ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕೋಲಾರ

ಮಿನಿ ವಿಧಾನಸೌಧಕ್ಕೆ ಶೀಘ್ರ ಕಚೇರಿಗಳ ಸ್ಥಳಾಂತರ: ಶಾಸಕ ನಾರಾಯಣಸ್ವಾಮಿ

Vishwanath S
Updated On : 7 May 2014, 12:19 pm

ಬಂಗಾರಪೇಟೆ: ತಾಲೂಕಿನ ಬನರ ಬಹು ನಿರೀಕ್ಷಿತ ಮಿನಿ ವಿಧಾನಸೌಧ ಕಟ್ಟಡ ಉದ್ಘಾಟನೆಯಾಗಿ 6 ತಿಂಗಳಾದರೂ ಕಚೇರಿಗಳು ಸ್ಥಳಾಂತರಗೊಂಡಿಲ್ಲ. ಅಲ್ಪಪ್ರಮಾಣದಲ್ಲಿ ಉಳಿದಿರುವ ಕಾಮಗಾರಿಗಳನ್ನು ತಿಂಗಳೊಳಗೆ ಪೂರ್ಣಗೊಳಿಸಿ ಮುಂದಿನ ಜೂನ್ 19ಕ್ಕೆ ಕಚೇರಿಗಳು ಸ್ಥಳಾಂತರಗೊಳ್ಳುವುದು ಖಚಿತ ಎಂದು ಶಾಸಕ ನಾರಾಯಣಸ್ವಾಮಿ ಹೇಳಿದರು.
ಮಿನಿ ವಿಧಾನಸೌಧ ಕಟ್ಟಡ ಕಾಮಗಾರಿ ಪೂರ್ಣಗೊಂಡಿದ್ದು ಇಲ್ಲಿಗೆ ಬರುವ ಸಾರ್ವಜನಿಕರಿಗೆ ಶೌಚಾಲಾಯ ನಿರ್ಮಾಣಕ್ಕೆ ಅಂದಾಜು ವೆಚ್ಚದಲ್ಲಿ ಪ್ರಸ್ತಾವನೆ ಇಲ್ಲದ ಕಾರಣ ಶೌಚಾಲಯ ನಿರ್ಮಾಣ ಮಾಡಿಲ್ಲ. ಇಲ್ಲಿಗೆ ಬರುವ ಸಾರ್ವಜನಿಕರಿಗೆ ಶೌಚಾಲಯವಿಲ್ಲದಿದ್ದರೆ ತೊಂದರೆಯಾಗುವುದು ಮೊದಲು ಶೌಚಾಲಯ ನಿರ್ಮಿಸಿ ನಂತರ ಕಚೇರಿಗಳನ್ನು ಸ್ಥಳಾಂತರಿಸಲಾಗುವುದು. ಜೂನ್ 19ರಂದು ತಾಲೂಕು ಕಚೇರಿ ಎಪಿಎಂಸಿ ಯಾರ್ಡ್‌ನಿಂದ ನೂತನ ಕಟ್ಟಡಕ್ಕೆ ಸ್ಥಳಾಂತರವಾಗಲಿದೆ ಎಂದು ತಿಳಿಸಿದರು. ನಂತರ ಮಿನಿವಿಧಾನಸೌಧ ಕಟ್ಟಡ ಒಳಗಿನ ಕಾಮಗಾರಿ ಬಗ್ಗೆ ಪರಿಶೀಲಿಸಿದರು.
ಶಿಬಿರಗಳು ಜ್ಞಾನವೃದ್ಧಿಗೆ ಪೂರಕವಾಗಿರಲಿ: ರಮಣಾರೆಡ್ಡಿ
ಚಿಂತಾಮಣಿ:ಬೇಸಿಗೆ ಶಿಬಿರಗಳು ಮಕ್ಕಳ ಜ್ಞಾನವೃದ್ಧಿಗೆ ಪೂರಕವಾಗಿರಬೇಕು ಎಂಬುದಾಗಿ ಪ್ರೌಢ ಶಾಲೆಯ ಶಿಕ್ಷಕ ಕೆ.ಎನ್.ರಮಣಾರೆಡ್ಡಿ ತಿಳಿಸಿದರು. ನಗರದ ಮಹಾತ್ಮ ಗಾಂಧಿ ಸರ್ಕಾರಿ ಬಾಲಕರ ಪ್ರೌಢಶಾಲೆಯಲ್ಲಿ ತಾಲೂಕು ಕ್ನನಡ ಸಾಹಿತ್ಯ ವೇದಿಕೆ ಹಾಗೂ ಚುಟುಕು ಸಾಹಿತ್ಯ ಪರಿಷತ್‌ವತಿಯಿಂದ ಆಯೋಜಿಸಲಾಗಿದ್ದ ಉಚಿತ ಬೇಸಿಗೆ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದರು.
ಇಂಥ ಶಿಬಿರಗಳಿಂದ ಮಕ್ಕಳಲ್ಲಿರುವ ಪ್ರತಿಭೆಯು ಅನಾವರಣಗೊಳ್ಳುವುದಲ್ಲದೆ ಅವರಿಗೆ ಹೆಚ್ಚಿನ ಅವಕಾಶಗಳು ಹಾಗೂ ಪ್ರೋತ್ಸಾಹ ದೊರೆಯುವಂತಾಗುತ್ತದೆ ಎಂದು ನುಡಿದರು.
ಮುಖ್ಯ ಅತಿಥಿಯಾಗಿ ಪಾಲ್ಗೊಂಡಿದ್ದ ಚುಟುಕು ಸಾಹಿತ್ಯ ಪರಿಷತ್ತಿನ ಚಿಕ್ಕಬಳ್ಳಾಪುರ ಜಿಲ್ಲಾಧ್ಯಕ್ಷರಾದ ಪಿ.ಎಂ.ಚಲಪತಿಗೌಡ, ಚುಸಾಪ ಅಧ್ಯಕ್ಷರಾದ ಕಾಗತಿ ವಿ.ವೆಂಕಟರತ್ನಂ ಮಾತನಾಡಿದರು.
ಶಿಬಿರದಲ್ಲಿ ಭಾವಗೀತೆ, ಜನಪದಗೀತೆ, ಪ್ರಬಂಧ ರಚನೆ, ಯೋಗಾಭ್ಯಾಸ, ಸಾಮಾನ್ಯ ಜ್ಞಾನ ಪರೀಕ್ಷೆ ಮುಂತಾದ ಚಟುವಟಿಕೆಗಳು ನಡೆದವು. ಕುಮಾರಿ ದೀಪ್ತಿ, ಕೋಲಾರದ ಪೋಸ್ಟ್ ನಾರಾಯಣಸ್ವಾಮಿ, ಯೋಗಗುರು ನಾರಾಯಣಪ್ಪ, ಎನ್.ಅರುಣ, ಕೀರ್ತಿ ಬಸಪ್ಪ ಲಗಳಿ, ಎಂ.ವಿ.ಅಶ್ವಥನಾರಾಯಣ ಮುಂತಾದವರು ಸಂಪನ್ಮೂಲ ವ್ಯಕ್ತಿಗಳಾಗಿ ಕಾರ್ಯ ನಿರ್ವಹಿಸಿದ್ದರು.
ಕಾರ್ಯಕ್ರಮದಲ್ಲಿ ಕೆ.ಎನ್.ಅಕ್ರಂಪಾಷ, ಎಸ್.ಸಿ.ಶ್ರೀನಿವಾಸರೆಡ್ಡಿ, ಎನ್.ತ್ಯಾಗರಾಜ್, ಕೆ.ಕೃಷ್ಣಪ್ಪ, ಹಸೀನಾಬೇಗಂ, ಎಂ.ಎಸ್.ಸೀತಮ್ಮ, ಕಾಂತ, ದೇವರಮಳ್ಳೂರು ಚನ್ನಕೃಷ್ಣ, ಗಾಯಿತ್ರಿ ಸ್ವೀಟ್ಸ್ ಅಮರನಾಥ, ಎನ್.ವಿ.ಶ್ರೀನಿವಾಸನ್, ಬಿ.ನಂಜುಂಡಪ್ಪ, ಶಿವಪ್ರಕಾಶ್ ಚಿಂತಾಮಣಿ, ಆರ್.ಶಿವಕುಮಾರ್ ಉಪಸ್ಥಿತರಿದ್ದರು.
ವಿಜೃಂಭಣೆಯ ಶ್ರೀರಾಮ ಸಪ್ತಾಹ ಆಚರಣೆ
ಶಿಡ್ಲಘಟ್ಟ: ಶ್ರೀರಾಮ ಸಪ್ತಾಹ ಮತ್ತು 8ನೇ ವರ್ಷದ ವಾರ್ಷಿಕೋತ್ಸವ ಹಾಗೂ ಅನ್ನ ಸಂತರ್ಪಣೆ ಕಾರ್ಯಕ್ರಮವನ್ನು ವಿಜೃಂಭಣೆಯಿಂದ ಆಯೋಜಿಸಲಾಗಿತ್ತು.
ತಾಲೂಕಿನ ಹಂಡಿಗನಾಳ ಗ್ರಾಪಂ ವ್ಯಾಪ್ತಿಯ ಅಪ್ಪೇಗೌಡನಹಳ್ಳಿ ಗ್ರಾಮದ ಶ್ರೀರಾಮ ಯುವಕರ ಸಂಘದಿಂದ ಆಯೋಜನೆ ಮಾಡಲಾಗಿದ್ದ ಈ ಕಾರ್ಯಕ್ರಮದಲ್ಲಿ ಸುಪ್ರಭಾತ ಸೇವೆ, ಹೋಮ ಹವನಗಳು, ರಕ್ಷಾಬಂಧನ, ಪಂಚಗವ್ಯ, ಕಳಶಸ್ಥಾಪನೆ, ಅಗ್ನಿಪ್ರತಿಷ್ಠೆ, ಗಣಹೋಮ, ನವಗ್ರಹ ಹೋಮ, ಶ್ರೀರಾಮ ತಾರಕ ಹೋಮ, ಅಭಿಷೇಕ, ಅಲಂಕಾರಸೇರಿದಂತೆ ಅಖಂಡ ಶ್ರೀರಾಮ ಸಂಕೀರ್ತನಾ ಸಪ್ತಾಹ ಕಾರ್ಯಗಳನ್ನು ಹಮ್ಮಿಕೊಳ್ಳಲಾಗಿತ್ತು. ಗ್ರಾಮದ ಪ್ರತಿಯೊಂದು ಕುಟುಂಬದಿಂದಲೂ ತಂಬಿಟ್ಟು ದೀಪಗಳ ಸೇವೆಯನ್ನು ಅರ್ಪಣೆ ಮಾಡಲಾಯಿತು. ಸುತ್ತಮುತ್ತಲ ಗ್ರಾಮಗಳಿಂದ ಆಗಮಿಸಿದ್ದ ಭಜನಾ ತಂಡಗಳು ವಿವಿಧ ಬಗೆಯ ಭಜನೆ ಕಾರ್ಯಕ್ರಮಗಳನ್ನು ನಡೆಸಿಕೊಟ್ಟಿದ್ದಾರೆ.
ಕೆಜಿಎಫ್‌ನಲ್ಲಿ ಉಚಿತ ಆರೋಗ್ಯ ತಪಾಸಣೆ ಶಿಬಿರ
ಕೆಜಿಎಫ್: ಮೇ ದಿನಾಚರಣೆ ಪ್ರಯುಕ್ತ ಆಟೋ ರಿಕ್ಷಾ ಚಾಲಕರ ಸಂಘ (ಎಆರ್‌ಡಿಯು-ಸಿಐಟಿಯು) ವತಿಯಿಂದ ಆಂಡ್ರಸನ್‌ಪೇಟೆಯ ನಮ್‌ಪೆರುಮಾಳ್ ಪ್ರಾಥಮಿಕ ಶಾಲೆಯಲ್ಲಿ ಉಚಿತ ಆರೋಗ್ಯ ತಪಾಸಣೆ ಶಿಬಿರ ಏರ್ಪಡಿಸಲಾಗಿತ್ತು.
ಆಂಡ್ರಸನ್‌ಪೇಟೆ, ಮಾರಿಕುಪ್ಪಂ, ಚಾಂಪಿಯನ್‌ರೀಫ್ ಸೇರಿದಂತೆ ಸುತ್ತಮುತ್ತಲಿನ ಗ್ರಾಮಸ್ಥರು ಸೇರಿ ಸುಮಾರು 300ಕ್ಕೂ ಹೆಚ್ಚು ಮಂದಿಗೆ ಬೆನ್ನು ಮತ್ತು ಮಂಡಿ ನೋವು, ಮಕ್ಕಳು ಮತ್ತು ಮಹಿಳೆಯರಿಗೆ ಸಂಬಂಧಿಸಿದ ಕಾಯಿಲೆಗಳು, ಕಿವಿ, ಮೂಗು, ಗಂಟಲು ಸಮಸ್ಯೆ, ರಕ್ತದೊತ್ತಡ, ಮಧುಮೇಹ ಹಾಗೂ ಇತರೆ ಸಾಮಾನ್ಯ ಕಾಯಿಲೆಗಳಿಗೆ ತಪಾಸಣೆ ನಡೆಸಿ ಉಚಿತ ಔಷಧಿ ವಿತರಿಸಲಾಯಿತು.
ಶಿಬಿರದಲ್ಲಿ ಸಂಭ್ರಮ ಕಾಲೇಜು ಹಾಗೂ ಸಂಶೋಧನಾ ಕೇಂದ್ರದ ಪ್ರಾಂಶುಪಾಲ ಟಿ.ಎಚ್. ಆಂಜನಪ್ಪ, ವೈದ್ಯರಾದ ಡಾ. ಷಣ್ಮುಗಂ, ಡಾ. ಕರುಣಾಕರಣ್, ಡಾ. ಲಕ್ಷ್ಮೀಕುಮಾರ್, ಡಾ. ಹನುಮಂತಾಚಾರಿ, ಡಾ. ಲಕ್ಷ್ಮೀ ಸೇರಿದಂತೆ ಸಿಐಟಿಯು ಅಧ್ಯಕ್ಷ ಪಿ. ತಂಗರಾಜ್, ರಾಮಮೂರ್ತಿ, ಲಿಯೋ, ಅಮಲ್‌ರಾಜ್, ಮಿಲ್ಕೋ, ಜಯಕಾಂತ್ ಮತ್ತಿತರರು ಹಾಜರಿದ್ದರು.
ಆಂಜನೇಯಸ್ವಾಮಿ ರಥೋತ್ಸವ ಪ್ರಾರಂಭ
ಮುಳಬಾಗಲು: ಪಟ್ಟಣದ ಪುರಾಣ ಪ್ರಸಿದ್ಧ ಆಂಜನೇಯಸ್ವಾಮಿ ದೇವಾಲಯದ ರಥೋತ್ಸವದ ಅಂಗವಾಗಿ ಮಂಗಳವಾರ ಆಂಜನೇಯಸ್ವಾಮಿ ಉತ್ಸವ ಮೂರ್ತಿ ಮೆರವಣೆಗೆ ಮಂಗಳವಾರ ನಡೆಯಿತು.
ಸೋಮವಾರ ಅಂಕುರಾರ್ಪಣೆ, ಮಂಗಳವಾರ ಮಂಟಪೋತ್ಸವ ಹಾಗೂ ಧ್ವಜರೋಹಣ ಮೇ 8ರಂದು ಉತ್ಸವ ದೇವರಿಗೆ ತಿರುಮಂಜನ ನಿವೇದನೆ, ಶೇಷವಾಹನೋತ್ಸವ, ಮೇ9ರಂದು ಹನುಂತೋತ್ಸವ, ಮೇ10 ರಂದು ಗಜವಾಹನೋತ್ಸವ, ಮೇ 11 ಕಲ್ಯಾಣೋತ್ಸವ, ಗರುಡೋತ್ಸವ, ಮೂಲ ಆಂಜನೇಯದೇವರಿಗೆ ಅಭಿಷೇಕ, ಮೇ 12ರ ಸೋಮವಾರ ಸರ್ಕಾರದ ಪರವಾಗಿ ಬ್ರಹ್ಮರಥೋತ್ಸವ ಕಾರ್ಯಕ್ರಮಗಳು ನಡೆಯಲಿವೆ. ಅಂದು ಮೂಲ ದೇವರಿಗೆ ಅಭಿಷೇಕ ಕಲ್ಯಾಣೋತ್ಸವ, ಕೃಷ್ಣ ಗಂಥೋತ್ಸವ, ಯಾತ್ರದಾನ ಪೂರ್ವಕ ನವಗ್ರಹ ಪೂಜೆ, ಪಂಚಕಜ್ಜಾಯ ನಿವೇದನೆ ಮತ್ತು ಚಾಮರ ಸೇವೆ ಕಾರ್ಯಕ್ರಮಗಳು ನಡೆಯುವುದು.    
ಜಾರಿಬಿದ್ದು ಕುರಿಗಾಹಿ ಸಾವು
ಕೋಲಾರ/ಮಾಲೂರು: ಮಾಲೂರಿನ ಕೈಗಾರಿಕಾ ಪ್ರಾಂಗಣದಲ್ಲಿರುವ ಅಸೋಸಿಯೇಟ್ ಡೆಕೋರಾ ಪ್ರೈವೆಟ್ ಲಿ.ನ ಫ್ಲೈವುಡ್ ಕಾರ್ಖಾನೆಗೆ ಸೇರಿದ ಕುಂಟೆಯಲ್ಲಿ ಮಂಗಳವಾರ ಕುರಿ ಮೇಯಿಸುತ್ತಿದ್ದ ವ್ಯಕ್ತಿಯೊಬ್ಬ ಕಾಲು ಜಾರಿ ಬಿದ್ದು ಮೃತಪಟ್ಟಿರುವ ಘಟನೆ ನಡೆದಿದೆ.
ಮಾಲೂರು ತಾಲೂಕಿನ ಬ್ಯಾಲಹಳ್ಳಿಯ ನಿವಾಸಿ ಮುನಿಸ್ವಾಮಿ(60) ವೃತಪಟ್ಟವ. ಈ ಘಟನೆಗೆ ಕಾರ್ಖಾನೆಯ ಮಾಲಿಕರ ದಿವ್ಯ ನಿರ್ಲಕ್ಷ್ಯವೇ ಕಾರಣವೆಂದು ಗ್ರಾಮಸ್ಥರು ದಾಳಿ ಮಾಡಿ ಕಾರ್ಖಾನೆ ಕಚೇರಿಯ ಗಾಜುಗಳನ್ನು ಹಾಗೂ ಪೀಠೋಪಕರಣಗಳನ್ನು ದ್ವಂಸ ಮಾಡಿದ್ದಾರೆ.
ಕಾರ್ಖಾನೆಯ ಮಾಲಿಕರು ತ್ಯಾಜ್ಯದ ನೀರನ್ನು ಶೇಖರಣೆ ಮಾಡಲು ದೊಡ್ಡದಾದ ಕುಂಟೆಯನ್ನು ನಿರ್ಮಿಸಿ, ಅದಕ್ಕೆ ಯಾವುದೇ ರೀತಿಯ ಬೇಲಿ ಹಾಕದೆ ನಿರ್ಲಕ್ಷ್ಯ ವಹಿಸಿದ್ದಾರೆ. ಕುರಿ ಮೇಯಿಸುತ್ತಿದ್ದ ಮುನಿಸ್ವಾಮಿ ನೀರಿಗೆ ಕುರಿಗಳು ಬೀಳುವುದನ್ನು ತಪ್ಪಿಸಲು ಹೋದಾಗ ಕಾಲು ಜಾರಿ ಕಲುಷಿತ ನೀರಿನಲ್ಲಿ ಮುಳುಗಿ ಉಸಿರುಗಟ್ಟಿ ಸತ್ತಿದ್ದಾರೆಂದು ಆರೋಪಿಸಿದ್ದಾರೆ.
ಮಾಲೀಕರಿಗೆ ಅನೇಕ ಸಾರಿ ಕುಂಟೆಯ ಬಗ್ಗೆ ತಿಳಿಸಿದರೂ ಕ್ರಮ ಕೈಗೊಂಡಿಲ್ಲ. ಕಾರ್ಖಾನೆಯಿಂದ ಹೊರ ಬರುವ ತ್ಯಾಜ್ಯವನ್ನು ಕುಂಟೆಯಲ್ಲಿ ಶೇಖರಣೆ ಮಾಡುವುದರಿಂದ ಪರಿಸರಕ್ಕೆ ಹಾನಿ ಆಗುತ್ತಿದೆ. ಕುಂಟೆಯ ಸುತ್ತ ಬೇಲಿ ಹಾಕಿಸದೆ ಬೇಜಾವಾಬ್ದಾರಿ ಪ್ರದರ್ಶಿಸಿದ್ದಾರೆ. ಮೃತನ ಕುಟುಂಬ ಯಾಜಮಾನನ ಸಾವಿನಿಂದ ತೊಂದರೆಗೆ ಸಿಲುಕಿರುವುದರಿಂದ ಮಾಲಿಕರು 15 ಲಕ್ಷ ಪರಿಹಾರ ನೀಡಬೇಕೆಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.
ಗ್ರಾಮಸ್ಥರ ದಾಳಿಯ ವಿಷಯ ತಿಳಿದ ಕೂಡಲೇ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಸ್ಥಿತಿ ನಿಯಂತ್ರಿಸಿದ್ದಾರೆ. ಕಚೇರಿಯ ಗ್ಲಾಸುಗಳನ್ನು ಒಡೆದು ಹಾಕಿರುವುದಲ್ಲದೆ. 6ಕ್ಕೂ ಹೆಚ್ಚು ಕಂಪ್ಯೂಟರ್‌ಗಳು, ಜೆರಾಕ್ ಯಂತ್ರ, 4 ಕಾರುಗಳ ಗಾಜುಗಳನ್ನು ಒಡೆದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಒಡವೆ ಕದ್ದಿದ್ದ ಕೆಲಸದಾಕೆ
ಕೆಜಿಎಫ್: ಮಾಜಿ ಶಾಸಕ ಹಾಗೂ ಆರ್‌ಪಿಐ ರಾಷ್ಟ್ರೀಯ ಅಧ್ಯಕ್ಷ ಎಸ್.ರಾಜೇಂದ್ರ ಅವರ ಮನೆಯಲ್ಲಿ ಲಕ್ಷಾಂತರ ಬೆಲೆ ಬಾಳುವ ವಜ್ರ ಹಾಗೂ ಚಿನ್ನದ ಒಡವೆಗಳು ಕಳುವಾಗಿರುವ ಘಟನೆ ರಾಬರ್ಟ್‌ಸನ್ಪೇಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಶಾಸಕರ ಮನೆಯಲ್ಲಿ ಕೆಲಸಕ್ಕಿದ್ದ ದೇವಿ ಎಂಬಾಕೆಯೇ ಕದ್ದಿರುವುದ ಪೊಲೀಸ್ ವಿಚಾರಣೆ ವೇಳೆ ಗೊತ್ತಾಗಿದೆ. ಆರು ತಿಂಗಳಿಂದ ಮನೆಯಲ್ಲಿನ ಒಂದೊಂದು ಒಡವೆಗಳು ಕಳುವಾಗುತ್ತಿದ್ದರೂ ಮನೆಯ ಯಜಮಾನರಿಗೆ ಗೊತ್ತಾಗಿರಲಿಲ್ಲ. ಆದರೆ, ಅಕ್ಷಯ ತೃತೀಯ ದಿನ ವಜ್ರದ ಉಂಗುರು ಮಾರಿ, ಬೇರೆ ಒಡವೆ ಖರೀದಿಸು ಮುಂದಾಗ ಕಳುವಾಗುತ್ತಿರುವುದ ಗೊತ್ತಾಗಿದೆ. ಈ ಬಗ್ಗೆ ಶಾಸಕರ ಸಹೋದರ ಸುರೇಶ್‌ಬಾಬು ಪೊಲೀಸರಿಗೆ ದೂರು ನೀಡಿ, ಮನೆ ಕೆಲಸದಾಕೆಯ ಮೇಲೆ ಅನುಮಾನ ವ್ಯಕ್ತಪಡಿಸಿದ್ದರು. ಪೊಲೀಸರು ಆಕೆಯನ್ನು ವಿಚಾರಣೆಗೊಳಪಡಿಸಿದಾಗ ಕದ್ದಿರುವುದನ್ನು ಆಕೆ ಒಪ್ಪಿಕೊಂಡಿದ್ದಾಳೆ. ಅಲ್ಲದೆ, ಕದ್ದಿರುವ ಒಡವೆಗಳನ್ನು  ಪಾರ್ಥಿ ಎಂಬುವರ ಬಳಿ ಅಡವಿಟ್ಟಿರುವುದಾಗಿ ಮಾಹಿತಿ ನೀಡಿದ್ದಾಳೆ. ಬಳಿಕ ಪೊಲೀಸರು 25 ಲಕ್ಷ ಮೌಲ್ಯದ ವಜ್ರ ಹಾಗೂ ಚಿನ್ನದ ಒಡವೆಗಳನ್ನು ವಶಪಡಿಸಿಕೊಂಡು ದೇವಿಯನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement