ಕನ್ನಡಪರ ಕಾರ್ಯಕ್ರಮ ಹೆಚ್ಚಾಗಲಿ
ಚಿಕ್ಕಬಳ್ಳಾಪುರ: ಜನಸಾಮಾನ್ಯರ ಒಲವು ಗಳಿಸುವ, ಸಾಹಿತ್ಯ ಪ್ರೇಮ ಬೆಳೆಸುವ ನಿಟ್ಟಿನಲ್ಲಿ ಕನ್ನಡಪರ ಕಾರ್ಯಕ್ರಮಗಳನ್ನು ಹೆಚ್ಚಿಗೆ ಹಮ್ಮಿಕೊಳ್ಳುವ ಮೂಲಕ ಸಾಹಿತ್ಯ ಪರಿಷತ್ತಿನ ಚಟುವಟಿಕೆಗಳು ನಿರಂತರವಾಗಿ ನಡೆಯಬೇಕು ಎಂದು ಮಾಜಿ ಶಾಸಕ ಕೆ.ಪಿ. ಬಚ್ಚೇಗೌಡ ತಿಳಿಸಿದರು.
ನಗರದ ನೂತನ ಕ.ಸಾ.ಪ.ಸಾಹಿತ್ಯ ಭವನದಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ವತಿಯಿಂದ ಆಯೋಜಿಸಿದ್ದ ಕನ್ನಡ ಸಾಹಿತ್ಯ ಭವನ ಉದ್ಘಾಟನೆ ಹಾಗೂ ಸಾಹಿತ್ಯ ಪರಿಷತ್ತಿನ ಸಂಸ್ಥಾಪನಾ ದಿನಾಚರಣೆ ಕಾರ್ಯಕ್ರಮದಲ್ಲಿ ದೀಪ ಬೆಳಗಿಸಿ ಮಾತನಾಡಿ, ನಮ್ಮ ಮಾತೃಭಾಷೆಯನ್ನು ನಾವೇ ಉಳಿಸಿ ಬೆಳೆಸಬೇಕಾಗಿದೆ ಎಂದರು.
ಕಸಾಪ ಜಿಲ್ಲಾ ಅಧ್ಯಕ್ಷ ವೈ.ಎಲ್. ಹನುಮಂತರಾವ್ ಮಾತನಾಡಿ, ಕನ್ನಡ ಸಾಹಿತ್ಯ ಪರಿಷತ್ತಿನ ಶತಮಾನೋತ್ಸವದ ಅಂಗವಾಗಿ ರಂಗು-ರಂಗಿನ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಭರವಸೆ ನೀಡಿದರು. ನಿವೃತ್ತ ತಹಸೀಲ್ದಾರ್ ಶೇಷಭಟ್, ತಾಪಂ ಅಧ್ಯಕ್ಷ ಕೆ. ಕೃಷ್ಣಮೂರ್ತಿ ಮಾತನಾಡಿದರು. ತಾಪಂ ಉಪಾಧ್ಯಕ್ಷೆ ಲಕ್ಷ್ಮಮ್ಮ ಆಂಜನಪ್ಪ, ಕಸಾಪ ಜಿಲ್ಲಾ ಕಾರ್ಯದರ್ಶಿ ಸಿ.ಬಿ. ಹನುಮಂತಪ್ಪ, ಎಸ್.ಎನ್.ಅಮೃತ್ ಕುಮಾರ್, ಪ್ರೇಮಲೀಲಾವೆಂಕಟೇಶ್, ಮಂಚನಬಲೆ ಶ್ರೀನಿವಾಸ್, ಡಿ.ಜೆ. ಚಂದ್ರಮೋಹನ್, ಚಂದ್ರು, ನಳಿನಾಕ್ಷಿ ವಿನೋದ್, ಎಂ. ಕೃಷ್ಣಪ್ಪ, ಇಂದುಮತಿ ಇದ್ದರು.
ಕಾನೂನು ಅರಿವು ಎಲ್ಲರಿಗೂ ಅಗತ್ಯ
ಬಂಗಾರಪೇಟೆ: ಕಾನೂನು ತಿಳಿದ ವ್ಯಕ್ತಿ ದೇಶದಲ್ಲಿ ನೆಮ್ಮದಿಯ ಜೀವನ ನೆಡಸಬಹುದು ಎಂದು ಪ್ರಧಾನ ಸಿವಿಲ್ನ್ಯಾಯಾಧೀಶರಾದ ಕೆ.ಎಂ. ಬಸವರಾಜಪ್ಪ ಹೇಳಿದರು.
ತಾಲೂಕಿನ ಸೂಲಿಕುಂಟೆ, ಕಾರಹಳ್ಳಿ, ಬೆಂಗನೂರು ಗ್ರಾಪಂ ಕೇಂದ್ರಗಳಲ್ಲಿ ರಾಜ್ಯ ಕಾನೂನು ಪ್ರಾಧಿಕಾರ ಹಾಗೂ ವಕೀಲರ ಸಂಘ ಏರ್ಪಡಿಸಿದ್ದ ಕಾನೂನು ಅರಿವು-ನೆರವು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಅಸಹಾಯಕ, ನಿರಾಶದಾಯಕ ಎಲ್ಲರೂ ಕಾನೂನಿನಲ್ಲಿ ಅವಕಾಶ ಪಡೆದು ತಮಗೆ ದಕ್ಕುವ ಹಕ್ಕುಗಳನ್ನು ಪಡೆಯಬಹುದು ಎಂದರು.
ಅಪರ ಸಿವಿಲ್ನ್ಯಾಯಾಧೀಶರಾದ ಮರಿಯಪ್ಪ ಮಾತನಾಡಿ, ಕಾನೂನಿನಿಂದ ಎಲ್ಲಾ ಕ್ಷೇತ್ರಗಳಲ್ಲೂ ನ್ಯಾಯಯುತವಾಗಿ ಹೋರಾಡಿ ತಮ್ಮ ಹಕ್ಕುಗಳನ್ನು ಪ್ರತಿ ಪ್ರಜೆಯೂ ಪಡೆಯಬಹುದು ಎಂದರು. ತಾಪಂ ಇಒ ಕೆ.ಎಸ್. ಭಟ್, ವಕೀಲ ಜಯಪ್ರಕಾಶ್, ಕೆ.ಸಿ.ಪ್ರಸಾದ್, ಅಶ್ವಥನಾರಾಯಣಮೂರ್ತಿ, ಶಶಿಕುಮಾರ್, ಅಮರೇಶ್ ಎಸ್.ನಾರಾಯಣಪ್ಪ, ಎಸ್. ರಾಜಗೋಪಾಲ್, ಗಾಯತ್ರಿ, ದಾಕ್ಷಾಯಿಣಿ, ಕಾರಹಳ್ಳಿ ಗ್ರಾಪಂ ಪಿಡಿಒ ಸಂದ್ಯಾ ಇದ್ದರು.
ಬೆಂವಿವಿ ಎಡವಟ್ಟು, ವಿದ್ಯಾರ್ಥಿಗಳ ಸಿಟ್ಟು
ಕೋಲಾರ: ಮೇ 8ರಂದು ನಡೆಯಲಿರುವ ಪದವಿ ಪರೀಕ್ಷೆಗಳ ಪ್ರವೇಶ ಪತ್ರದಲ್ಲಿ ವಿದ್ಯಾರ್ಥಿಗಳ ಭಾವಚಿತ್ರ ಸರಿಯಾಗಿ ಮುದ್ರಣ ಮಾಡದೆ ಲೋಪವೆಸಗಿರುವುದಕ್ಕೆ ವಿದ್ಯಾರ್ಥಿಗಳು ಸಿಡಿಮಿಡಿಗೊಂಡಿದ್ದಾರೆ.
ಬೆಂಗಳೂರು ವಿವಿಯಿಂದ ನೀಡಲ್ಪಟ್ಟಿರುವ ಶೇ.80 ರಷ್ಟು ಪ್ರದೇಶ ಪತ್ರದಲ್ಲಿ ವಿದ್ಯಾರ್ಥಿಗಳ ಭಾವಚಿತ್ರಗಳು ಸರಿಯಾಗಿ ಕಾಣುತ್ತಿಲ್ಲ. ಪರೀಕ್ಷಾ ವಿಭಾಗದಲ್ಲಿನ ಕಂಪ್ಯೂಟರ್ ವಿಭಾಗದಲ್ಲಿ ದೋಷದ ಪರಿಣಾಮ ವಿದ್ಯಾರ್ಥಿಗಳ ಭಾವಚಿತ್ರಗಳು ಸರಿಯಾಗಿ ಕಾಣದೆ ಎಡವಟ್ಟಾಗಿದೆ. ಈ ರೀತಿಯ ದೋಷಪೂರಿತ ಭಾವಚಿತ್ರಗಳ ಮೇಲೆ ವಿದ್ಯಾರ್ಥಿಗಳ ಫೊಟೋಗಳನ್ನು ಅಂಟಿಸಿ ಕಾಲೇಜಿನ ಗುಮಾಸ್ತರಿಂದ ಫೋಟೋ ಮೇಲೆ ಕಾಲೇಜಿನ ಮುದ್ರೆಯನ್ನು ಹಾಕಿಸಿಕೊಳ್ಳುವಂತಾಗಿದೆ.
ಪ್ರವೇಶ ಪತ್ರದ ದೋಷವನ್ನು ವಿದ್ಯಾರ್ಥಿ ಮುಖಂಡ ಬಿ. ಸುರೇಶ್ಗೌಡ ಬೆಂಗಳೂರು ವಿವಿಯ ಅಧಿಕಾರಿಗಳ ಗಮನಕ್ಕೆ ತಂದರೂ ಪ್ರಯೋಜನವಾಗಿಲ್ಲ. ಇದರಿಂದ ವಿದ್ಯಾರ್ಥಿಗಳು ಸಹ ಅಸಮಾಧಾನಗೊಂಡಿದ್ದಾರೆ. ವಿದ್ಯಾರ್ಥಿಗಳಿಂದ ಒಂದಕ್ಕೆ ಎರಡು ಮೂರು ಪಟ್ಟು ಪರೀಕ್ಷಾ ಶುಲ್ಕ ವಸೂಲಿ ಮಾಡುವ ವಿವಿಯ ಆಡಳಿತ ಮಂಡಳಿ ಪ್ರವೇಶ ಪತ್ರವನ್ನು ಬೇಕಾಬಿಟ್ಟಿಯಾಗಿ ನೀಡುತ್ತಿದೆ. ಇದರಿಂದ ನಕಲಿ ಪರೀಕ್ಷಾರ್ಥಿಗಳ ಹಾವಳಿ ಹೆಚ್ಚುವುದಕ್ಕೆ ಕುಮ್ಮಕ್ಕು ನೀಡಿದಂತಾಗಿದೆ ಎಂದು ವಿದ್ಯಾರ್ಥಿಗಳು ದೂರಿದ್ದಾರೆ.
ರಾಜ್ಯ ಸಾರಿಗೆ ಸಿಬ್ಬಂದಿಗೆ ಸಮವಸ್ತ್ರ ವಿತರಿಸಿ
ಶಿಡ್ಲಘಟ್ಟ: ಸಾರಿಗೆ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಎಲ್ಲಾ ಸಿಬ್ಬಂದಿಗೆ ಸಮವಸ್ತ್ರ ಕಡ್ಡಾಯಗೊಳಿಸಬೇಕು ಎಂದು ನಾಗರಿಕರು ಒತ್ತಾಯಿಸಿದ್ದಾರೆ.
ಬೆಂಗಳೂರಿನಿಂದ ಶಿಡ್ಲಘಟ್ಟಕ್ಕೆ ಬರುತ್ತಿದ್ದ ಮಾರ್ಗದ ಸಂಖ್ಯೆ 121 ರ ಸಾರಿಗೆ ಬಸ್ಸಿನಲ್ಲಿ ಸಮವಸ್ತ್ರವಿಲ್ಲದೆ ಕಾರ್ಯನಿರ್ವಹಿಸುತ್ತಿದ್ದ ನಿರ್ವಾಹಕನನ್ನು ನೋಡಿ ಪ್ರಯಾಣಿಕರು ಟಿಕೆಟ್ ಪಡೆಯಲು ಹಿಂಜರಿಯುವಂತಾಗಿತ್ತು, ಖಾಸಗಿ ಬಸ್ಸುಗಳಲ್ಲಿ ಟಿಕೆಟ್ ಕೇಳುವಂತೆ ಸಾರಿಗೆ ಬಸ್ಸಿನಲ್ಲಿಯೂ ಕೇಳುವಂತಾಗಿದೆ ಇದರಿಂದ ಪ್ರಯಾಣಿಕರಿಗೆ ತೊಂದರೆಯಾಗಿದೆ ಎಂದು ಆರೋಪಿಸಿದ್ದಾರೆ.
ಸಾರಿಗೆ ಇಲಾಖೆಯ ಅಧಿಕಾರಿಗಳ ಬೇಜವಾಬ್ದಾರಿ ವರ್ತನೆಯಿಂದಾಗಿ ಈ ರೀತಿಯಾಗಿದೆ ಆದ್ದರಿಂದ ಇಲಾಖೆಯ ಅಧಿಕಾರಿಗಳು ಸೂಕ್ತ ನಿಗಾವಹಿಸಬೇಕು ಎಂದು ಹಿರಿಯ ನಾಗರಿಕರು ಒತ್ತಾಯಿಸಿದ್ದಾರೆ.
ಬಾಬಾ ರಾಮ್ದೇವ್ ಬಂಧನಕ್ಕೆ ಆಗ್ರಹಿಸಿ ಪ್ರತಿಭಟನೆ
ಮಾಲೂರು: ದಲಿತರ ವಿರೋಧಿ ಹೇಳಿಕೆ ನೀಡಿರುವ ಬಾಬಾ ರಾಮ್ದೇವ್ರನ್ನು ಬಂಧಿಸದೆ ನಿರ್ಲಕ್ಷ್ಯ ತೋರುತ್ತಿರುವುದನ್ನು ಖಂಡಿಸಿ ಯುವ ಕಾಂಗ್ರೆಸ್ ಹಾಗೂ ದಲಿತ ವಿದ್ಯಾರ್ಥಿ ಒಕ್ಕೂಟ ಜಂಟಿಯಾಗಿ ಪ್ರತಿಭಟನೆ ನಡೆಸಿದವು.
ಈ ಸಂಧರ್ಭದಲ್ಲಿ ಮಾತನಾಡಿದ ಯುವ ಕಾಂಗ್ರೆಸ್ ಅಧ್ಯಕ್ಷ ಪಾಪರೆಡ್ಡಿ, ತಮ್ಮ ಹೇಳಿಕೆ ಮೂಲಕ ದಲಿತರನ್ನು ಕೀಳು ದೃಷ್ಟಿಯಿಂದ ನೋಡಿರುವ ಬಾಬಾರಾಮ್ದೇವ್ರನ್ನು ಬಂಧಿಸಬೇಕೆಂದು ಅಗ್ರಹಿಸಿದರು. ಯುವ ಕಾಂಗ್ರೆಸ್ನ ಹರೀಶ್, ಅನಿಲ್, ಆಶೋಕ್, ನಂದನ್, ದಿಲೀಪ್, ಮುನಿರಾಜು, ವೆಂಕಟೇಶ್,ನಾರಾಯಣಸ್ವಾಮಿ ಇದ್ದರು.
ಗ್ರಾಮೀಣ ಜನತೆಯಲ್ಲಿ ಕನ್ನಡದ ಕಂಪು
ಟೇಕಲ್: ಜಿಲ್ಲೆಯಲ್ಲಿ ಹೋಬಳಿ ಮಟ್ಟದ ಸಮ್ಮೇಳನಗಳನ್ನು ನಡೆಸಿ ಗ್ರಾಮೀಣ ಜನತೆಯಲ್ಲಿ ಕನ್ನಡದ ಕಂಪನ್ನು ಪಸರಿಸುವುದೇ ಗುರಿ ಎಂದು ಕಸಾಪ ಜಿಲ್ಲಾಧ್ಯಕ್ಷ ಜೆ.ಜಿ. ನಾಗರಾಜ್ ತಿಳಿಸಿದರು.
ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಹಾಗೂ ಮಾಲೂರು ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಸಹಯೋಗದೊಂದಿಗೆ ಕುಡಿಯನೂರು ಗ್ರಾಮದ ಹೊಯ್ಸಳ ಭವನದಲ್ಲಿ ಪರಿಷತ್ತು ಕಸಾಪ ಸಂಸ್ಥಾಪನಾ ದಿನಾಚರಣೆ ಹಾಗೂ ಅಭಿನಂದನೆ ಸಮಾರಂಭ ಉದ್ಘಾಟಿಸಿ ಮಾತನಾಡಿದರು. ದೊಡ್ಡಕಲ್ಲಹಳ್ಳಿ ನಾರಾಯಣಪ್ಪ ಕಸಾಪ ನಡೆದು ಬಂದ ದಾರಿಯ ಬಗ್ಗೆ ಉಪನ್ಯಾಸ ನೀಡಿದರು. ಪ್ರಸ್ಥಾವಿಕ ನುಡಿ ಜಿಲ್ಲಾ ಕಸಾಪ ಗೌರವ ಕಾರ್ಯದರ್ಶಿ ಎ. ಅಶ್ವತರೆಡ್ಡಿ ಮಂಡಿಸಿದರು.
ಮಾಲೂರು ತಾಲೂಕು ಕಸಾಪ ಅಧ್ಯಕ್ಷ ಮಾ.ಗೊ. ಮಧುಸೂಧನ್, ಕೋಲಾರ ತಾಲೂಕು ಅಧ್ಯಕ್ಷ ನಾರಾಯಣಪ್ಪ, ಬಂಗಾರಪೇಟೆ ತಾಲೂಕು ಅಧ್ಯಕ್ಷ ಆರ್. ಅಶ್ವತ್, ಜಿಲ್ಲಾ ಸಂಚಾಲಕ ಶ್ರೀನಿವಾಸಪುರ ರವಿಕುಮಾರ್, ಕೆ.ಎಂ. ಶೇಷಪ್ಪ, ಜಿ. ರಾಮಚಂದ್ರಪ್ಪ, ಟಿ.ಎಸ್. ನಾರಾಯಣಪ್ಪ, ಆರ್. ರವಿಕುಮಾರ್, ಕೆ.ಪಿ. ಶಶಿಧರ್, ಕೆ.ಎಂ. ನಟರಾಜ್, ಆರ್. ಲಕ್ಕಪ್ಪ, ನಂಜುಂಡೇಶ್ವರ, ಶಿವಕುಮಾರ್ ಇದ್ದರು.