ಬೋರ್‌ವೆಲ್ ವಿಫಲ: ಟ್ಯಾಂಕರ್ ದರ್ಬಾರ್
ಎನ್.ವೆಂಕಟೇಶ್
ಚಿಕ್ಕಬಳ್ಳಾಪುರ: ನೀರಿನ ಸಮಸ್ಯೆ ತಾಂಡವಾಡುತ್ತಿರುವ ಜಿಲ್ಲೆಯಲ್ಲಿ ಹೊಸದಾಗಿ ಕೊರೆಸುತ್ತಿರುವ ಕೊಳೆವೆಬಾವಿಗಳೂ ವಿಫಲವಾಗುತ್ತಿರುವುದು ಚಿಂತೆಗೆ ಕಾರಣವಾಗಿದೆ.
ಬರ ಪರಿಹಾರ ಕಾರ್ಯಗಳನ್ನು ತುರ್ತಾಗಿ ಕೈಗೊಂಡು ತೀವ್ರ ಸಮಸ್ಯೆಗಳಿರುವ ಗ್ರಾಮಗಳಲ್ಲಿ ಕೊಳವೆ ಬಾವಿಗಳನ್ನು ಕೊರೆಸಿ ಕುಡಿಯುವ ನೀರನ್ನು ಸರಬರಾಜು ಮಾಡಲು ಈಗಾಗಲೇ ಜಿಲ್ಲಾಡಳಿತ ಅಧಿಕಾರಿಗಳಿಗೆ ಸೂಚನೆ ನೀಡಿದೆ. ಆದರೆ, ಬಹಳಷ್ಟು ಕೊಳವೆ ಬಾವಿಗಳಲ್ಲಿ ಕುಡಿಯುವ ನೀರು ಸಿಗುತ್ತಿಲ್ಲ. ಅನೇಕ ಕೊಳವೆ ಬಾವಿಗಳಲ್ಲಿ ಬಹುಬೇಗ ಬತ್ತಿ ಹೋಗುತ್ತಿವೆ.
ಇದರಿಂದ ಸಮಸ್ಯಾತ್ಮಕ ಗ್ರಾಮಗಳಿಗೆ ಸಮೀಪದ ಬೇರೆ ಬೇರೆ ಗ್ರಾಮಗಳಿಂದ ಟ್ಯಾಂಕರ್‌ಗಳ ಮೂಲಕ ನೀರನ್ನು ಸರಬರಾಜು ಮಾಡಲಾಗುತ್ತಿದೆ. ಖಾಸಗಿ ವ್ಯಕ್ತಿಗಳಿಂದಲೂ ನೀರಿನ ಟ್ಯಾಂಕರುಗಳನ್ನು ಖರೀದಿಸಲಾಗುತ್ತಿದೆ.
ಪ್ರಾರಂಭದಲ್ಲಿ ಗ್ರಾಮಗಳಲ್ಲಿ ನೀರಿನ ಸಮಸ್ಯೆ ಉದ್ಭವಿಸಿದಾಗ ಕೊಳವೆ ಬಾವಿಗಳನ್ನು ಕೊರೆಸಿ, ನೀರನ್ನು ಒದಗಿಸಲಾಗುತ್ತಿತ್ತು. ಇದಕ್ಕೆ ಕಾಲಾವಕಾಶ ಬೇಕಾಗುತ್ತದೆ. ಆದ್ದರಿಂದ ಇದೀಗ ಖಾಸಗಿ ಟ್ಯಾಂಕರುಗಳ ಮೊರೆ ಹೋಗಲಾಗುತ್ತಿದೆ. ಇದರಿಂದ ಟ್ಯಾಂಕರ್‌ಗಳ ಬೇಡಿಕೆ ಹೆಚ್ಚಾಗುತ್ತಿದೆ.
670 ಗ್ರಾಮಗಳಲ್ಲಿ ಸಮಸ್ಯೆ: ಜಿಲ್ಲೆಯಲ್ಲಿ 670 ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಇದೆ. ಚಿಂತಾಮಣಿ ತಾಲೂಕೊಂದರಲ್ಲೇ 187 ಗ್ರಾಮಗಳು ನೀರಿನ ಸಮಸ್ಯೆ ಎದುರಿಸುತ್ತಿವೆ. 187 ಕಡೆ ಕೊಳವೆ ಬಾವಿಗಳಿವೆ. ಬಾಗೇಪಲ್ಲಿ- 143(ಬೋರ್‌ವೆಲ್-143), ಶಿಡ್ಲಘಟ್ಟ 131(ಬೋರ್‌ವೆಲ್-177), ಗೌರಿಬಿದನೂರು- 93(ಬೋರ್‌ವೆಲ್-81), ಚಿಕ್ಕಬಳ್ಳಾಪುರ- 87(ಬೋರ್‌ವೆಲ್- 108), ಗುಡಿಬಂಡೆ- 29(ಬೋರ್‌ವೆಲ್-30) ಗ್ರಾಮಗಳಲ್ಲಿ ನೀರಿನ ಸಮಸ್ಯೆ ಇದೆ. ಕುಡಿಯುವ ನೀರಿನ ಕಾಮಗಾರಿಗೆ ಸಂಬಂಧಿಸಿದಂತೆ ಒಟ್ಟು 35 ಕೋಟಿ ಹಣ ಬೇಕಿದೆ.
ಇನ್ನೂ ಮೇ ತಿಂಗಳಲ್ಲಿ ಕೊಳವೆ ಬಾವಿಗಳ ವೈಫಲ್ಯ ಹೆಚ್ಚಳವಾಗಿರುವುದರಿಂದ 168 ಗ್ರಾಮಗಳಿಗೆ ಟ್ಯಾಂಕರ್‌ಗಳ ಮೂಲಕ ನೀರು ಕೊಡಲಾಗುತ್ತಿದೆ. ಇದಕ್ಕಾಗಿ ಒಂದು ಟ್ಯಾಂಕರ್‌ಗೆ 500 ವೆಚ್ಚ ಮಾಡಲಾಗುತ್ತಿದೆ. ಟ್ಯಾಂಕರ್ ನೀರಿನ ಖರೀದಿಗೆ 51.39 ಲಕ್ಷ ಮೊತ್ತದಲ್ಲಿ ಈಗಾಗಲೇ 2.20 ಲಕ್ಷ ಪಾವತಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಟ್ಯಾಂಕರ್ ಮಾಫಿಯಾ!
ತುರ್ತು ಬರ ಪರಿಹಾರಕ್ಕಾಗಿ ಕೊಳವೆ ಬಾವಿಗಳನ್ನು ಕೊರೆಸುವುದರ ಜೊತೆಗೆ ಆದಷ್ಟು ಟ್ಯಾಂಕರ್‌ಗಳ ಮೂಲಕ ನೀರನ್ನು ಸರಬರಾಜು ಮಾಡಿ ಎಂದು ಸೂಚನೆ ಸಿಕ್ಕಿರುವುದು ತಡ ಕೆಲವು ಅಧಿಕಾರಿಗಳಿಗೆ ಬಾಯಿಗೆ ಸಕ್ಕರೆ ಬಿದ್ದಂತಾಗಿದೆ! ಖಾಸಗಿ ಮಾಲಿಕರ ಜತೆ ಒಪ್ಪಂದ ಮಾಡಿಕೊಂಡು ಅಕ್ರಮವಾಗುವ ಸಾಧ್ಯತೆ ಇದೆ ಎಂಬ ಆರೋಪಗಳು ಕೇಳಿ ಬರುತ್ತಿವೆ. ಇತ್ತೀಚೆಗೆ ಜಿಲ್ಲಾ ಉಸ್ತುವಾರಿ ಸಚಿವ ರೋಷನ್ ಬೇಗ್ ನೇತೃತ್ವದಲ್ಲಿ ನಡೆದ ಬರ ಪರಿಹಾರ ಸಭೆಯಲ್ಲಿ, ಟಾಂಕರ್ ಮಾಫಿಯಾ ಬಗ್ಗೆ ಜಿಪಂ ಅಧ್ಯಕ್ಷರೇ ನೇರವಾಗಿ ಆರೋಪಿಸಿದ್ದರು. ಚಿಂತಾಮಣಿ ತಾಲೂಕಿನಲ್ಲಿ ತಮ್ಮ ಕ್ಷೇತ್ರದಲ್ಲಿ ಟ್ಯಾಂಕರ್ ನೀರೇ ಕೊಡುತ್ತಿಲ್ಲ. ಆದರೂ ಸಹ ಪ್ರತಿದಿನ 4 ಬಾರಿ ಟ್ಯಾಂಕರ್ ನೀರು ನೀಡಲಾಗಿದೆ ಎಂದು ಹೇಳಲಾಗುತ್ತಿದೆ. ಕೇವಲ ಒಂದಾದರೂ ನೀರಿನ ಟ್ಯಾಂಕರ್ ಗ್ರಾಮಕ್ಕೆ ಬಂದಿದೆ ಎಂದು ಗ್ರಾಮಸ್ಥರಿಂದ ಹೇಳಿಸಲಿ ನೋಡೋಣ ಎಂದು ಬಹಿರಂಗವಾಗಿ ಸವಾಲು ಹಾಕಿದ್ದರು. ಇನ್ನೂ ಚಿಂತಾಮಣಿ ನಗರಸಭೆಯಲ್ಲಿ ಕಳೆದ ಎರಡು ವರ್ಷದ ಹಿಂದೆ ನಡೆದ ನೀರಿನ ಟ್ಯಾಂಕರ್ ಗೋಲ್‌ಮಾಲ್ ನಲ್ಲಿ ಲಕ್ಷಾಂತರ ರುಪಾಯಿ ಅವ್ಯವಹಾರ ನಡೆದಿದೆ. ಇದರಿಂದ ನೀರಿನ ಟ್ಯಾಂಕರ್ ಮೊರೆ ಹೋಗಿಲ್ಲ ಎಂದು ಅಲ್ಲಿನ ಪೌರಾಯುಕ್ತರು ತಿಳಿಸಿದ್ದಾರೆ. ಕೊನೆಗೆ ಸಭೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವರೇ ಜಿಲ್ಲೆಯಲ್ಲಿ ನೀರಿನ ಟ್ಯಾಂಕರ್ ಮಾಫಿಯಾ ನಡೆಯುತ್ತಿರುವುದರ ಬಗ್ಗೆ ತಮಗೆ ಅರಿವಾಗಿದೆ ಎಂದು ಒಪ್ಪಿಕೊಂಡು ಸೂಕ್ತ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದ್ದರು.