ಕನಿಷ್ಠ 2 ವರ್ಷವಾದ್ರೂ ರಸ್ತೆ ಬಾಳಿಕೆ ಬರಲಿ: ಗುತ್ತಿಗೆದಾರನಿಗೆ ಶಾಸಕರ ಕಿವಿಮಾತು
ಬಂಗಾರಪೇಟೆ: ಹದಗೆಟ್ಟಿರುವ ಗ್ರಾಮೀಣ ಪ್ರದೇಶದ ರಸ್ತೆಗಳನ್ನು ದುರಸ್ತಿಗೊಳಿಸಿ ಉತ್ತಮ ಗುಣಮಟ್ಟದ ರಸ್ತೆಗಳನ್ನು ಕಲ್ಪಿಸಿ ಕೊಡುವುದೇ ಸರ್ಕಾರದ ಮುಖ್ಯ ಗುರಿ ಎಂದು ಶಾಸಕ ಎಸ್.ಎನ್. ನಾರಾಯಣಸ್ವಾಮಿ ಹೇಳಿದರು.
ಅವರು ತಾಲೂಕಿನ ಬೆಂಗನೂರು ಪಂಚಾಯ್ತಿಯ ಕೆಸರನಹಳ್ಳಿ ಗ್ರಾಮದಲ್ಲಿ 11 ಲಕ್ಷ ರು. ವೆಚ್ಚದ ಡಾಂಬರು ರಸ್ತೆ ಕಾಮಗಾರಿಗೆ ಚಾಲನೆ ನೀಡಿ ನಂತರ ಮಾತನಾಡಿ, ರಾಜ್ಯದಲ್ಲಿ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಅಧಿಕಾಕ್ಕೆ ಬಂದು ಇದೇ 13ಕ್ಕೆ ವರ್ಷ ತುಂಬಲಿದೆ. ಈ ವರ್ಷದಲ್ಲಿ ಸರ್ಕಾರ ಸಾಕಷ್ಟು ಅಭಿವೃದ್ಧಿ ಕಾರ್ಯಗಳನ್ನು ಮಾಡಿ ಜನ ಸಾಮಾನ್ಯರನ್ನು ಸೆಳೆದಿದೆ. ಗ್ರಾಮೀಣ ಭಾಗದಲ್ಲಿ ದಶಕಗಳಿಂದ ನೆನಗುದಿಗೆ ಬಿದ್ದಿದ್ದ ಹಲವು ಕಾಮಗಾರಿಗಳಿಗೆ ಮೋಕ್ಷ ಕಲ್ಪಿಸಲಾಗಿದೆ ಎಂದು ಸರ್ಕಾರದ ಸಾದನೆ ಹಾಗೂ ಕ್ಷೇತ್ರದಲ್ಲಿ ತಮ್ಮ ಸಾಧನೆಗಳನ್ನು ಮೆಚ್ಚಿಕೊಂಡರು.
ಗ್ರಾಮಸಭೆಗಳ ವೇಳೆ ಗ್ರಾಮಕ್ಕೆ ಭೇಟಿ ನೀಡಿದಾಗ ಗ್ರಾಮಸ್ಥರು ಗ್ರಾಮದ ರಸ್ತೆ ಹದಗೆಟ್ಟಿದ್ದು ದುರಸ್ತಿ ಮಾಡಿಸಿಕೊಡಬೇಕೆಂದು ಮನವಿ ಮಾಡಿದಾಗ ರಸ್ತೆ ಮಂಜೂರು ಮಾಡಿಸಲಾಗುವುದೆಂದು ಭರವಸೆ ನೀಡಿದ್ದು ಅದರಂತೆ ಇಂದು ಒಟ್ಟು 11 ಲಕ್ಷ ರು.ಗಳ ಡಾಂಬರು ರಸ್ತೆ ನಿರ್ಮಾಣ ಕಾಮಗಾರಿಗೆ ಹಣ ಮಂಜೂರು ಮಾಡಿಸಿರುವುದಾಗಿ ಇನ್ನು ಹೆಚ್ಚುವರಿ ಹಣ ಬೇಕಾದಲ್ಲಿ ಹಣ ಮಂಜೂರು ಮಾಡಿಸಿ ಕೊಡುವುದಾಗಿ ಭರವಸೆ ನೀಡಿದರು.
ಡಾಂಬರು ರಸ್ತೆ ಕಾಮಗಾರಿಯಲ್ಲಿ ಉತ್ತಮ ಗುಣಮಟ್ಟವನ್ನು ಕಾಪಾಡಬೇಕೆಂದು ಕನಿಷ್ಠ 2 ವರ್ಷಗಳಾದರೂ ಬಾಳಿಕೆ ಬರುವಂತೆ ಕಾಮಗಾರಿ ಮಾಡಬೇಕೆಂದು ಗುತ್ತಿಗೆದಾರರಿಗೆ ಸೂಚನೆ ನೀಡಿದರು. ಮುಂದೆ ಸಮುದಾಯ ಭವನ, ಉಳಿದ ರಸ್ತೆ ಕಾಮಗಾರಿಗೆ ಹಣ ಮಂಜೂರು ಮಾಡಿಸಿಕೊಡುವುದಾಗಿ ಭರವಸೆ ನೀಡಿದರು.
ಕಾರ್ಯಕ್ರಮದಲ್ಲಿ ಬೂದಿಕೋಟೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಂಜುನಾಥಗೌಡ, ಪಿಚ್ಚಹಳ್ಳಿ ಗೋವಿಂದರಾಜು, ಗ್ರಾಮ ಪಂಚಾಯಿತಿ ಸದಸ್ಯರಾದ ಶ್ರೀನಿವಾಸ್, ಮಂಜುನಾಥ್, ಕೀಲುಕೊಪ್ಪ ಯಲ್ಲಪ್ಪ, ಶ್ರೀನಿವಾಸ್, ಮುಖಂಡರಾದ, ಸೀನಪ್ಪ, ವೇಲು, ರತನ್‌ಣಸಿಂಗ್, ರಾಜಾ, ಮುನಿರಾಜು, ಬೀಮಣ್ಣ, ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ವೆಂಕಟೇಶ್ ಭಾಗವಹಿಸಿದ್ದರು.