ಅಕ್ರಮ ಸಂಬಂಧ ಮುಚ್ಚಿಕೊಳ್ಳಲು ಗಂಡನನ್ನೇ ಕೊಲೆ ಮಾಡಿದ ಮಹಿಳೆ
ಕೆಜಿಎಫ್: ತನ್ನ ಅಕ್ರಮ ಸಂಬಂಧ ಮುಚ್ಚಿಕೊಳ್ಳಲು ಮಹಿಳೆಯೊಬ್ಬಳು ತನ್ನ ಪ್ರಿಯಕರನೇ ಜತೆ ಸೇರಿ ಗಂಡನನ್ನೇ ಕೊಲೆ ಮಾಡಿದ ಘಟನೆ ನಡೆದಿದೆ.
ಮಾರಿಕುಪ್ಪಂ ವ್ಯಾಪ್ತಿಯ ಕೊತ್ತೂರು ಗ್ರಾಮದ ನಿವಾಸಿ ದಾಮೋದರಪ್ಪ(62) ಕೊಲೆಗೀಡಾದ ವ್ಯಕ್ತಿ. ಇತನಿಗೂ ಮತ್ತು ಅದೇ ಗ್ರಾಮದ ನಿವಾಸಿ ಕಣ್ಣಯ್ಯ(42) ಕೊಲೆಯಾದ ದಾಮೋದರಪ್ಪನ ಎರಡನೇ ಹೆಂಡತಿ ಚಂದ್ರಮ್ಮಳೊಂದಿಗೆ ಅನೈತಿಕ ಸಂಬಂಧವಿತ್ತು. ಈ ವಿಷಯ ಗೊತ್ತಾಗುತ್ತಿದ್ದ ದಾಮೋದರಪ್ಪ ಹೆಂಡತಿ ಹಾಗೂ ಆಕೆಯ ಪ್ರಿಯಕರನಿಗೆ ಎಚ್ಚರಿಕೆ ನೀಡಿದ್ದರು. ಈ ವಿಷಯಕ್ಕೆ ಸಂಬಂಧಿಸಿದಂತೆ ಸೋಮವಾರ ರಾತ್ರಿ ಜಗಳವಾಗಿದೆ. ಕೊಲೆಯಾದ ದಾಮೋದರಪ್ಪನ ಎರಡನೇ ಹೆಂಡತಿ ಚಂದ್ರಮ್ಮ ಹಾಗೂ ಕಣ್ಣಯ್ಯ ಇಬ್ಬರು ಸೇರಿಕೊಂಡು ಕೊತ್ತೂರು ಗ್ರಾಮದ ಮನೆಯಲ್ಲಿ ದಾಮೋದರಪ್ಪನನ್ನು ಹೋಡೆದು ಸಾಯಿಸಿ ತನ್ನ ಸ್ನೇಹಿತನಾದ ಬಾಬು ಎಂಬುವನ ಸಹಾಯದೊಂದಿಗೆ ಒಂದು ಕಂಬಳಿಯಲ್ಲಿ ಸುತ್ತಿಕೊಂಡು ಬಜಾಜ್ ದ್ವಿಚಕ್ರ ವಾಹನದಲ್ಲಿ ಸೋಮವಾರ ಮಧ್ಯರಾತ್ರಿ ಗೋನಮಾಕನಹಳ್ಳಿ ಗ್ರಾಮದ ಮುಖ್ಯ ರಸ್ತೆಯಲ್ಲಿ ಬಿಸಾಡಿ ಹೋಗಿದ್ದಾರೆ. ಪೊಲೀಸರು ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ಆರೋಪಿಗಳಾದ ಕಣ್ಣಯ್ಯ(42) ಚಂದ್ರಮ್ಮ(40) ಹಾಗೂ ಬಾಬು(40) ಎಂಬುವರನ್ನು ಬಂಧಿಸಿ, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.