ಶಿಕ್ಷಕರ ಹೆಚ್ಚುವರಿ ಖಾಲಿ ಹುದ್ದೆ ಗುರುತಿಸಿ ಸ್ಥಳಾಂತರ
ಕೋಲಾರ: ಜಿಲ್ಲೆಯಲ್ಲಿನ ಪ್ರಾಥಮಿಕ ಮತ್ತು ಪ್ರೌಢಶಾಲಾ ಹೆಚ್ಚುವರಿ ಶಿಕ್ಷಕರ ಸ್ಥಳಾಂತರದ ತಾತ್ಕಾಲಿಕ ಪಟ್ಟಿಯನ್ನು ಜಿಲ್ಲೆಯ ಆಯಾ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿಯ ಸೂಚನಾ ಫಲಕದಲ್ಲಿ ಪ್ರಕಟಿಸಲಾಗಿದೆ. ಆಕ್ಷೇಪಣೆ ಇದ್ದಲ್ಲಿ ಮೇ 8ರಂದು ಬೆಳಗ್ಗೆ 11ಗಂಟೆ ಒಳಗಾಗಿ ಸಂಬಂಧಿಸಿದ ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಸೂಕ್ತ ದಾಖಲೆಗಳೊಂದಿಗೆ ಸಲ್ಲಿಸಲು ಕಾಲಾವಕಾಶ ನೀಡಲಾಗಿದೆ. ಹೆಚ್ಚುವರಿ ಶಿಕ್ಷಕರ ಸ್ಥಳ ನಿಯುಕ್ತಿಯ ಕೌನ್ಸಿಲಿಂಗ್ನ್ನು ಮೇ 9ರ ಮಧ್ಯಾಹ್ನ 3 ಗಂಟೆಗೆ ಕೋಲಾರ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕರ ಕಚೇರಿಯಲ್ಲಿ ನಿಗದಿಪಡಿಸಲಾಗಿದೆ. ಹೆಚ್ಚುವರಿ ಶಿಕ್ಷಕರ ಪಟ್ಟಿಯಲ್ಲಿನ ಶಿಕ್ಷಕರು ಕೌನ್ಸೆಲಿಂಗ್ಗೆ ಹಾಜರಾಗಲು ಸೂಚಿಸಲಾಗಿದೆ.
ವಿಜೃಂಭಣೆಯ ಹೂವಿನ ಕರಗ
ಗುಡಿಬಂಡೆ: ಪಟ್ಟಣದಲ್ಲಿ ಏರ್ಪಡಿಸಿದ್ದ ಶ್ರೀ ಸಪಲಮ್ಮ ದೇವಿಯ 9ನೇ ವರ್ಷದ ಕರಗ ಮಹೋತ್ಸವ ಭಾನುವಾರ ಸಕಲ ಸಾಂಪ್ರಧಾಯಿಕ ವಿಧಿ ವಿಧಾನಗಳ ನಡುವೆ ವ್ಯೆಭವಯುತವಾಗಿ ನಡೆಯಿತು.
ರಾತ್ರಿ 10 ಗಂಟೆ ವೇಳೆಗೆ ದೇವಸ್ಥಾನದಿಂದ ಹೊರಟ ಕರಗ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ದರ್ಶನ ನೀಡಿತು. ಕರಗ ವೀಕ್ಷಿಸಲು ನೆರೆದಿದ್ದ ಸಹಸ್ರಾರು ಜನ ಕರಗದ ಕುಣಿತಕ್ಕೆ ಭಾವಪರವಶರಾದರು. ಪಟ್ಟಣದಲ್ಲಿ ದಲಿತ ಸಂರಕ್ಷಣಾ ವೇದಿಕೆ ವತಿಯಿಂದ ಅನ್ನದಾನ ಮತ್ತು ವಾದ್ಯಗೋಷ್ಠಿ ಏರ್ಪಡಿಸಲಾಗಿತ್ತು. ಉಳಿದಂತೆ ಜಂಗಮ ಕೋಟೆ ಕಲಾವಿದರಿಂದ ಗಾರುಡಿ ಬೊಂಬೆಯಾಟ ಪ್ರದರ್ಶನ, ಸ್ಥಳೀಯ ಕಲಾವಿದರಿಂದ ಚಕ್ಕೆ ಭಜನೆ, ಕೀಲು ಕುದುರೆ ನೃತ್ಯ ಸೇರಿದಂತೆ ಹಲವು ಮನರಂಜನಾ ಕಾರ್ಯಕ್ರಮಗಳು ನಡೆದವು. ಕರಗ ಹೊತ್ತಿದ್ದ ಆಂಧ್ರ ಪ್ರದೇಶದ ಕುಪ್ಪಂ ಬಾಲಾಜಿಸ್ವಾಮಿ ತಮ್ಮ ತಂಡದ ತಮಟೆ ವಾದನಕ್ಕೆ ತಕ್ಕಂತೆ ಲಯಬದ್ದವಾಗಿ ಕುಣಿದು ನೆರದವರ ಮನ ರಂಜಿಸಿದರು. ಈ ವೇಳೆ ಪಪಂ ಅಧ್ಯಕ್ಷ ರಿಯಾಜ್ ಪಾಷ, ಉಪಾಧ್ಯಕ್ಷ ರಾಜಣ್ಣ, ಸದಸ್ಯರಾದ ದ್ವಾರಕಿನಾಥ ನಾಯ್ಡು, ಚಂದ್ರಶೇಖರ್, ರಮೇಶ್, ಲಕ್ಷ್ಮಿಕಾಂತಮ್ಮ, ವೆಂಕಟ ಲಕ್ಷಮ್ಮ, ಚಾಂದ್ ಪಾಷ, ಅಪ್ಸರ್ ಸೇರಿ ಅನೇಕರಿದ್ದರು.
ಮುಳಬಾಗಲಿನಲ್ಲಿ ಸಂಭ್ರಮದ ಉರುಸ್
ಕೋಲಾರ: ಮುಳಬಾಗಲು ಹಜರತ್ ಬಾಬಾ ಹೈದರ್ ಅವಲಿಯಾ ದರ್ಗಾದಲ್ಲಿ ಪ್ರತಿವರ್ಷ ನಡೆಯುವಂತೆ ಈ ಬಾರಿಯೂ ಸಹ 761ನೇ ಉರುಸ್ ಸಮಾರಂಭವು ವಿಜೃಂಭಣೆಯಿಂದ ನಡೆಯಲಿದೆ. ಸದರಿ ಉರುಸ್ಗೆ ದಕ್ಷಣ ಭಾರತದ ತಮಿಳುನಾಡು, ಆಂಧ್ರಪ್ರದೇಶ ಹಾಗೂ ಮಹಾರಾಷ್ಟ್ರದಿಂದ ಸಾವಿರಾರು ಹಿಂದು, ಮುಸ್ಲಿಂ ಭಕ್ತರು ಭೇದಭಾವವಿಲ್ಲದೆ ಹರಿಕೆಗಳನ್ನು ಹೊತ್ತು ತಮ್ಮ ಹರಿಕೆಗಳನ್ನು ತೀರಿಸಲು ಬಾಬಾ ಹೈದರ್ ಅವಲಿಯಾ ದರ್ಗಾಗೆ ಆಗಮಿಸುತ್ತಾರೆ.
ಸದರಿ ದರ್ಗಾಗೆ ಈಗಾಗಲೇ 760 ವರ್ಷಗಳಿಂದ ಉರುಸ್ ಮಹೋತ್ಸವ ಆಚರಿಸುತ್ತಿದ್ದು, ಈ ವರ್ಷ ಮೇ 9 ರಿಂದ 15ರವರೆಗೆ ನಡೆಯಲಿವೆ ಎಂದು ಮುಜಾವರ್ ಸರ್ದಾರ್ ಪಾಷ ಮತ್ತು ಸಮಾಜಸೇವಕ ಮಹಬೂಬ್ ಪಾಷ (ಬಾಬೂಜಿ) ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಮೇ 9ರಂದು ರಾತ್ರಿ 11ಗಂಟೆಗೆ ಜೋಗಿ ಗದೀ ನಷೀನ್, 10ರಂದು ಶನಿವಾರ ದರ್ಗಾ ಷರೀಫ್ನಲ್ಲಿ ಅಭಿಷೇಕ, 11ರಂದು ರಾತ್ರಿ 11 ಗಂಟೆಯಿಂದ ಗಂಧೋತ್ಸವ, 12ರಂದು ಮಧ್ಯಾಹ್ನ ಶಾಂತಿ ಮತ್ತು ಸಂತೋಷದ ಕಲೆಯಾದ ಕುಸ್ತಿ ಸ್ಪರ್ಧೆ ಮತ್ತು ರಾತ್ರಿ ಕವಾಲಿ, 13ರಂದು ಮಧ್ಯಾಹ್ನ ಕುಸ್ತಿ ಸ್ಪರ್ಧೆ, ಬಹುಮಾನಗಳ ವಿತರಣೆ, ರಾತ್ರಿ ಕವಾಲಿ ಮತ್ತು ಗದೀ ನಷೀನ್ ಕಾರ್ಯಕ್ರಮ ಮುಕ್ತಾಯಗೊಳ್ಳಲಿದೆ.
'ಬಹುತೇಕ ಗ್ರಾಮಕ್ಕೆ ರಸ್ತೆ ಸೌಲಭ್ಯ'
ಕೋಲಾರ: ತಾಲೂಕಿನ ವಕ್ಕಲೇರಿ ಹೋಬಳಿಯ ಬಹುತೇಕ ಗ್ರಾಮಗಳಲ್ಲಿ ಮೂಲ ಸೌಲಭ್ಯಗಳ ಕೊರತೆ ನೀಗಿಸಿದ್ದು, ಅತ್ಯುತ್ತಮ ರಸ್ತೆ ಸಂಪರ್ಕ ವ್ಯವಸ್ಥೆ ಕಲ್ಪಿಸಲಾಗಿದೆ ಎಂದು ಶಾಸಕ ವರ್ತೂರು ಪ್ರಕಾಶ್ ಹೇಳಿದರು.
ತಾಲೂಕಿನ ವಕ್ಕಲೇರಿಯಲ್ಲಿ ಕೋಲಾರ, ವಕ್ಕಲೇರಿ ಮೂಲಕ ಮಾಲೂರಿಗೆ ರಸ್ತೆ ಕಲ್ಪಿಸುವ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿ ಮಾತನಾಡಿದ ಅವರು, ವಕ್ಕಲೇರಿಯಲ್ಲಿ ಈ ಬೃಹತ್ ಮಟ್ಟದ ರಸ್ತೆ ನಿರ್ಮಾಣ ಯೋಜನಾ ಕಾಮಗಾರಿ ನಡೆಸುತ್ತಿರುವುದಕ್ಕೆ ಸಂತಸವಾಗಿದೆ ಎಂದರು.
ಎಂಬಿಆರ್ ಅನುದಾನದಡಿ ನಡೆಸುತ್ತಿರುವ ಈ ಕಾಮಗಾರಿ ಗುಣಮಟ್ಟದಿಂದ ಕೂಡಿರಬೇಕು ಎಂದು ಗುತ್ತಿಗೆದಾರರಿಗೆ ಸೂಚಿಸಿ, ಕಳಪೆ ಕಾಮಗಾರಿ ನಡೆಸಿದರೆ ಕ್ರಮ ಕೈಗೊಳ್ಳಬೇಕಾದೀತು ಎಂದು ಎಚ್ಚರಿಸಿದರು.
ಈ ಸಂದರ್ಭದಲ್ಲಿ ಬೆಗ್ಲಿ ಪ್ರಕಾಶ್, ತಾಪಂ ಮಾಜಿ ಅಧ್ಯಕ್ಷೆ ರಮಾದೇವಿ, ಗ್ರಾಪಂ ಅಧ್ಯಕ್ಷ ರಾಜಪ್ಪ, ಸದಸ್ಯರಾದ ರಾಘವೇಂದ್ರ, ಹರ್ಷವರ್ಧನ್, ಮಸ್ತಾನ್, ಜ್ಯೋತಿ ಮುನಿಯಪ್ಪ, ವೆಂಕಟಾಚಲಪತಿ, ರತ್ನಮ್ಮ, ತಮ್ಮಣ್ಣ, ನಾರಾಯಣಸ್ವಾಮಿ, ಮಂಜುನಾಥ್ ಮತ್ತಿತರರು ಇದ್ದರು.
ಟೋಲ್ ಶುಲ್ಕ ಹೆಚ್ಚಳ ಖಂಡಿಸಿ ಪ್ರತಿಭಟನೆ
ಚಿಕ್ಕಬಳ್ಳಾಪುರ: ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಬಳಿಯಿರುವ ಟೋಲ್ನಲ್ಲಿ ಸಂಗ್ರಹಿಸುತ್ತಿದ್ದ ರಸ್ತೆ ಸುಂಕವನ್ನು ಏಕಾಏಕಿ ನಾಲ್ಕು ಪಟ್ಟು ಏರಿಕೆ ಮಾಡಿರುವುದನ್ನು ಖಂಡಿಸಿ ತಾಲೂಕಿನ ನಂದಿಕ್ರಾಸ್ ಬಳಿ ರಾಷ್ಟ್ರೀಯ ಹೆದ್ದಾರಿ ಬಂದ್ ಮಾಡಿ ರೈತರು ಪ್ರತಿಭಟಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ವಕೀಲ ನಂದಿಮೂರ್ತಿ, ಸರ್ಕಾರ ಯಾವುದೇ ಮುನ್ಸೂಚನೆ ಇಲ್ಲದೆ ರಾತ್ರೋರಾತ್ರಿ ಟೋಲ್ ಶುಲ್ಕವನ್ನು ಏರಿಕೆ ಮಾಡಿರುವುದು ಜನವಿರೋಧಿ ನೀತಿಯಾಗಿದೆ. ಚುನಾವಣೆ ಮುಗಿದ ಕೆಲವೇ ದಿನಗಳಲ್ಲಿ ರಸ್ತೆ ಸುಂಕವನ್ನು ನಾಲ್ಕು ಪಟ್ಟು ಹೆಚ್ಚಿಸಿರುವುದು ರೈತರ ಹಾಗೂ ಜನಸಾಮಾನ್ಯರ ಹೊಟ್ಟೆಗೆ ಹೊಡೆದಿರುವುದು ಸರಿಯಲ್ಲ. ಈ ವಿಚಾರವಾಗಿ ರಾಜ್ಯದ ಲೋಕೋಪಯೋಗಿ ಸಚಿವರು ಸಮರ್ಥಿಸಿಕೊಂಡು ಮಾತನಾಡಿರುವುದು ದುರದೃಷ್ಟಕರ ಎಂದರು.
ರೇಷ್ಮೆಕೃಷಿ ಹಿತರಕ್ಷಣಾ ವೇದಿಕೆ ಸಂಚಾಲಕ ಯಲುವಹಳ್ಳಿ ಸೊಣ್ಣೇಗೌಡ, ಟೋಲ್ ವಿರೋಧಿ ಒಕ್ಕೂಟದ ಸಂಚಾಲಕ ರವಿಕುಮಾರ್ ಮಾತನಾಡಿದರು. ಪ್ರತಿಭಟನೆಯಲ್ಲಿ ಅಧ್ಯಕ್ಷ ಚದಲುಪುರ ನಾರಾಯಣಸ್ವಾಮಿ, ಕೊಳವನಹಳ್ಳಿ ವಾಸುದೇವ್, ಡಿ.ಹೊಸೂರು ಬಾಲಣ್ಣ, ನಂದಿ ಬಾಬು, ಪತಿ, ದೊಡ್ಡಮುರಳಿ, ಎಂ.ಎಫ್.ಸಿ.ನಾರಾಯಣಸ್ವಾಮಿ, ಸುಧಾ ವೆಂಕಟೇಶ್, ದೇವಿಶೆಟ್ಟಿಹಳ್ಳಿ ರಾಮಲಿಂಗರಾಜ್, ಮಳ್ಳೂರು ಹರೀಶ್, ಕಲ್ಯಾಣ್ ಬಾಬು, ಬೀಡಗಾನಹಳ್ಳಿ ನಾರಾಯಣಸ್ವಾಮಿ, ಮನೋಹರ್, ಮುನಿಯಪ್ಪ, ಮೋಹನ್ ಕುಮಾರ್ ಇತರರು ಹಾಜರಿದ್ದರು.
ಬಸ್ ದರ ಏರಿಕೆ: ಕರವೇ ಪ್ರತಿಭಟನೆ
ಮಾಲೂರು: ರಾಜ್ಯ ಸರ್ಕಾರವು ಏಕಾಏಕಿ ಬಸ್ ದರ ಹೆಚ್ಚಿಸಿರುವುದನ್ನು ಖಂಡಿಸಿ, ಸ್ಥಳೀಯ ಕರವೇ ಕಾರ್ಯಕರ್ತರು ಪಟ್ಟಣದಲ್ಲಿ ಮಂಗಳವಾರ ಒಂದು ಗಂಟೆ ಕಾಲ ರಸ್ತೆ ತಡೆ ನಡೆಸಿ ಪ್ರತಿಭಟನೆ ನಡೆಸಿದರು. ಈ ಸಂಧರ್ಭದಲ್ಲಿ ಮಾತನಾಡಿದ ಕರವೇ ಕಾರ್ಯಧ್ಯಕ್ಷ ಬ.ಶ್ರೀನಿವಾಸ್, ಚುನಾವಣೆ ಮುಗಿದ ತಕ್ಷಣ ಏಕಾ ಏಕಿ ಬಸ್ ದರ ಹೆಚ್ಚಿಸಿರುವುದು ಖಂಡನೀಯ ಎಂದರು. ಮೆರವಣಿಗೆಯಲ್ಲಿ ತೆರಳಿದ ಕರವೇ ಕಾರ್ಯಕರ್ತರು ತಹಸೀಲ್ದಾರ್ ರವರಿಗೆ ಮನಿ ಪತ್ರ ಅರ್ಪಿಸಿದರು. ಸಂಘಟನೆಯ ಎಸ್.ಎಂ.ರಾಜು, ನವೀನ್, ಚೆನ್ನಕೃಷ್ಣ, ಪುರಸಭೆ ಸದಸ್ಯ ಮುರಳೀಧರ್, ಲವಕುಶ, ಆಟೋ ಮಂಜು, ಆಟೋ ಅಮೀರ್, ಲತಾ ಬಾಯಿ ಇದ್ದರು.