ಅಪಘಾತ: ಮೂವರ ದುರ್ಮರಣ
ಚಿಂತಾಮಣಿ: ದ್ವಿಚಕ್ರ ವಾಹನ ಹಾಗೂ ಬಸ್ ಮಧ್ಯೆ ಸಂಭವಿಸಿದ ಭೀಕರ ಅಪಘಾತದಲ್ಲಿ ಮೂವರು ಮೃತಪಟ್ಟ ಘಟನೆ ಗ್ರಾಮಾಂತರ ಪೋಲೀಸ್ ಠಾಣೆ ವ್ಯಾಪ್ತಿಯ ಕೊಂಗತಿಮ್ಮನಹಳ್ಳಿ ಗೇಟ್ ಬಳಿ ಮಂಗಳವಾರ ಮಧ್ಯಾಹ್ನ ನಡೆದಿದೆ.
ತಾಲ್ಲೂಕಿನ ಗಂಡ್ರಗಾನಹಳ್ಳಿ ಮತ್ತು ದಂಡುಪಾಳ್ಯ ಗ್ರಾಮದ ಅಂಗನವಾಡಿ ಕಾರ್ಯಕರ್ತರಾದ ಮಮತ(25), ಕಳಾವತಿ(28), ಲಕ್ಷ್ಮಿನಾರಾಯಣ(35) ಮೃತಪಟ್ಟವರು.
ದಂಡುಪಾಳ್ಯ ಗ್ರಾಮದ ಲಕ್ಷ್ಮಿನಾರಾಯಣ ತಮ್ಮ ದ್ವಿಚಕ್ರ ವಾಹನದಲ್ಲಿ ಪತ್ನಿ ಕಳಾವತಿ ಹಾಗೂ ಸಹೋದ್ಯೋಗಿಯಾದ ಮಮತ ಅವರನ್ನು ಕರೆದುಕೊಂಡು ಚಿಂತಾಮಣಿ ನಗರಕ್ಕೆ ಹೊರಟಿದ್ದರು. ಮುರುಗಮಲ್ಲ ಹತ್ತಿರ ಬರುತ್ತಿದ್ದಂತೆ ಎದುರಿನಿಂದ ಬಂದ ಖಾಸಗಿ ಬಸ್ ಡಿಕ್ಕಿ ಹೊಡೆಯಿತು. ಆಗ ಬೈಕ್ನಲ್ಲಿದ್ದ ಮೂವರು ಸ್ಥಳದಲ್ಲೇ ಮೃತಪಟ್ಟರು.
ಚಾಲಕ ಬಸ್ ಅನ್ನು ಅತಿವೇಗ ವಾಗಿ ಓಡಿಸಿದ್ದರ ಪರಿಣಾಮವೇ ಅಪಘಾತವಾಯಿತು ಎಂದು ಬಸ್ನಲ್ಲಿದ್ದ ಅನೇಕ ಪ್ರಯಾಣಿಕರು ಅಭಿಪ್ರಾಯಪಟ್ಟಿದ್ದಾರೆ. ಸುದ್ದಿ ತಿಳಿದ ಘಟನಾ ಸ್ಥಳಕ್ಕೆ ಡಿವೈಎಸ್ಪಿ ಸಣ್ಣತಿಮ್ಮಪ್ಪ ಹಾಗೂ ವೃತ್ತ ನಿರೀಕ್ಷಕ ವೆಂಕಟೇಶಮೂರ್ತಿ ಭೇಟಿ ನೀಡಿ ಸ್ಥಳ ಪರಿಶೀಲಿಸಿದರು.
ಮುಗಿಲು ಮುಟ್ಟಿದ ಆಕ್ರಂದನ: ಸುದ್ದಿ ತಿಳಿದ ತಕ್ಷಣ ಸಂಬಂಧಿಕರು ಹಾಗೂ ಸುತ್ತಮುತ್ತಲಿನ ಜನರು ಸ್ಥಳಕ್ಕೆ ಧಾವಿಸಿದರು. ಶವಗಳನ್ನು ನೋಡಿ ಸಂಬಂಧಿಕರು ಪ್ರಜ್ಞಾಹೀನರಾದರು. ಕೆಲವುರ ಸಿಕ್ಕಾಪಟ್ಟೆ ಅಳತೊಡಗಿದರು. ನಂತರ ಪೋಲೀಸರು ಮಧ್ಯ ಪ್ರವೇಶಿಸಿ ಶವಗಳನ್ನು ನಗರದ ಸರ್ಕಾರಿ ಆಸ್ಪತ್ರೆಗೆ ತರಲಾಯಿತು.
ರೊಚ್ಚಿಗೆದ್ದ ಜನ, ಪೋಲೀಸರ ವಿರುದ್ಧ ಸಿಟ್ಟು
ಖಾಸಗಿ ಬಸ್ಸುಗಳು ಚಿಂತಾಮಣಿ ಮಾರ್ಗವಾಗಿ ಬೆಂಗಳೂರು ಮುಖಾಂತರ ವಯಾ ಮುರುಗಮಲ್ಲದಿಂದ ರಾಜಾರೋಷವಾಗಿ ಪರವಾನಗೆ ಸಂಚರಿಸುತ್ತಿವೆ. ಇದನ್ನು ಕಂಡು ಕಾಣದಂತೆ ವರ್ತಿಸುತ್ತಿರುವ ಸ್ಥಳೀಯ ಪೊಲೀಸರು ಹಾಗೂ ಆರ್ಟಿಓ ಅಧಿಕಾರಿಗಳ ಕಾರ್ಯವೈಖರಿ ವಿರುದ್ಧ ಜನರು ರೊಚ್ಚಿಗೆದ್ದು, ಅಪಘಾತಕ್ಕೆ ಅಧಿಕಾರಿಗಳ ಬೇಜವಾಬ್ದಾರಿತನವೇ ಕಾರಣವೆಂದು ಆಕ್ರೋಶ ವ್ಯಕ್ತಪಡಿಸಿದರು. ಅಪಘಾತ ನಡೆದ ಕ್ಷಣಾರ್ಧದಲ್ಲಿ ಬಸ್ ಸಿಬ್ಬಂದಿ ಹಾಗೂ ಮಾಲೀಕರು ಬಸ್ಸಿನಲ್ಲಿದ್ದ ಪ್ರಯಾಣಿಕರನ್ನು ನಡು ರಸ್ತೆಯಲ್ಲೇ ಬಿಟ್ಟು ಪರಾರಿಯಾಗಿದ್ದಾರೆ. ಅಪಘಾತದ ಹಿನ್ನೆಲೆಯಲ್ಲಿ ಕೆಲವು ಖಾಸಗಿ ಬಸ್ಗಳ ತಮ್ಮ ಸಂಚಾರವನ್ನು ಸ್ಥಗಿತಗೊಳಿಸಿದವು.