ಅತ್ಯಾಚಾರಕ್ಕೆ ವಿಫಲ ಯತ್ನ ಸರ ಕಿತ್ತುಕೊಂಡು ಪರಾರಿ
ಬಂಗಾರಪೇಟೆ: ಮನೆಯ ಹೊರಗಡೆ ಮಲಗಿದ್ದ ಮಹಿಳೆ ಮೇಲೆ ಅತ್ಯಾಚಾರಕ್ಕೆ ಯತ್ನಿಸಿ, ಆಕೆಯ ಕೊರಳಲ್ಲಿದ್ದ ಮಾಂಗಲ್ಯ ಸರವನ್ನು ಕಿತ್ತುಕೊಂಡು ವ್ಯಕ್ತಿಯೊಬ್ಬ ಪರಾರಿಯಾಗಿರುವ ಘಟನೆ ತಾಲೂಕಿನ ಮಗಳಬೆಲೆ ಗ್ರಾಮದಲ್ಲಿ ನಡೆದಿದೆ.
ಗ್ರಾಮದ ಸುನೀತಾ (ಹೆಸರು ಬದಲಾಯಿಸಲಾಗಿದೆ) ಮನೆಯ ಹೊರಗಡೆ ಮಲಗಿದ್ದರು. ಈ ಅವಕಾಶವನ್ನು ದುರ್ಬಳಕೆ ಮಾಡಿಕೊಂಡ ಅದೇ ಗ್ರಾಮದ ಯಲ್ಲಪ್ಪ ಆಕೆಯ ಅತ್ಯಾಚಾರ ಮಾಡಲು ಮುಂದಾಗಿದ್ದಾನೆ. ಆಗ ಸುನೀತಾ ಜೋರಾಗಿ ಕಿರುಚಿಕೊಂಡಿದ್ದಾಳೆ. ಆಗ ಆತ ಗಾಬರಿಗೊಂಡು ಆಕೆಯ ಕೊರಳಲ್ಲಿದ್ದ 50 ಗ್ರಾಮದ ಚಿನ್ನದ ಸರವನ್ನು ಕಿತ್ತುಕೊಂಡು ಪರಾರಿಯಾಗಿದ್ದಾನೆ. ಈ ಬಗ್ಗೆ ಸುನೀತಾ ಪೊಲೀಸರಿಗೆ ಸಲ್ಲಿಸಿರುವ ದೂರಿನಲ್ಲಿ ತಿಳಿಸಿದ್ದಾಳೆ.
ಅಕ್ರಮ ಮದ್ಯ ವಶ
ಮುಳಬಾಗಲು: ತಾಲೂಕಿನ ಗಡಿ ಭಾಗದ ಹೆಬ್ಬಣೆ ಗ್ರಾಮದಲ್ಲಿ ಅಕ್ರಮವಾಗಿ ದಾಸ್ತಾನು ಮಾಡಲಾಗಿದ್ದ ಸುಮಾರು 2.75 ಲಕ್ಷ ಮೌಲ್ಯದ ಮದ್ಯವನ್ನು ಅಬಕಾರಿ ಇಲಾಖೆಯ ಅಧಿಕಾರಿಗಳು ಸೋಮವಾರ ರಾತ್ರಿ ವಶಪಡಿಸಿಕೊಂಡಿದ್ದಾರೆ. ಹೆಬ್ಬಣೆ ಗ್ರಾಮದ ಪೋಸ್ಟ್ ನಾಗರಾಜ್ ತಮ್ಮ ಪಂಪ್ ಹೌಸ್ನಲ್ಲಿ ಅಕ್ರಮವಾಗಿ ಮದ್ಯವನ್ನು ಸಂಗ್ರಹಿಸಿಟ್ಟಿದ್ದರು.ನೆರೆಯ ಆಂಧ್ರದಲ್ಲಿ ನಡೆಯುತ್ತಿರುವ ಚುನಾವಣೆ ಹಿನ್ನಲೆಯಲ್ಲಿ ಮತದಾರರಿಗೆ ವಿತರಿಸಲು ಅದನ್ನು ಸಂಗ್ರಹಿಸಲಾಗಿದೆ ಎಂಬ ದೂರವಾಣೆ ಕರೆಯ ಮೂಲಕ ಮಾಹಿತಿ ಆಧಾರದ ಮೇಲೆ ಅಧಿಕಾರಿಗಳು ದಾಳಿ ಮಾಡಿ ಮದ್ಯವನ್ನು ವಶಪಡಿಸಿಕೊಂಡರು.