ಮತದಾರರ ಪಟ್ಟಿಗೆ ಹೆಸರು ಸೇರಿಸಿ
ಕೋಲಾರ: ಆಗ್ನೇಯ ಪದವೀಧರರ ಕ್ಷೇತ್ರದಿಂದ ವಿಧಾನ ಪರಿಷತ್ತಿಗೆ ನಡೆಯುವ ಚುನಾವಣೆಗೆ ಸ್ಪರ್ಧಿಸಲು ಇಚ್ಚಿಸಿರುವ ಸ್ವಯಂ ನಿವೃತ್ತಿ ಹೊಂದಿರುವ ಕೆಎಎಸ್ ಅಧಿಕಾರಿ ಎಂ.ಎಸ್.ನಾಗೇಂದ್ರ ಅವರು, 2010ರೊಳಗೆ ಪದವೀಧರರಾಗಿರುವವರು ಹೆಸರು ಪದವೀಧರರ ಕ್ಷೇತ್ರದ ಮತದಾರರ ಪಟ್ಟಿಯಲ್ಲಿ ಸೇರಿಸಲು ಮನವಿ ಮಾಡಿದ್ದಾರೆ.
ಸೋಮವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ತಾವು ಚುನಾವಣೆಗೆ ಸ್ಪರ್ಧಿಸಲು ಬಯಸಿರುವುದಾಗಿ ಹೇಳಿದರು. ಪದವೀಧರರ ಅನೇಕ ಸಮಸ್ಯೆಗಳಿಗೆ ಪರಿಹಾರ ಕಲ್ಪಿಸಲು ತಾವು ಸಶಕ್ತರಾಗಿದ್ದು ಈ ಬಾರಿ ಹೊಸಬರಿಗೆ ಅವಕಾಶ ಮಾಡಿಕೊಡಬೇಕೆಂದು ಮನವಿ ಮಾಡಿದರು.
ಪದವೀಧರರು ಮತಪಟ್ಟಿಯಲ್ಲಿ ಹೆಸರು ಸೇರಿಸಲು ಮೇ 20ರವರೆಗೆ ಕಾಲಾವಕಾಶವಿದ್ದು ಪ್ರತಿಯೊಬ್ಬರು ಹೆಸರು ನೋಂದಣಿ ಮಾಡಿಸುವ ಮೂಲಕ ತನಗೆ ಪ್ರಥಮ ಪ್ರಾಶಸ್ತ್ಯದ ಮತ ನೀಡಬೇಕೆಂದು ಕೋರಿದರು.
ಸರ್ಕಾರಿ ಸೇವೆಯ ಮೂಲಕ ಜನತೆಯಲ್ಲಿ ವಿಶ್ವಾಸಗಳಿಸಿದ್ದು ತೇಜಸ್ವಿ ಸೇವಾ ಟ್ರಸ್ಟ್ ಮೂಲಕ ಸಮಾಜ ಸೇವೆ ಸಲ್ಲಿಸುತ್ತಿರುವುದಾಗಿ ಹೇಳಿದರು. ಹಾಲಿ ತಾವು ಎಂರೈಲ್ಸ್ ಎಂಬ ಮಲೇಶಿಯಾ ಮೂಲಕ ಮೋನೋರೈಲಲ್ಕಂಪನಿಯಲ್ಲಿ ಸೇವೆ ಸಲ್ಲಿಸುತ್ತಿದ್ದು ಆಗ್ನೇಯ ಪದವೀಧರರ ಕ್ಷೇತ್ರದಿಂದ ತಮ್ಮನ್ನು ಆಯ್ಕೆ ಮಾಡಿದಲ್ಲಿ ಕ್ಷೇತ್ರದಲ್ಲಿ ಪದವೀಧರರ ಅನೇಕ ಸಮಸ್ಯೆಗಳ ನಿವಾರಣೆಗಾಗಿ ವಿಧಾನ ಪರಿಷತ್ತಿನಲ್ಲಿ ದನಿ ಎತ್ತುವುದಾಗಿ ತಿಳಿಸಿದರು.