ಅಧಿಕಾರಿ ವಿರುದ್ಧ ಪ್ರತಿಭಟನೆ
ಮುಳಬಾಗಲು: ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಪ್ರಥಮ ವರ್ಷದ ಬಿ ಎ 2ನೇ ಸೆಮಿಸ್ಟರ್‌ನ ಪರೀಕ್ಷೆ ನಡೆಯುತ್ತಿದ್ದಾಗ ವಿಚಕ್ಷಣ ದಳದ ಬಿಜಲಿ ವಿದ್ಯಾರ್ಥಿನಿಯರೊಂದಿಗೆ ಅಸಭ್ಯವಾಗಿ ವರ್ತಿಸಿದ್ದಾರೆಂದು ಆರೋಪಿಸಿ ವಿದ್ಯಾರ್ಥಿ ಮುಖಂಡ ಗುಜ್ಡಮಾರಂಡಹಳ್ಳಿ ಮುನಿರಾಜು ನೇತೃತ್ವದಲ್ಲಿ ಶನಿವಾರ ವಿದ್ಯಾರ್ಥಿಗಳು ಪ್ರಾಂಶುಪಾಲರ ಕೊಠಡಿ ಮುಂದೆ ಪ್ರತಿಭಟಿಸಿದರು. ಕಾಪಿ ಮಾಡದಿದ್ದರೂ ಕಾಪಿ ಮಾಡಲಾಗುತ್ತಿದೆ ಎಂದು ಆರೋಪಿಸಿ ಉತ್ತರ ಪತ್ರಿಕೆ ಮತ್ತು ಪ್ರವೇಶ ಪತ್ರವನ್ನು ತೆಗೆದುಕೊಂಡಿದ್ದಾರೆ ಎಂದು ಆರೋಪಿಸಿದ್ದಾರೆ. ಈ ವೇಳೆ ಮಾತನಾಡಿದ ಬಿಜಿಲಿ, ಕೆಲವು ವಿದ್ಯಾರ್ಥಿಗಳು ಚೀಟೆ ಇಟ್ಟುಕೊಂಡು ಪರೀಕ್ಷೆ ಬರೆಯುತ್ತಿದ್ದರು. ಅವರಿಂದ ಅವರ ಉತ್ತರ ಪತ್ರಿಕೆಗಳನ್ನು ಮತ್ತು ಪ್ರವೇಶ ಪತ್ರಗಳನ್ನು ಪಡೆದಿರುವುದಾಗಿ ಸ್ಪಷ್ಟಪಡಿಸಿದರು.
ಆತ್ಮಹತ್ಯೆಗೆ ಶರಣಾದ ದಂಪತಿ
ಮಾಲೂರು: ಅನಾರೋಗ್ಯದಿಂದ ಬೇಸತ್ತು ವ್ಯಕ್ತಿಯೂಬ್ಬ ತನ್ನ ಪತ್ನಿಯ ಜತೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಪಟ್ಟಣದ ಮಾರುತಿ ಬಡಾವಣೆಯಲ್ಲಿ ನಡೆದಿದೆ. ವಿಜಯಕುಮಾರ್(36) ಹಾಗೂ ಅತನ ಪತ್ನಿ ಶೈಲಜಾ(32) ಆತ್ಮಹತ್ಯೆಗೀಡಾದವರು. ಇಲ್ಲಿನ ಕೈಗಾರಿಕಾ ಪ್ರಾಂಗಾಣದಲ್ಲಿರುವ ಓಬಲ್ ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಿರುವ ವಿಜಯಕುಮಾರ್, ಒಂದು ವರ್ಷದಿಂದ ಅನಾರೋಗ್ಯದಿಂದ ನರಳುತ್ತಿದ್ದರು. ಇದರಿಂದ ಬೇಸತ್ತ ದಂಪತಿಗಳಿಬ್ಬರು ಡೆತ್ ನೋಟ್ ಬರೆದಿಟ್ಟು ತಮ್ಮ ಮನೆಯಲ್ಲಿ ನೇಣಿಗೆ ಶರಣಾಗಿದ್ದಾರೆ. ಪೊಲೀಸರು ತನಿಖೆ ಕೈಗೊಂಡಿದ್ದಾರೆ.
26ಕ್ಕೆ ಸಹಕಾರ ಸಂಘಕ್ಕೆ ಚುನಾವಣೆ
ಕೋಲಾರ: ಸವಿತಾ ವಿವಿದೋದ್ದೇಶ ಸಹಕಾರ ಸಂಘಗಳ ನಿರ್ದೇಶಕ ಮಂಡಳಿಯ ನಿರ್ದೇಶಕ ಸ್ಥಾನಕ್ಕೆ ಮೇ 26ರಂದು ಚುನಾವಣೆ ಘೋಷಣೆಯಾಗಿದೆ. ಐದು ವರ್ಷಗಳ ಅವಧಿಯ ಆಡಳಿತ ಮಂಡಳಿ ನಿರ್ದೇಶಕರ ಸಾಮಾನ್ಯ ಚುನಾವಣೆಯನ್ನು ಕೋಲಾರ ನಗರದ ಡೂಮ್‌ಲೈಟ್ ವೃತ್ತದಲ್ಲಿರುವ ಸಂಘದ ಕಚೇರಿಯಲ್ಲಿ ನಿಗದಿ ಪಡಿಸಲಾಗಿದೆ. ಮೇ 26ರಂದು ಬೆಳಿಗ್ಗೆ 9 ಗಂಟೆಯಿಂದ ಸಾಯಂಕಾಲ 4 ಗಂಟೆವರೆಗೆ ಸಂಘದ ಆಡಳಿತ ಮಂಡಳಿಯ ಒಟ್ಟು 22 ನಿರ್ದೇಶಕ ಸ್ಥಾನಗಳಿಗೆ ಚುನಾವಣೆ ನಡೆಯಲಿದೆ. ನಾಮಪತ್ರ ಸಲ್ಲಿಸಲು ಮೇ 19 ಸೋಮವಾರ ಕಡೆಯ ದಿನವಾಗಿದೆ, ಮೇ 20 ನಾಮಪತ್ರಗಳ ಪರಶೀಲನೆ, ಮೇ 21 ರಂದು ನಾಮಪತ್ರ ಹಿಂತೆಗೆದುಕೊಳ್ಳಲು ಕಡೆಯ ದಿನವಾಗಿದೆ.