ಡೊನೇಷನ್ ನಿಯಂತ್ರಣಕ್ಕೆ ಪ್ರಾಧಿಕಾರ ರಚಿಸಲು ಒತ್ತಾಯ
ಗುಡಿಬಂಡೆ: ರಾಜ್ಯದಲ್ಲಿ ಹಲವೆಡೆ ಶಾಲಾ ಕಾಲೇಜುಗಳು ಸರ್ಕಾರದ ನೀತಿ ನಿಯಮಗಳನ್ನು ಉಲ್ಲಂಘಿಸಿ ಮಿತಿ ಮೀರಿದ ಡೊನೇಷನ್ ವಸೂಲಿಯಲ್ಲಿ ತೊಡಗಿವೆ ಎಂದು ಎಸ್.ಎಫ್.ಐ. ರಾಜ್ಯ ಸಮಿತಿ ಸದಸ್ಯ ಎಲ್.ಎನ್. ಈಶ್ವರಪ್ಪ ಆರೋಪಿಸಿದ್ದಾರೆ.
ನಿಯಮಗಳ ಪ್ರಕಾರ ಸರ್ಕಾರ ನಿಗದಿ ಪಡಿಸಿದಂತೆ ಅನುದಾನಿತ ಶಿಕ್ಷಣ ಸಂಸ್ಥೆಗಳು 500 ರು. ಮತ್ತು ಅನುದಾನ ರಹಿತ ಶಿಕ್ಷಣ ಸಂಸ್ಥೆಗಳು 600 ರು.ಗಳನ್ನು ಮಾತ್ರ ಅಭಿವೃದ್ಧಿ ಶುಲ್ಕವೆಂದು ಸಂಗ್ರಹಿಸಲು ಅವಕಾಶವಿದೆ. ಈ ಹಣವನ್ನು ಒತ್ತಾಯದ ಮೂಲಕ ಅಥವಾ ಹೆಚ್ಚಿಗೆ ಸಂಗ್ರಹಿಸುವುದು ಕಾನೂನಿನ ಪ್ರಕಾರ ಅಪರಾಧ. ಶಿಕ್ಷಣ ಸಂಸ್ಥೆಗಳಲ್ಲಿ ವಿದ್ಯಾರ್ಥಿ ಪ್ರತಿನಿಧಿಗಳು, ಪೋಷಕರು ಹಾಗು ಶಿಕ್ಷಣ ಸಂಸ್ಥೆಗಳ ಆಡಳಿತ ಮಂಡಳಿಯನ್ನೊಳಗೊಂಡ ಸಮಿತಿ ರಚಿಸಿ ಈ ಕುರಿತು ಚರ್ಚಿಸಬೇಕು. ಪ್ರತೀ ತಾಲೂಕಿನಲ್ಲೂ ಡೊನೇಷನ್ ಹಾವಳಿ ನಿಯಂತ್ರಿಸಲು ತಾಲೂಕು ಶಿಕ್ಷಣ ನಿಯಂತ್ರಣ ಪ್ರಾಧಿಕಾರ ರಚಿಸಬೇಕೆಂಬ ನಿಯಮವಿದೆ.ಆದರೆ ಇದು ಈತನಕ ಎಲ್ಲಿಯೂ ಜಾರಿಯಾಗಿಲ್ಲ. ಜಿಲ್ಲಾಧಿಕಾರಿಗಳು ಅಧ್ಯಕ್ಷರಾಗಿರುವ ಈ ಪ್ರಾಧಿಕಾರಕ್ಕೆ ಶಿಕ್ಷಣ ಇಲಾಖೆ ಉಪ ನಿರ್ದೇಶಕರು, ಜಿ.ಪಂ.ಕಾರ್ಯ ನಿರ್ವಹಣಾಧಿಕಾರಿ ಸೇರಿದಂತೆ ಹಲವರು ಸದಸ್ಯರಾಗಿರುತ್ತಾರೆ. ಪ್ರಾಧಿಕಾರಕ್ಕೆ ಅಕ್ರಮ ವಂತಿಗೆ ವಸೂಲಿ, ಪ್ರವೇಶ ಮತ್ತು ಮೀಸಲಾತಿಯಲ್ಲಿ ಅನ್ಯಾಯ ಮುಂತಾದುವನ್ನು ತಡೆಗಟ್ಟುವ ಆಧಿಕಾರವಿರುತ್ತದೆ. ಇತ್ತೀಚೆಗೆ ರಾಜ್ಯ ಹೈಕೋರ್ಟ್ ನೀಡಿದ ತೀರ್ಪಿನಲ್ಲಿ ಐ.ಸಿ.ಎಸ್. ಮತ್ತು ಸಿ.ಬಿ.ಎಸ್.ಸಿ. ಶಾಲೆಗಳು ಸರ್ಕಾರದಿಂದ ಹಲವಾರು ಸೌಲಭ್ಯಗಳನ್ನು ಪಡೆಯುತ್ತಿರುವುದರಿಂದ ಕರ್ನಾಟಕ ಶಿಕ್ಷಣ ಕಾಯ್ದೆ ವ್ಯಾಪ್ತಿಗೆ ಒಳಪಡುತ್ತವೆ ಎಂದಿದೆ.ಆದರೆ ಕೇವಲ ಹಣ ಮಾಡುವ ದಂಧೆಯಲ್ಲಿ ತೊಡಗಿರುವ ಖಾಸಗಿ ಶಿಕ್ಷಣ ಸಂಸ್ಥೆಗಳು ನಿಯಂತ್ರಣವಿಲ್ಲದ ಕಾರಣ ವ್ಯಾಪಾರಿ ಕೇಂದ್ರಗಳಾಗಿ ಮಾರ್ಪಟ್ಟಿವೆ.ಹೀಗಾಗಿ ಸರ್ಕಾರ ಡೊನೇಷನ್ ಪಿಡುಗನ್ನು ತೊಡೆದು ಹಾಕಲು ತಾಲೂಕು ಮಟ್ಟದಲ್ಲಿ ಶೀಘ್ರ ನಿಯಂತ್ರಣ ಪ್ರಾಧಿಕಾರ ರಚಿಸಬೇಕೆಂದು ಆಗ್ರಹಿಸಿರುವ ಈಶ್ವರಪ್ಪ ಈ ನಿಟ್ಟಿನಲ್ಲಿ ಸಂಘಟನೆಯ ಹಲವು ಬೇಡಿಕೆಗಳನ್ನು ಈಡೇರಿಸಬೇಕೆಂದು ಒತ್ತಾಯಿಸಿದ್ದಾರೆ.