ರಮೇಶ್‌ಕುಮಾರ್ ಶಾಸಕತ್ವ ರದ್ದುಪಡಿಸಿ
ಚಿಕ್ಕಬಳ್ಳಾಪುರ: ಬೆಸ್ಕಾಂ ಇಲಾಖೆ ಅಧಿಕಾರಿಗಳ ವಿರುದ್ಧ ಶಾಸಕ ರಮೇಶ್ ಕುಮಾರ್ ಪ್ರಚೋದನಕಾರಿ ಹೇಳಿಕೆ ನೀಡಿದ್ದಾರೆ ಎಂದು ಆರೋಪಿಸಿ ಕೆಪಿಟಿಸಿಎಲ್ ಅಧಿಕಾರಿಗಳು ಮತ್ತು ನೌಕರರ ಸಂಘ ಸಂಸ್ಥೆಗಳೇಘ ಒಕ್ಕೂಟ ಪ್ರತಿಭಟನೆ ನಡೆಸಿತು. ರಮೇಶ್ ಕುಮಾರ್ ಅವರ ಶಾಸಕ ಸ್ಥಾನ ರದ್ದುಪಡಿಸಬೇಕೆಂದು ಒತ್ತಾಯಿಸಿತು.
ಕೆಲಸ ಸ್ಥಗಿತಗೊಳಿಸಿ ನಗರದ ಬಿ.ಬಿ. ರಸ್ತೆಯ ಬೆಸ್ಕಾಂ ಇಲಾಖೆ ಕಚೇರಿಯ ಆವರಣದಲ್ಲಿ ಜಮಾಯಿಸಿದ ನೌಕರರು ಶಾಸಕ ರಮೇಶ್ ಕುಮಾರ್ ವಿರುದ್ಧ ಧಿಕ್ಕಾರ ಕೂಗಿದರು. ಪ್ರಮುಖ ರಸ್ತೆಗಳಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸಿ ನಗರದ ಹೊರ ವಲಯದಲ್ಲಿರುವ ಜಿಲ್ಲಾಡಳಿತ ಭವನಕ್ಕೆ ತೆರಳಿ ತಮ್ಮ ಮನವಿ ಸಲ್ಲಿಸಿದರು.
ಏ.24 ರಂದು ಕೋಲಾರದಲ್ಲಿ ನಡೆದ ಜಿಪಂ ಸಭೆಯಲ್ಲಿ ಶ್ರೀನಿವಾಸಪುರ ಶಾಸಕ ರಮೇಶ್ ಕುಮಾರ್ ಬೆಸ್ಕಾಂ ಸಿಬ್ಬಂದಿಯನ್ನು ಕೊಚ್ಚಿ ಹಾಕಿ,ಅವರನ್ನು ಸಾಲಾಗಿ ನಿಲ್ಲಿಸಿ ಕಡಿಯಬೇಕು, ಅವರು ಬಂದರೆ ವಿದ್ಯುತ್ ಕಂಬಕ್ಕೆ ಕಟ್ಟಿಹಾಕಿ ಮೂರು ದಿನ ಅನ್ನ, ನೀರು ನೀಡಬೇಡಿ ಎಂದು ಜನರಿಗೆ ಪ್ರಚೋದನಕಾರಿ ಸಲಹೆ ನೀಡಿದ್ದಾರೆ. ಇದರಿಂದ ಬೆಸ್ಕಾಂ ಇಲಾಖೆ ನೌಕರರು ಮತ್ತು ಸಿಬ್ಬಂದಿ ಕಾರ್ಯ ನಿರ್ವಹಿಸಲು ನೈತಿಕ ಸ್ಥೈರ್ಯ ಕುಸಿದಿದ್ದು ಭಯದ ವಾತಾವರಣ ನಿರ್ಮಾಣವಾಗಿದೆ ಎಂದು ಆತಂಕ ವ್ಯಕ್ತಪಡಿಸಿದರು.
ಜನಪ್ರತಿನಿಧಿಯಾಗಿ ಜನರಿಗೆ ಒಳ್ಳೆಯ ಸಲಹೆ ನೀಡಬೇಕೇ ಹೊರತು ದಿಕ್ಕು ತಪ್ಪಿಸುವ ಕೆಲಸ ಮಾಡಬಾರದು. ಜವಾಬ್ದಾರಿಯಿಲ್ಲದೇ ಹೇಳಿಕೆ ಕೊಟ್ಟಿರುವ ಅವರ ಶಾಸಕತ್ವವನ್ನು ರದ್ದುಪಡಿಸಿ ಶಿಸ್ತು ಕ್ರಮ ಕೈಗೊಳ್ಳಬೇಕು. ಜೊತೆಗೆ ಇಲಾಖೆಯಲ್ಲಿ ಖಾಲಿ ಇರುವ ಹುದ್ದೆಗಳನ್ನು ನೇಮಕ ಮಾಡಬೇಕು. ಸಿಬ್ಬಂದಿಗೆ ರಕ್ಷಣೆ ನೀಡುವುದರ ಜೊತೆಗೆ ನೈತಿಕ ಸ್ಥೈರ್ಯ ಹೆಚ್ಚಿಸಲು ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು. ಅಶ್ವತ್ಥನಾರಾಯಣ, ಅಂತೋಣಿ ಸ್ವಾಮಿ, ಶ್ರೀನಿವಾಸ್, ರಮೇಶ್ ಕುಮಾರ್, ವಿ.ಶ್ರೀನಿವಾಸ್, ನರಸಿಂಹಮೂರ್ತಿ, ಶಫೀವುಲ್ಲಾ ಇದ್ದರು.
ಚಿಂತಾಮಣಿಯಲ್ಲಿ...
ಚಿಂತಾಮಣಿ: ಶಾಸಕ ರಮೇಶ್ ಕುಮಾರ್ ಬೆಸ್ಕಾಂ ಸಿಬ್ಬಂದಿ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿರುವುದನ್ನು ವಿರೋಧಿಸಿ ಬೆಸ್ಕಾಂ ನೌಕರರು ಕಪ್ಪು ಪಟ್ಟಿ ಧರಿಸಿ ಪ್ರತಿಭಟನೆ ನಡೆಸಿದರು. ಬೆಸ್ಕಾಂ ಕಚೇರಿಯಿಂದ ನೌಕರರು ಶಾಸಕ ರಮೇಶ್ ಕುಮಾರ್ ವಿರುದ್ಧ ದಿಕ್ಕಾರ ಕೂಗುತ್ತಾ, ಶಾಸಕರ ಸ್ಥಾನ ರದ್ಧುಗೊಳಿಸಿ ಕಾನೂನು ಕ್ರಮ ಜರುಗಿಸಬೇಕೆಂದು ಒತ್ತಾಯಿಸಿದರು. ಈ ಸಂದರ್ಭದಲ್ಲಿ ಕೇಂದ್ರ ಕಾರ್ಯಕಾರಿ ಸಮಿತಿ ಸದಸ್ಯ ಚಂದ್ರಶೇಖರ್ ಹಾಗೂ ಅನಿಲ್‌ಕುಮಾರ್ ಮಾತನಾಡಿ, ಶಾಸಕರ ಹೇಳಿಕೆ ಖಂಡಿಸಿ ರಾಜ್ಯಾದ್ಯಂತ ಹೋರಾಟ ತೀವ್ರಗೊಳಿಸುವುದಾಗಿ ಎಚ್ಚರಿಸಿ, ಶಾಸಕರು ಕ್ಷಮೆಯಾಚಿಸಬೇಕೆಂದು ಒತ್ತಾಯಿಸಿದರು. ನಂತರ ತಾಲೂಕು ದಂಡಾಧಿಕಾರಿ ಜಿ.ವಿ. ಹನುಮಂತರೆಡ್ಡಿಯವರಿಗೆ ಮನವಿ ಸಲ್ಲಿಸಿದರು. ಬೆಸ್ಕಾಂ ಅಧಿಕಾರಿಗಳಾದ ಅಶೋಕರೆಡ್ಡಿ,ಶ್ರೀನಿವಾಸ್, ಕೃಷ್ಣಾರೆಡ್ಡಿ, ಜಿ.ವಿ. ನಾಗರಾಜ್, ಶಿವಪ್ರಸಾದ್, ಶ್ರೀನಿವಾಸ್, ಶ್ರೀಧರ್, ಮಂಜುನಾಥ, ವೆಂಕಟೇಶಪ್ಪ ಇದ್ದರು.