ಕೋಚಿಮುಲ್ ಚುನಾವಣೆ: ಜೆಡಿಎಸ್ನಲ್ಲಿ ಪೈಪೋಟಿ
ಕೋಲಾರ: ಮೇ 26ರಂದು ನಡೆಯಲಿರುವ ಕೋಲಾರ-ಚಿಕ್ಕಬಳ್ಳಾಪುರ ಜಿಲ್ಲಾ ಹಾಲು ಒಕ್ಕೂಟದ ಆಡಳಿತ ಮಂಡಳಿಯ ಚುನಾವಣೆಗೆ ಸ್ಪರ್ಧಿಸಲು ಜೆಡಿಎಸ್ನಲ್ಲಿ ತೀವ್ರ ಪೈಪೋಟಿ ಉಂಟಾಗಿರುವುದರಿಂದ ಒಮ್ಮತದ ಅಭ್ಯರ್ಥಿಯ ಆಯ್ಕೆ ಕಗ್ಗಂಟಾಗಿದೆ.
ಮೇ 4ರಂದು ಜೆಡಿಎಸ್ ಮುಖಂಡ ಕೆ.ಶ್ರೀನಿವಾಸಗೌಡರ ನಿವಾಸದಲ್ಲಿ ಕೋಚಿಮುಲ್ಗೆ ಕೋಲಾರ ತಾಲೂಕಿನಿಂದ ಅಭ್ಯರ್ಥಿಯನ್ನು ಕಣಕ್ಕೆ ಇಳಿಸುವ ಸಂಬಂಧ ನಡೆದ ಸಭೆಯಲ್ಲಿ ಏಳು ಮಂದಿ ಚುನಾವಣೆಗೆ ಸ್ಪರ್ಧಿಸಲು ಹಕ್ಕು ಮಂಡಿಸಿದ್ದರಿಂದ ಒಮ್ಮತದ ಆಯ್ಕೆಗೆ ಹಿನ್ನಡೆಯಾಗಿತ್ತು. ಮೇ 7ಕ್ಕೆ ಸಭೆಯನ್ನು ಮುಂದೂಡಲಾಗಿತ್ತು. ಮಾಜಿ ಸಚಿವ ಶ್ರೀನಿವಾಸಗೌಡರ ಸಹೋದರ ಕುಡುವನಹಳ್ಳಿ ಶಿವಣ್ಣ, ಛತ್ರಕೋಡಿಹಳ್ಳಿ ರಾಮಕೃಷ್ಣೇಗೌಡ, ಎಲವಾರ ಸೊಣ್ಣೇಗೌಡ, ಕೆಂದಟ್ಟಿ ಚಂದ್ರೇಗೌಡ, ಮಡಿವಾಳ ರಾಜಣ್ಣ, ಹೊಸಮಟ್ನಹಳ್ಳಿ ವೆಂಕಟೇಶ್ಗೌಡ, ಬ್ಯಾಲಹಳ್ಳಿ ಶಂಕರೇಗೌಡ ಹಾಗೂ ಎಲಚಿಪುರ ನಾಗರಾಜು ಅವರು ಚುನಾವಣೆಗೆ ಸ್ಪರ್ಧಿಸಲು ಪಕ್ಷದಿಂದ ಅವಕಾಶ ಮಾಡಿಕೊಡುವಂತೆ ಮನವಿ ಮಾಡಿದ್ದಾರೆ. ಬುಧವಾರ ಮತ್ತೆ ಶ್ರೀನಿವಾಸಗೌಡರ ಮನೆಯಲ್ಲಿ ನಡೆದ ಸಭೆಯಲ್ಲಿ ಪಾಲ್ಗೊಂಡಿದ್ದ ಆಕಾಂಕ್ಷಿಗಳಾದ ಶಿವಣ್ಣ, ಸೊಣ್ಣೆಗೌಡ, ಶಂಕರೇಗೌಡ ಹಾಗೂ ರಾಮಕೃಷ್ಣೇಗೌಡ ಅವರು ಸ್ಪರ್ಧಿಗೆ ಪಟ್ಟು ಹಿಡಿದಿದ್ದರಿಂದ ಇಂದೂ ಸಹ ಅಭ್ಯರ್ಥಿಯ ಆಯ್ಕೆ ಸಾಧ್ಯವಾಗಲಿಲ್ಲ. ಶ್ರೀನಿವಾಸಗೌಡರ ಸಲಹೆ ಮೇರೆಗೆ ಕೊಠಡಿಯೊಂದರಲ್ಲಿ ಸಮಾಲೋಚಿಸಿದ ವೇಳೆ ಅವಕಾಶಕ್ಕಾಗಿ ಹಠ ಹಿಡಿದ ನಾಲ್ವರು ಆಕಾಂಕ್ಷಿಗಳ ನಡುವೆ ಮಾತಿನ ಚಕಮಕಿ ನಡೆಯಿತು ಎಂದು ತಿಳಿದು ಬಂದಿದೆ.
ಸ್ಪರ್ಧಿಸಲು ಪೈಪೋಟಿ ನಡೆಸಿರುವ ನಾಲ್ವರ ನಡುವೆ ಉಂಟಾದ ವಾಗ್ವಾದದಿಂದ ಬೇಸತ್ತ ಶ್ರೀನಿವಾಸಗೌಡರು ಒಮ್ಮತ ಮೂಡದಿದ್ದರೆ ಅಭ್ಯರ್ಥಿಯ ಆಯ್ಕೆ ಕಷ್ಟವಾಗುತ್ತದೆ. ಇಂತಹವರೇ ಅಭ್ಯರ್ಥಿ ಆಗಬೇಕೆಂದು ನಾನು ಹೇಳುವುದಿಲ್ಲ. ನೀವೇ ನಿರ್ಧಾರ ಕೈಗೊಳ್ಳಿ ಎಂದು ಕೊಠಡಿಯಿಂದ ಹೊರ ಬಂದ ನಂತರ ಅಲ್ಲಿದ್ದ ಮುಖಂಡರು ಮೇ 9ಕ್ಕೆ ಅಂತಿಮ ಸಭೆ ಸೇರೋಣ. ಪ್ರತಿ ಹೋಬಳಿಯಿಂದ ಮೂವರು ಮುಖಂಡರು ಸಭೆಗೆ ಬಂದು ತಮ್ಮ ಅಭಿಪ್ರಾಯ ತಿಳಿಸಲಿ ಎಂದಿದ್ದಾರೆ.