ರೈತರ ಮನೆ ಬಾಗಿಲಿಗೆ ಯೋಜನೆ ಅನುಷ್ಠಾನ
ಕೋಲಾರ: ಮಧ್ಯವರ್ತಿಗಳ ಹಾವಳಿಯಿಲ್ಲದೇ ರೈತರ ಮನೆ ಬಾಗಿಲಿಗೆ ಸಾಲ ಸೌಲಭ್ಯ ತಲುಪಿಸಲು ಡಿಸಿಸಿ ಬ್ಯಾಂಕ್ ಮುಂದಾಗಿದೆ ಎಂದು ಕೋಲಾರ-ಚಿಕ್ಕಬಳ್ಳಾಪುರ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಬ್ಯಾಲಹಳ್ಳಿ ಗೋವಿಂದಗೌಡ ತಿಳಿಸಿದರು.
ಜಿಲ್ಲೆಯ ಮಾಲೂರು ತಾಲೂಕಿನ ಗಡಿಗೆ ಹೊಂದಿಕೊಂಡಿರುವ ಹಸಾಂಡಹಳ್ಳಿಯಲ್ಲಿ ರೇಷ್ಮೆ ಬೆಳೆಗಾರರ ಹಾಗೂ ರೈತರ ಸಹಕಾರ ಸಂಘದ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ರೈತರ ಮನೆ ಬಾಗಿಲಿಗೆ ಯೋಜನೆಗೆ ಮಂಗಳವಾರ ಚಾಲನೆ ನೀಡಿ ಮಾತನಾಡಿದ ಅವರು, ಡಿಸಿಸಿ ಬ್ಯಾಂಕ್ ರೈತರಿಗೆ ನೇರ ಸಾಲ ಯೋಜನೆ ರೂಪಿಸಿದ್ದು, ಯಾವುದೇ ಕಾರಣಕ್ಕೂ ಮಧ್ಯವರ್ತಿಗಳಿಂದ ಮೋಸ ಹೋಗಬೇಡಿ ಹಾಗೂ ಸಾಲಕ್ಕಾಗಿ ಲಂಚ ನೀಡುವ ಅಗತ್ಯವಿಲ್ಲ' ಎಂದರು.
ಹಸಾಂಡಹಳ್ಳಿ ಎಸ್‌ಎಫ್‌ಸಿಎಸ್ ತನ್ನ 22.70 ಲಕ್ಷ ಹಳೆ ಸಾಲ ಮರುಪಾವತಿಸಿದ್ದೇ ಆದಲ್ಲಿ ಕೂಡಲೇ ಸೂಚಿಸಿದ ಎಲ್ಲಾ ಅರ್ಹ ಫಲಾನುಭವಿಗಳಿಗೆ ಅಗತ್ಯವಿರುವಷ್ಟು ಸಾಲ ನೀಡಲು ನಾವು ಬದ್ಧರಾಗಿದ್ದೇವೆಂದು ಭರವಸೆ ನೀಡಿದರು.
ಹಸಾಂಡಹಳ್ಳಿ ಸೊಸೈಟಿಯ ಕಾರ್ಯದರ್ಶಿ ನಾರಾಯಣಸ್ವಾಮಿ ತಕ್ಷಣ ಪ್ರತಿಕ್ರಿಯಿಸಿ, ಎರಡು ದಿನದೊಳಗೆ 22.70 ಲಕ್ಷ ಸಾಲ ಮರುಪಾವತಿಸುವ ಭರವಸೆ ನೀಡಿದರು. ಅಲ್ಲದೆ 8 ಕೋಟಿ ಸಾಲಕ್ಕೆ ಪ್ರಸ್ತಾವನೆ ಸಲ್ಲಿಸಿದರು. ಸೂಸೈಟಿಯ ಕಾರ್ಯದರ್ಶಿಯ ಮಾತುಗಳಿಂದ ಪುಳುಕಿತರಾದ ಡಿಸಿಸಿ ಬ್ಯಾಂಕ್ ಅಧ್ಯಕ್ಷರು ಹೊಸ ಸಾಲದ ಭರವಸೆಯನ್ನು ನೀಡಿದರು.
ಡಿಸಿಸಿ ಬ್ಯಾಂಕ್ ನಿರ್ದೇಶಕ ಶಂಕರನಾರಾಯಣಗೌಡ, ಸ್ತ್ರೀ ಶಕ್ತಿ ಸಂಘಗಳು ಮರುಪಾವತಿಯಲ್ಲಿ ಪ್ರಾಮಾಣಿಕತೆ ಮೆರೆದಿದ್ದು, ಅವರಿಗೆ ಅಗತ್ಯವಾದಷ್ಟು ಸಾಲ ಮಂಜೂರು ಮಾಡುವುದಾಗಿ ತಿಳಿಸಿದರು. ಹಸಾಂಡಹಳ್ಳಿ ಸೊಸೈಟಿ ಅಧ್ಯಕ್ಷ ಕೆ.ಎಚ್.ಚನ್ನರಾಯಪ್ಪ ಕಾರ್ಯಕ್ರಮ ನಿರೂಪಿಸಿದರು. ತುರಣಸೆ ಗ್ರಾಮದ ಎಸ್‌ಎಫ್‌ಸಿಎಸ್ ಅಧ್ಯಕ್ಷ ರಾಮಣ್ಣ, ದೊಡ್ಡಶಿವಾರ ಸೊಸೈಟಿ ಅಧ್ಯಕ್ಷ ಗೋಪಾಲ್, ನೂಟ್‌ವೇ ಸೊಸೈಟಿ ಅಧ್ಯಕ್ಷ ಅಣ್ಣಯ್ಯ, ತಮ್ಮ ಸೊಸೈಟಿಗಳ ಹಳೆ ಸಾಲ ತೀರಿಸುವ ಭರವಸೆ ನೀಡಿದರು.
ಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ಎಚ್.ವಿ.ನಾಗರಾಜ್, ಮಾಲೂರು ಬ್ಯಾಂಕ್ ವ್ಯವಸ್ಥಾಪಕ ಕೃಷ್ಣಪ್ಪ, ತಾಲೂಕು ಸೊಸೈಟಿ ನಿರ್ದೇಶಕ ಕೆಂಚಪ್ಪ, ಪಿಎಲ್‌ಡಿ ಬ್ಯಾಂಕ್ ನಿರ್ದೇಶಕ ರಾಮಸ್ವಾಮಿ, ಗ್ರಾಪಂ ಸದಸ್ಯೆ ಮಂಜುಳಾ ವೆಂಕಟಸ್ವಾಮಿ, ಸೊಸೈಟಿ ನಿರ್ದೇಶಕರಾದ ಮುನಿರತ್ಮಮ್ಮ ಮುನಿರಾಜು, ಮಾರಪ್ಪ, ವೆಂಕಟೇಶಪ್ಪ, ಮುನಿರಾಜು, ನಂಜುಂಡಪ್ಪ ಇದ್ದರು.
ಡಿಸಿಸಿ ಬ್ಯಾಂಕ್ ರೈತರಿಗೆ ನೇರ ಸಾಲ ಯೋಜನೆ ರೂಪಿಸಿದ್ದು, ಯಾವುದೇ ಕಾರಣಕ್ಕೂ ಮಧ್ಯವರ್ತಿಗಳಿಂದ ಮೋಸ ಹೋಗಬೇಡಿ ಹಾಗೂ ಸಾಲಕ್ಕಾಗಿ ಲಂಚ ನೀಡುವ ಅಗತ್ಯವಿಲ್ಲ'
- ಗೋವಿಂದಗೌಡ