ಮಾತಿನ ಚಕಮಕಿ, ಹಲ್ಲೆ
ಚಿಂತಾಮಣಿ: ಕೆಂಚಾರ್ಲಹಳ್ಳಿ ಪೋಲೀಸ್ ಠಾಣೆ ಶೆಟ್ಟನಾಯಕನ ಹಳ್ಳಿಯಲ್ಲಿ ಕ್ಷುಲ್ಲಕ ಕಾರಣಕ್ಕೆ ಎರಡು ಗುಂಪುಗಳ ನಡುವೆ ಮಾತಿನ ಚಕಮಕಿ ನಡೆದು ಕೈ ಕೈ ಮಿಲಾಯಿಸಿದ ಪರಿಣಾಮ ಹಲವರು ಗಾಯಗೊಂಡಿದ್ದಾರೆ. ಕುರುಬ ಸಮುದಾಯಕ್ಕೆ ಸೇರಿದ ವೆಂಕಟರಮಣಪ್ಪ ಹಾಗೂ ವೀರಪ್ಪ ಎಂಬುವರಿಗೆ ಜಮೀನು ಕಾಂಪೌಂಡ್ ನಿರ್ಮಾಣ ವಿಷಯವಾಗಿ ಭಾನುವಾರ ಬೆಳಿಗ್ಗೆ ಮಾತಿನ ಚಕಮಕಿ ನಡೆದು ಕೈಕೈ ಮಿಲಾಯಿಸಿದ ಪರಿಣಾಮ ವೆಂಕಟರಮಣಪ್ಪ ಹಾಗೂ ಪತ್ನಿ ಶಾಂತಮ್ಮಳಿಗೆ ತೀವ್ರ ಗಾಯಗಳಾಗಿವೆ. ಕೆಂಚಾರ್ಲಹಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸಾರ್ವಜನಿಕ ಆಸ್ಪತ್ರೆಗಳಲ್ಲಿ ಲೋಪ: ಡೆಪ್ಯುಟಿ ಸ್ಪೀಕರ್
ಶಿಡ್ಲಘಟ್ಟ: ಸಾರ್ವಜನಿಕ ಆಸ್ಪತ್ರೆಗಳಲ್ಲಿ ಲೋಪಗಳಿಂದಾಗಿ ಖಾಸಗಿ ಆಸ್ಪತ್ರೆಗಳ ಮೊರೆ ಹೋಗಬೇಕಾದಂತಹ ಅನಿವಾರ್ಯತೆ ಎದುರಾಗಿದೆ ಎಂದು ಡೆಪ್ಯೂಟಿ ಸ್ಪೀಕರ್ ಎನ್.ಎಚ್.ಶಿವಶಂಕರರೆಡ್ಡಿ ಅಭಿಪ್ರಾಯಪಟ್ಟರು.
ಪಟ್ಟಣದಲ್ಲಿ ನೂತನವಾಗಿ ನಿರ್ಮಾಣವಾಗಿರುವ ಮಾನಸ ಆಸ್ಪತ್ರೆಯ ಕಟ್ಟಡ ಉದ್ಘಾಟಿಸಿ ಮಾತನಾಡಿದ ಅವರು, ಸರ್ಕಾರಿ ಆಸ್ಪತ್ರೆಗಳಲ್ಲಿ ಬಡವರ ಆರೋಗ್ಯಗಳನ್ನು ನೋಡಿಕೊಳ್ಳುವ ವ್ಯವಸ್ಥೆ ಪರಿಪೂರ್ಣವಾಗಿಲ್ಲ. ಸೌಲಭ್ಯಗಳ ಕೊರತೆಯಿದೆ. ಗ್ರಾಮೀಣ ಪ್ರದೇಶಗಳ ಜನರಿಗೆ ಉತ್ತಮವಾದ ಆರೋಗ್ಯವನ್ನು ನೀಡಲು ಮುಂದೆ ಬಂದಿರುವ ಮಾನಸ ಆಸ್ಪತ್ರೆಯಂಥ ಸಂಸ್ಥೆಗಳನ್ನು ಪ್ರೋತ್ಸಾಹಿಸಬೇಕಾಗಿದೆ ಎಂದರು. ಚಿಕ್ಕಬಳ್ಳಾಪುರ ಜಿಲ್ಲಾ ಕೇಂದ್ರದಲ್ಲೂ ಮೆಡಿಕಲ್ ಕಾಲೇಜು ಹಾಗೂ ಪ್ರತಿ ತಾಲೂಕು ಕೇಂದ್ರಗಳಲ್ಲಿ ಡಯಾಲಿಸಿಸ್ ಕೇಂದ್ರಗಳನ್ನು ಸ್ಥಾಪಿಸಲು ಸರ್ಕಾರ ಉದ್ದೇಶಿಸಿದೆ ಎಂದು ಅವರು ಇದೇ ವೇಳೆ ತಿಳಿಸಿದರು.
ಶಾಸಕ ಎಂ.ರಾಜಣ್ಣ ಮಾತನಾಡಿ, 'ಈಗ ಪಟ್ಟಣದಲ್ಲೇ ಸುಸಜ್ಜಿತವಾದ ಆಸ್ಪತ್ರೆ ನಿರ್ಮಾಣವಾಗಿರುವುದರಿಂದ ತಾಲೂಕಿನ ಜನತೆ ಹೆಚ್ಚಿನ ಸಹಕಾರವನ್ನು ನೀಡಬೇಕು. ಸಣ್ಣಪುಟ್ಟ ಲೋಪದೋಷಗಳು ಬಂದಾಗ ಸಂಯಮದಿಂದ ವರ್ತಿಸಬೇಕು' ಎಂದು ಹೇಳಿದರು.
ಮಾನಸ ಸಂಸ್ಥೆಯ ಸಂಸ್ಥಾಪಕ ಎಚ್.ಎನ್.ಸುಬ್ರಮಣ್ಯ ಮಾತನಾಡಿದರು. ವೈದ್ಯರಾದ ಕೆ.ಪಿ.ಶ್ರೀನಿವಾಸ್ ಮೂರ್ತಿ, ಪಿ.ಎನ್.ಗೋವಿಂದರಾಜು, ನರಪತ್ ಸೋಲಂಕಿ ಹಾಗೂ ಪುರಸಭಾ ಸದಸ್ಯರಾದ ಚಿಕ್ಕಮುನಿಯಪ್ಪ, ಅಪ್ಸರಾ ಪಾಷಾ, ಪಿಎಲ್ಡಿ ಬ್ಯಾಂಕ್ ನಿರ್ದೇಶಕ ಬಂಕ್ ಮುನಿಯಪ್ಪ, ಹನುಮಂತರೆಡ್ಡಿ, ಡಾ.ಶಶಿಧರ್, ಡಾ.ಮಧುಕರ್, ಡಾ.ನರಸಾರೆಡ್ಡಿ, ಡಾ.ಶ್ರೀಕಾಂತ್, ಬ್ಯಾಟರಾಯಶೆಟ್ಟಿ, ರಮೇಶ್, ನಾರಾಯಣಸ್ವಾಮಿ, ಶಿವಪ್ರಕಾಶ್ ಸೇರಿ ಮುಂತಾದವರು ಹಾಜರಿದ್ದರು.