ವರ್ಷ ಹತ್ತಾದರೂ ಬಂಗಾರಪೇಟೆ ಕೋರ್ಟ್ಗಿಲ್ಲ ಸ್ವಂತ ಕಟ್ಟಡ..!
ಕೆ.ರಮೇಶ್
ಬಂಗಾರಪೇಟೆ: ಪಟ್ಟಣದಲ್ಲಿರುವ ಜೆಎಂಎಫ್ಸಿ ಪ್ರಾರಂಭವಾಗಿ ಹತ್ತು ವರ್ಷಗಳಾದರೂ ಇನ್ನು ಸ್ವಂತ ಕಟ್ಟಡದ ಭಾಗ್ಯವಿಲ್ಲ. ಬಾಡಿಗೆ ಕಟ್ಟಡದಲ್ಲೆ ಅನಾನುಕೂಲಗಳ ನಡುವೆ ಕಲಾಪ ನಡೆಸುವ ದೌರ್ಭಾಗ್ಯ ನ್ಯಾಯಾಲಯದಾಗಿದೆ.
ಈ ಹಿಂದೆ ಕ್ಷೇತ್ರದ ಎಲ್ಲಾ ಪ್ರಕರಣಗಳು ಕೆಜಿಎಫ್ ನ್ಯಾಯಾಲಯದಲ್ಲೇ ಇತ್ಯರ್ಥವಾಗುತ್ತಿದ್ದವು. ಇದರಿಂದ ಕ್ಷೇತ್ರದ ಜನರಿಗೆ ಅನಾನುಕೂಲವಾಗಿತ್ತು. ಪಟ್ಟಣ ತಾಲೂಕು ಕೇಂದ್ರವಾಗಿದ್ದರೂ ನ್ಯಾಯಾಲಯ ಇರಲಿಲ್ಲ. ಕೋರ್ಟ್ ಆರಂಭಕ್ಕೆ ಹಿರಿಯ ವಕೀಲ ಮೆಹಬೂಬ್ ನೇತೃತ್ವದ ವಕೀಲರ ಹೋರಾಟ ಮಾಡಿದ್ದರು. ಅದರ ಪರಿಣಾಮವಾಗಿ 2004ರಲ್ಲಿ ಜಿಎಂಎಫ್ಸಿ ಆರಂಭವಾಗಿತ್ತು. ಸ್ವಂತ ಕಟ್ಟಡ ಇಲ್ಲದ್ದರಿಂದ ತಾತ್ಕಾಲಿಕವಾಗಿ ಎಂಪಿಎಂಸಿ ಪ್ರಾಂಗಣದಲ್ಲಿರುವ ರೈತ ಭವನವನ್ನೇ ನ್ಯಾಯಾಲಯವಾಗಿ ಮಾರ್ಪಾಡಿಸಲಾಗಿದೆ. ಅಂದರೆ, ನ್ಯಾಯಾಲಯ ಆರಂಭವಾಗಿ ಹತ್ತು ವರ್ಷವಾದರೂ ಇನ್ನೂ ಸ್ವಂತ ಕಟ್ಟಡ ಹೊಂದದಿರುವುದ ವಿಪರ್ಯಾಸವೇ ಸರಿ. ಈಗಿರುವ ಕಟ್ಟದ ತುಂಬಾ ಕಿರಿದು. ನ್ಯಾಯಾಧೀಶರ ವಿಶ್ರಾಂತಿ ಕೊಠಡಿಗಳು ಸುಸಜ್ಜಿತವಾಗಿಲ್ಲ. ಕ್ಯಾಂಟೀನ್ ಸೌಲಭ್ಯವಿಲ್ಲ. ವಿಚಾರಣಾಧೀನ ಕೈದಿಗಳನ್ನಿಡಲು ಕೊಠಡಿಗಳಿಲ್ಲ... ಹೀಗೆ ಇಲ್ಲಗಳ ನಡುವೆ ಕೋರ್ಟ್ ಕಲಾಪ ನಡೆಸುತ್ತಿದೆ.
ಈಗ ಪ್ರಕರಣಗಳ ಸಂಖ್ಯೆ 4 ಸಾವಿರ ದಾಟಿದ್ದು, ತ್ವರಿತವಾಗಿ ಇತ್ಯರ್ಥಗೊಳಿಸಲು ಸಾಧ್ಯವಾಗದೆ ಪ್ರಕರಣಗಳು ನೆನೆಗುದಿಗೆ ಬಿದ್ದಿವೆ. ಕಕ್ಷಿದಾರರಿಗೆ ಅನಾನುಕೂಲ ಮಾಡಬಾರದೆಂದು ಇತ್ತೀಚಿಗೆ ರಾಜ್ಯ ಹೈಕೋರ್ಟ್ ಹೆಚ್ಚುವರಿ ನ್ಯಾಯಾಲಯವನ್ನು ಸಹ ಪ್ರಾರಂಭಿಸಿದೆ. ನ್ಯಾಯಾಲಯಕ್ಕೆ ಸ್ವಂತ ಕಟ್ಟಡ ಕಲ್ಪಿಸಿಕೊಡಿ ಎಂದು ನ್ಯಾಯವಾದಿಗಳು ಹಲವು ಬಾರಿ ಜನಪ್ರತಿನಿಧಿಗಳನ್ನು ಒತ್ತಾಯಿಸಿದ್ದಾರೆ. ಆದರೆ, ಸ್ಪಂದನೆ ಮಾತ್ರ ಸಿಕ್ಕಿಲ್ಲ.
ಈ ಹಿಂದೆ ಹುಣಸನಹಳ್ಳಿ ಕೆರೆ ಅಂಗಳದಲ್ಲಿ ಹಾಗೂ ಜಿಲ್ಲಾ ಪಂಚಾಯ್ತಿ ಎಂಜಿನಿಯರಿಂಗ್ ಕಚೇರಿ ಬಳಿ ಕೋರ್ಟ್ ಕಟ್ಟಡಕ್ಕೆ ಸ್ಥಳ ಪರಿಶೀಲನೆ ನಡೆಸಲಾಯಿತಾದರೂ ಅದು ಸಾರ್ವಜನಿಕರಿಗೆ ಹೋಗಿ ಬರಲು ತುಂಬಾ ದೂರವಾಗಿದ್ದರಿಂದ ಕೈ ಬಿಡಲಾಯಿತು.
ಇದೇ ವೇಳೆ, ಶಾಸಕ ಎಸ್.ಎನ್.ನಾರಾಯಣಸ್ವಾಮಿ ಕಟ್ಟಡಕ್ಕಾಗಿ ಸೂಲಿಕುಂಟೆ ಮಾರ್ಗದಲ್ಲಿರುವ ಕೆಸಿ ರೆಡ್ಡಿ ಕಾಲೇಜು ಎದುರಿಗಿರುವ ಜಾಗದಲ್ಲಿ 6 ಎಕರೆಯನ್ನು ರೈತರಿಂದ ಸತತ ಹೋರಾಟ ಮಾಡಿ ಸ್ವಾದೀನಪಡಿಸಿಕೊಂಡಿದ್ದಾರೆ. ಅನುದಾನ ಸಹ ಮಂಜೂರು ಮಾಡಿಸಿದ್ದಾರೆ. ಆದರೆ ಇನ್ನೂ ಕಟ್ಟಡ ನಿರ್ಮಾಣಕ್ಕೆ ಮೂಹೂರ್ತು ನಿಗದಿಪಡಿಸಿಲ್ಲ. ರೈತ ಭವನವನ್ನು ನ್ಯಾಯಾಲಯಕ್ಕೆ ಬಿಟ್ಟು ಕೊಟ್ಟಿರುವುದರಿಂದ ದೂರದ ಊರುಗಳಿಂದ ಎಪಿಎಂಸಿ ಮಾರುಕಟ್ಟೆಗೆ ಬರು ರೈತರು ತಂಗಲು ಇರುವ ರೈತ ಭವನ ನ್ಯಾಯಾಲಯ ಪಾಲಾಗಿರುವುದರಿಂದ ರೈತರು ಪರದಾಡುವಂತಾಗಿದೆ.