'ಪರಿಸರ ಸ್ನೇಹಿ ಅರಳಿ ಅವಶ್ಯ'
ಕೋಲಾರ: ಅರಳಿಕಟ್ಟೆ ಸಂಸ್ಕೃತಿ ಇಂದಿನ ಸಮಾಜದಿಂದ ದೂರವಾಗುತ್ತಿದ್ದು, ಅರಳಿಕಟ್ಟೆ ಸಂಸ್ಥಾಪನಾ ಕಾರ್ಯಯಕ್ರಮಗಳು ಇಂದಿನ ಸಮಾಜಕ್ಕೆ ಹೆಚ್ಚು ಪ್ರಸ್ತುತವಾಗಿವೆ ಎಂದು ತಾಲೂಕು ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಸದಸ್ಯ ಹಾಗೂ ಕಾಂಗ್ರೆಸ್ ಮುಖಂಡರಾದ ಹೊಳಲಿ ಪ್ರಕಾಶ್ ತಿಳಿಸಿದರು.
ನಗರದ ಉದಯಗಿರಿ ಬಡಾವಣೆಯಲ್ಲಿ ನೂತನವಾಗಿ ನಿರ್ಮಿಸಿರುವ ಅರಳಿಕಟ್ಟೆಗೆ ಶನಿವಾರ ಹಮ್ಮಿಕೊಂಡಿದ್ದ ವಿಶೇಷ ಪೂಜೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಹಳ್ಳಿ ಜನತೆ ಒಂದೆಡೆ ಸೇರುವ ಹಾಗೂ ಪರಿಸರ ಸಮತೋಲನ ಸ್ನೇಹಿ ಅರಳಿಕಟ್ಟೆಗಳು ಆಧುನೀಕತೆಯ ಒತ್ತಡ ಹಾಗೂ ಹುಚ್ಚು ಸಂಸ್ಕೃತಿ ಹೊಳೆಗೆ ಸಿಕ್ಕಿ ಕೊಚ್ಚಿಕೊಂಡು ಹೋಗುತ್ತಿರುವ ಈ ಕಾಲಘಟ್ಟದಲ್ಲಿ ನಾಗರೀಕರು ಸುಸಜ್ಜಿತ ನೂತನ ಅರಳಿಕಟ್ಟೆ ನಿರ್ಮಾಣ ಮಾಡಿರುವುದು ಅಪರೂಪ ಹಾಗೂ ಮೆಚ್ಚುವಂತ ಶಾಶ್ವತ ಕೆಲಸ ಇದಾಗಿದೆ ಎಂದರು.
ನಾಗರ ಕಲ್ಲುಗಳಿಗೆ ಪೂಜೆ ಮಾಡುವ ಧಾರ್ಮಿಕ ನಂಬಿಕೆಯ ಜೊತೆಗೆ, ಈ ಅರಳಿ ಕಟ್ಟೆಗಳ ಮರಗಳು ನೂರಾರು ಪಕ್ಷಿ ಸಂಕುಲಕ್ಕೆ ನೆಲೆಯಾಗುತ್ತದೆ. ಬೇಸಿಗೆಯಲ್ಲಿ ಜನರು ಮರದ ಕೆಳಗೆ ಆಶ್ರಯ ಪಡೆದು ವಿಶ್ರಾಂತಿ ಪಡೆಯಲು ಅನುಕೂಲವಾಗುತ್ತದೆ. ಉತ್ತಮ ಪರಿಸರ ನಿರ್ಮಾಣ ಇದರಿಂದ ಸಾಧ್ಯವಾಗುತ್ತದೆ ಎಂದರು. ಈ ಸಂದರ್ಭದಲ್ಲಿ ಜೆ.ಡಿ.ಎಸ್ ಜಿಲ್ಲಾ ಪ್ರಧಾನ ಕಾರ್ಯಾಧ್ಯಕ್ಷ ಬಣಕನಹಳ್ಳಿ ನಟರಾಜ್, ಕಾಂಗ್ರೆಸ್ ಮುಖಂಡ ಹಾರೋಹಳ್ಳಿ ಹೆಚ್.ವಿ.ಕುಮಾರ್, ಅರ್ಬನ್ ಬ್ಯಾಂಕ್ ಅಧ್ಯಕ್ಷ ರಾಜಣ್ಣ, ತಾ.ಪಂ. ಕಾರ್ಯನಿರ್ವಾಹಕ ಇಂಜಿನಿಯರ್ ಜಾನಕೀರಾಮ್, ಉದಯಗಿರಿ ಕ್ಷೇಮಾಭಿವೃದ್ಧಿ ಸಂಘದ ಉಪಾಧ್ಯಕ್ಷ ಸುಬ್ರಮಣಿ, ಕಾರ್ಯದರ್ಶಿ ವೆಂಕಟಾಚಲಗೌಡ, ವಕೀಲ ಮಂಜುನಾಥ್,ನಾರಾಯಯಣಸ್ವಾಮಿ, ಭೀಮರಾಜ್, ಅಮರಾವತಿ ಶಂಕರಪ್ಪ, ರಾಮಕೃಷ್ಣ ಇದ್ದರು.