ಗ್ರಾಪಂ ನೌಕರರ ಪ್ರತಿಭಟನೆ ಮುಂದುವರಿಕೆ
ಕೋಲಾರ: ಗ್ರಾಮ ಪಂಚಾಯಿತಿಗಳಲ್ಲಿ ಕೆಲಸ ಮಾಡುವ ನೌಕರರಿಗೆ ಕನಿಷ್ಠ ವೇತನ ಜಾರಿಗೆ ತರಬೇಕು, ಖಾಲಿ ಇರುವ ಬಿಲ್ ಕಲೆಕ್ಟರ್ ಹುದ್ದೆಗಳಿಗೆ ಗ್ರಾಪಂ ನೌಕರರನನ್ನು ಮಾತ್ರ ನೇಮಿಸಬೇಕು, ಎಲ್ಲಾ ಸಿಬ್ಬಂದಿಗೆ ಸೇವಾ ಪುಸಕ್ತವನ್ನು ಜಾರಿಗೊಳಿಸುವುದು ಸೇರಿದಂತೆ ಇನ್ನಿತರ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಗ್ರಾಪಂ ನೌಕರರು ನಡೆಸುತ್ತಿರುವ ಮುಷ್ಕರ ಮುಂದುವರೆಸಿದೆ.
ಜಿಪಂ ಕಚೇರಿ ಮುಂದೆ ಕಳೆದ ಮೂವರು ದಿನಗಳಿಂದ ನೌಕರರು ಅನಿರ್ದಿಷ್ಟ ಧರಣಿ ನಡೆಸುತ್ತಿದ್ದಾರೆ. ಸರ್ಕಾರ ಬೇಡಿಕೆ ಈಡೇರಿಸಲು ಮುಂದಾಗದಿರುವುದರಿಂದ ಧರಣಿ ಸ್ಥಳದಲ್ಲೇ ನೌಕರರು ಅಡುಗೆ ತಯಾರಿಸಿ ತಿಂದು ಮುಷ್ಕರ ಮುಂದುವರೆಸಿದ್ದಾರೆ. ಪ್ರತಿಭಟನೆಯಲ್ಲಿ ಭಾಗವಹಿಸಿದ್ದ ಸಿಐಟಿಯು ಪ್ರಾಯೋಜಿತ ಗ್ರಾಮ ಪಂಚಾಯಿತಿ ನೌಕರರ ಸಂಘದ ಜಿಲ್ಲಾ ಗೌರವಾಧ್ಯಕ್ಷ ಗಾಂಧಿನಗರ ನಾರಾಯಣಸ್ವಾಮಿ, ಸರ್ಕಾರ ಬೇಡಿಕೆ ಈಡೇರಿಸುವವರೆಗೆ ಹೋರಾಟ ಮುಂದುರೆಯುತ್ತಿದೆ ಎಂದು ತಿಳಿಸಿದ್ದಾರೆ. ಜನವಾದಿ ಮಹಿಳಾ ಸಂಘಟನೆಯ ರಾಜ್ಯಾಧ್ಯಕ್ಷೆ ವಿ. ಗೀತಾ, ಡಿವೈಎಫ್ಐನ ತಾಲೂಕು ಕಾರ್ಯದರ್ಶಿ ರಮಣ, ಗ್ರಾಪಂ ನೌಕರರ ಸಂಘದ ಅಮರನಾರಾಯಣ, ಶ್ರೀನಿವಾಸ್, ಕೇಶವರಾವ್ ಪಾಲ್ಗೊಂಡಿದ್ದರು.