ಕುಡಿವ ನೀರು ಪೂರೈಸಲು ಸೂಚನೆ
ಬಂಗಾರಪೇಟೆ: ಬೇಸಿಗೆಯಲ್ಲಿ ಸಮರ್ಪಕ ಕುಡಿಯುವ ನೀರು ಪೂರೈಸದೆ ವಾರ್ಡುಗಳಲ್ಲಿ ಕಾಲಿಟ್ಟರೆ ಕಲ್ಲುಗಳಿಂದ ಹೊಡೆಯುವ ಸ್ಥಿತಿಯಲ್ಲಿ ಜನರಿದ್ದಾರೆ ಎಂದು ಎಲ್ಲಾ ಸದಸ್ಯರು ಶಾಸಕರಿಗೆ ಮೊರೆ ಹೋದರು.
ಪುರಸಭೆ ಅಧ್ಯಕ್ಷೆ ಗಂಗಮ್ಮರಂಗರಾಮಯ್ಯ ಅಧ್ಯಕ್ಷತೆಯಲ್ಲಿ ಕುಡಿಯುವ ನೀರಿನ ಸಲುವಾಗಿ ಚರ್ಚಿಸಲು ಕರೆದಿದ್ದ ವಿಶೇಷ ಸಭೆಯಲ್ಲಿ ಪಕ್ಷ ಭೇದ ಮರೆತು ಎಲ್ಲಾ ಸದಸ್ಯರು ಕುಡಿಯುವ ನೀರು ಪೂರೈಸಲು ಪುರಸಭೆಯಿಂದ ಸಾಧ್ಯವಾಗುತ್ತಿಲ್ಲ ಎಂದು ತಮ್ಮ ಅಳಲನ್ನು ಶಾಸರ ಬಳಿ ತೋಡಿಕೊಂಡರು.
ಅಂತರ್ಜಲ ಮಟ್ಟ ಕುಸಿದಿರುವುದರಿಂದ ಈ ಪರಿಸ್ಥಿತಿ ಬಂದಿದೆ ಹೊಸ ಕೊಳವೆ ಬಾವಿಗಳನ್ನು ಕೊರೆಸಲು 2ಕೋಟಿ ಅನುದಾನ ಬಂದಿದೆ ಎಲ್ಲಿ ನೀರು ಲಭ್ಯವಿದೆಯೋ ಅಲ್ಲಿ ಕೊರೆಸಿ ನೀರು ಪೂರೈಕೆ ಮಾಡಲಾಗುವುದು ಅಲ್ಲದೆ ಅತ್ತಿಗಿರಿಕೊಪ್ಪದ ಕೆರೆಯಲ್ಲಿ ನೀರು ಇರುವ ಬಗ್ಗೆ ವೈಜ್ಞಾನಿಕವಾಗಿ ತಿಳಿದು ಬಂದಿದೆ ಆದ್ದರಿಂದ ಅಲ್ಲಿ ಮುಂದಿನ ಸೋಮವಾರ 20 ಕೊಳವೆ ಬಾವಿಗಳನ್ನು ಕೊರೆಸುವುದಾಗಿ ಶಾಸಕ ಎಸ್.ಎನ್.ನಾರಾಯಣಸ್ವಾಮಿ ಸಭೆಗೆ ಹೇಳಿದರು. ಇದಕ್ಕೆ ಎಲ್ಲಾ ಸದಸ್ಯರು ಸಮ್ಮತಿ ಸೂಚಿಸಿದರು.
ಇದಲ್ಲದೆ ಪ್ರತಿನಿತ್ಯ 200 ಖಾಸಗಿ ಟ್ಯಾಂಕರ್ ಮೂಲಕ ಪುರಸಭೆ ಸಂಪ್ಗೆ ನೀರು ಖರೀದಿಸಿದರೆ 15ದಿನಕ್ಕೆ ನೀರು ಸರಬರಾಜು ಮಾಡಬಹುದು ಎಂಬ ವಿಷಯಕ್ಕೆ, ಸರ್ಕಾರ ಒಂದು ಟ್ಯಾಂಕರ್ಗೆ 450 ರು. ನಿಗಧಿಪಡಿಸಿದೆ. ಈ ಮೊತ್ತಕ್ಕೆ ನೀರು ಪೂರೈಸಲು ಯಾರೂ ಮುಂದೆ ಬರುತ್ತಿಲ್ಲ ಎಂದು ಮುಖ್ಯಾಧಿಕಾರಿ ಜಹೀರ್ ಅಬ್ಬಾಸ್ ಸಭೆ ಗಮನಕ್ಕೆ ತಂದರು.
ನೀರಿನ ಸಮಸ್ಯೆ ನೀಗುವವರೆಗೂ ಅಧಿಕಾರಿಗಳು ರಜೆ ಪಡೆಯಬಾರದು ಹಾಗೂ ಕಡ್ಡಾಯವಾಗಿ ಪಟ್ಟಣದಲ್ಲೆ ಇದ್ದು ಜನರ ನೋವುಗಳಿಗೆ ಸ್ಪಂದಿಸಬೇಕು ಇಲ್ಲದಿದ್ದರೆ ಕ್ರಮಕೈಗೊಳ್ಳುವುದಾಗಿ ಎಚ್ಚರಿಕೆಯನ್ನು ಶಾಸಕರು ನೀಡಿದರು. ಸದಸ್ಯರಾದ ಕೆ. ಚಂದ್ರಾರೆಡ್ಡಿ, ರವಿಪ್ರಕಾಶ್, ಬಿ.ಸಿ. ಮೂರ್ತಿ ಚರ್ಚೆಯಲ್ಲಿ ಪಾಲ್ಗೊಂಡು ಗಮನ ಸೆಳೆದರು. ಉಪಾಧ್ಯಕ್ಷ ರಮೇಶ್ ಇದ್ದರು.