಕ್ಕಾಗಿ, ಜನಮನದಲ್ಲಿ ಅವರ ಬಗ್ಗೆ ಆಕ್ರೋಶ ಮೂಡಿಸುವಂತಹ ಹೇಳಿಕೆಗಳನ್ನು ನೀಡುತ್ತಿದ್ದಾರೆ. ವಿವಿಧ ಹಗರಣಗಳಲ್ಲಿ ಸಿಲುಕಿಸಲು ವ್ಯವಸ್ಥಿತ ಪಿತೂರಿ ನಡೆಸುತ್ತಿದ್ದಾರೆ, ಸುಳ್ಳು ವದಂತಿಗಳನ್ನು ಹಬ್ಬಿಸುತ್ತಿರುವುದರಿಂದ ಚುನಾವಣಾ ಆಯೋಗವು ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ್ಳಬೇಕೆಂದು ತಿಳಿಸಿದ್ದಾರೆ.
ಒಮ್ಮೆ ರಾಜಕೀಯ ಪಕ್ಷಗಳ ಅನಿವಾರ್ಯತೆ ನಮ್ಮಲ್ಲಿತ್ತು. ಆದರೆ ಈಗ ರಾಜಕೀಯ ಪಕ್ಷಗಳ ನಿವಾರಣೆ ಅನಿವಾರ್ಯವಾಗಿದೆ. ರಾಜಕೀಯ ಪಕ್ಷ ಮುಖಂಡರು ತೆಗೆದುಕೊಳ್ಳುವ ನಿರ್ಧಾರ ಇಡೀ ರಾಷ್ಟ್ರದ ಹಣೆ ಬರಹ ಆಗಬಾರದು. ಪ್ರಜಾಪ್ರಭುತ್ವದಲ್ಲಿ ರಾಷ್ಟ್ರ ಪೌರನಿಗೇ ಪರಮಾಧಿಕಾರ ಸಿಗಬೇಕು. ತನ್ನೊಳಿತಿಗೆ ಅಗತ್ಯ ನಿರ್ಧಾರ ಅವನೇ ತೆಗೆದುಕೊಳ್ಳಬೇಕು. ತನ್ನ ಪ್ರತಿನಿಧಿಯನ್ನು ತಾನು ಆಯ್ಕೆ ಮಾಡಬೇಕು. ಹೊರೆತು ರಾಜಕೀಯ ಪಕ್ಷಗಳು ಕಣಕ್ಕೆ ಇಳಿಸುವ ಅಭ್ಯರ್ಥಿಯನ್ನಷ್ಟೇ ಆರಿಸುವ ದುಸ್ಥಿತಿ ಆತನಿಗೆ ಕೊಡಬಾರದು. ರಾಷ್ಟ್ರ ಜನತೆ ವಿವಿಧ ರಾಜಕೀಯ ಪಕ್ಷಗಳ ಚಿಹ್ನೆಗಳಿಂದ ತಮ್ಮನ್ನು ಗುರ್ತಿಸಿಕೊಳ್ಳುವ ದುಸ್ಥಿತಿಗೆ ಅವನನ್ನು ದೂಡಬಾರದು. ಆದ್ದರಿಂದ ರಾಜಕೀಯ ಪಕ್ಷ ಚಟುವಟಿಕೆಗಳನ್ನು ಈ ಕೂಡಲೇ ನಿರ್ಭಂಧಿಸಬೇಕು ಎಂದು ನರೇಂದ್ರಬಾಬು ಅಭಿಪ್ರಾಯಿಸಿದ್ದಾರೆ.