ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕೋಲಾರ

ವಿವಾಹಿತ ಮಹಿಳೆ ಅನುಮಾನಾಸ್ಪದ ಸಾವು

Rashmi Kasaragodu
Updated On : 12 May 2014, 1:36 am

ಬಾಗೇಪಲ್ಲಿ: ವಿವಾಹಿತ ಮಹಿಳೆಯೊಬ್ಬರು ಅನುಮಾನಾಸ್ಪದವಾಗಿ ಸಾವನ್ನಪ್ಪಿರುವ ಘಟನೆ ಪಟ್ಟಣದ 11ನೇ ವಾರ್ಡಿನಲ್ಲಿ ನಡೆದಿದೆ. ದುರ್ದೈವಿ ಮೃತ ಮಹಿಳೆ ಮಂಗಮ್ಮ (40). ಈಕೆ ಪಟ್ಟಣದ ಸರ್ಕಾರಿ ಆಸ್ಪತ್ರೆಯಲ್ಲಿ ಕ್ಲಿನಿಂಗ್ ಕೆಲಸ ನಿರ್ವಹಿಸುತ್ತಿದ್ದಳು. ಶನಿವಾರ ರಾತ್ರಿ ಮನೆ ಯಜಮಾನಿಯೊಂದಿಗೆ ಮಾತನಾಡಿದ ನಂತರ ಹೋಗಿ ಮನೆಯಲ್ಲಿ ಮಲಗಿದ್ದು ಬೆಳಿಗ್ಗೆ ಏಳು ಗಂಟೆಗೆ ಕೆಲಸಕ್ಕೆ ಹೋಗುತ್ತಿದ್ದವಳು 8.30 ಗಂಟೆ ಆದರೂ ಎದ್ದಿಲ್ಲ. ಇದರಿಂದ ಅನುಮಾನಗೊಂಡು ಮನೆ ಯಜಮಾನಿ ಮಂಗಮ್ಮನ್ನು ಎಬ್ಬಿಸಲು ಹೋದಾಗ ಆಕೆ ಸಾವನ್ನಪ್ಪಿರುವುದು ತಿಳಿದು ಬಂದಿದೆ. ಮೃತಳೊಂದಿಗೆ ಅಕ್ರಮ ಸಂಬಂಧವನ್ನಿಟ್ಟುಕೊಂಡಿದ್ದ ಎನ್ನಲಾದ ಮಂಜುನಾಥ್ ರೆಡ್ಡಿ ಎನ್ನುವಾತ ಮಂಗಮ್ಮಳನ್ನು ಕೊಲೆ ಮಾಡಿರಬಹುದು ಎಂದು ಶಂಕಿಸಲಾಗಿದೆ. ಘಟನಾ ಸ್ಥಳಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ದಿವ್ಯಗೋಪಿನಾಥ್, ಡಿವೈಎಸ್ಪಿ ಚಿನ್ನಸ್ವಾಮಿ ಭೇಟಿ ನೀಡಿ ಪರಿಶೀಲಿಸಿದರು. ಶ್ವಾನ ದಳವನ್ನು ಸ್ಥಳಕ್ಕೆ ಕರೆಸಲಾಯಿತಾದರೂ ಯಾವುದೇ ಸುಳಿವು ಸಿಕ್ಕಿಲ್ಲ. ಬಾಗೇಪಲ್ಲಿ ಪೊಲೀಸರು ಪ್ರಕರಣ  ದಾಖಲಿಸಿಕೊಂಡಿದ್ದಾರೆ.


ಅಪಘಾತ: ಮೂವರಿಗೆ ಗಾಯ
ಶಿಡ್ಲಘಟ್ಟ: ಬಸ್ ಮತ್ತು ಟ್ರಾಕ್ಟರ್ ನಡುವೆ ಸಂಭವಿಸಿದ ಅಪಘಾತದಲ್ಲಿ ಮೂವರು ಗಾಯಗೊಂಡ ಘಟನೆ ನಡೆದಿದೆ. ಪಟ್ಟಣದ ಹೊರವಲಯದಲ್ಲಿರುವ ಹಂಡಿಗನಾಳದ ಬಳಿ ಇರುವ ಮೋರಿಯ ಹತ್ತಿರ ಶಿಡ್ಲಘಟ್ಟದ ಕಡೆಯಿಂದ ಬಂದ ಖಾಸಗಿ ಬಸ್ಸು ಹಾಗೂ ಟ್ಯಾಕ್ಟರ್ ನಡುವೆ ಡಿಕ್ಕಿ ಸಂಭವಿಸಿದೆ. ಟ್ರಾಕ್ಟರ್ ತಾಲೂಕಿನ ದೊಗರನಾಯಕನಹಳ್ಳಿ ಗ್ರಾಮದ ನಾರಾಯಣಪ್ಪ ಎನ್ನುವವರಿಗೆ ಸೇರಿದೆ. ತೀವ್ರವಾಗಿ ಗಾಯಗೊಂಡಿರುವ ಮುನಿಯಪ್ಪ ಎಂಬುವವರನ್ನು ಪಟ್ಟಣದ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ರವಾನಿಸಲಾಗಿದೆ. ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.



ಅಡಿಗಲ್ಲು ಇಂದು
ಕೋಲಾರ: ತಾಲೂಕಿನ ಸುಗಟೂರು ಗ್ರಾಮದ ಪಾಲಾರ್ ನದಿ ತಪ್ಪಲಲ್ಲಿ ಸುಗಟೂರು ಪಾಲಾರ್ ಶ್ರೀಲಕ್ಷ್ಮೀಕದರಿ ನರಸಿಂಹಸ್ವಾಮಿ ದೇವಾಲಯದ ಶಂಕುಸ್ಥಾಪನಾ ಮಹೋತ್ಸವ ಮೇ 12 ರಂದು ಸೋಮವಾರ ನಡೆಯಲಿದೆ. ಈ ಶಂಕುಸ್ಥಾಪನಾ ಮಹೋತ್ಸವಕ್ಕೆ ಸಣ್ಣ ಮತ್ತು ಮಧ್ಯಮ ಕೈಗಾರಿಕಾ ಸಚಿವರಾದ ಕೆ.ಹೆಚ್. ಮುನಿಯಪ್ಪ,ಶಾಸಕ ಕೆ.ಆರ್. ರಮೇಶ್ ಕುಮಾರ್, ಸಮಾಜ ಕಲ್ಯಾಣ ಸಚಿವ ಹೆಚ್. ಆಂಜನೇಯ, ಅಬಕಾರಿ ಸಚಿವ ಸತೀಷ್ ಜಾರಕಿಹೊಳಿ, ವಿಧಾನಪರಿಷತ್ ಮಾಜಿ ಅಧ್ಯಕ್ಷ ವಿ.ಆರ್. ಸುದರ್ಶನ್, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಅನಿಲ್‌ಕುಮಾರ್, ಮಾಜಿ ಜಿ.ಪಂ. ಅಧ್ಯಕ್ಷ ಜನ್ನಘಟ್ಟ ವೆಂಕಟಮುನಿಯಪ್ಪ  ಖ್ಯಾತ ಶಿಲ್ಪಿ ಪದ್ಮನಾಭಾಚಾರ್ಯಯ, ಜಿ.ಪಂ. ಮಾಜಿ ಸದಸ್ಯ ಮುನಿಕದಿರಪ್ಪ, ಪರಿಶಿಷ್ಟ ಪಂಗಡ ಜಿಲ್ಲಾ ಮುಖಂಡ ವಕೀಲ ಸುಗಟೂರು ನಾಗರಾಜ್, ಶಂಕರನಾರಾಯಣ ಮುಂತಾದವರು ಭಾಗವಹಿಸಲಿದ್ದಾರೆ.
ತೀರ್ಪು ಅಡ್ಡಿ
ಚಿಂತಾಮಣಿ: ಸುಪ್ರೀಂ ಕೋರ್ಟ್ ತೀರ್ಪು ಕನ್ನಡದ ಅಭಿವೃದ್ಧಿಗೆ ಅಡ್ಡಿಯಾಗಲಿದೆ ಎಂದು ತಾಲೂಕು ಕನ್ನಡ ಸಾಹಿತ್ಯ ವೇದಿಕೆ, ಚುಟುಕು ಸಾಹಿತ್ಯ ಪರಿಷತ್ತು ಹಾಗೂ ಸಿರಿಗನ್ನಡ ವೇದಿಕೆಗಳು ಅಭಿಪ್ರಾಯಪಟ್ಟಿವೆ.  ಸುಪ್ರೀಂ ಕೋರ್ಟ್ ನೀಡಿರುವ ತೀರ್ಪನ್ನು ಮರು ಪರಿಶೀಲಿಸುವಂತೆ ರಾಜ್ಯ ಸರ್ಕಾರ ಮನವಿ ಮಾಡಿಕೊಳ್ಳಬೇಕು. ಕನ್ನಡ ಭಾಷೆ ಉಳವಿಗೆ ಎಲ್ಲ ಅಗತ್ಯ ಕ್ರಮಗಳನ್ನು ಸರ್ಕಾರ ಕೈಗೊಳ್ಳಬೇಕು ಎಂದು ಚುಸಾಪ ಅಧ್ಯಕ್ಷರಾದ ಕಾಗತಿ ವಿ.ವೆಂಕಟರತ್ನಂ ಹಾಗೂ ಸಿರಿಗನ್ನಡ ವೇದಿಕೆಯ ಕೆ.ಎನ್. ಅಕ್ರಂ ಪಾಷ ಆಗ್ರಹ ಪಡಿಸಿದ್ದಾರೆ. ಕನ್ನಡ ನಾಡು-ನುಡಿಯ ಕುರಿತು ಹೋರಾಟ ನಡೆಸುವ ಕನ್ನಡಿಗರು ಮೊದಲು ತಮ್ಮ ಮಕ್ಕಳನ್ನು ಕನ್ನಡ ಶಾಲೆಗಳಿಗೆ ಸೇರಿಸುವ ಮೂಲಕ ಕನ್ನಡದ ಸಂರಕ್ಷಣೆಗೆ ಮುಂದಾಗಬೇಕೆಂದು ಮನವಿ ಮಾಡಿದ್ದಾರೆ.
ವಿದ್ಯುತ್ ಶಾಕ್
ಶಿಡ್ಲಘಟ್ಟ: ಬೇಸಿಗೆ ಕಾಲವಾದ್ದರಿಂದ ರೈತರು ಸೇರಿದಂತೆ ಜನತೆ ಕುಡಿಯುವ ನೀರಿಗೆ ಪರದಾಡುತ್ತಿರುವುದು ಒಂದೆಡೆಯಾದರೆ ಮತ್ತೊಂದೆಡೆ ವಿದ್ಯುತ್ ಅಭಾವ ಎದುರಿಸಬೇಕಾದ ಅನಿವಾರ್ಯತೆ ವಿಧಾನಸಭೆ ಡೆಪ್ಯುಟಿ ಸ್ಪೀಕರ್ ಅವರಿಗೂ ತಟ್ಟಿತು! ಪಟ್ಟಣದ ಬೆಸ್ಕಾಂ ಕಚೇರಿಯ ಮುಂಭಾಗದಲ್ಲೆ ಆಯೋಜನೆ ಮಾಡಲಾಗಿದ್ದ ಮಾನಸ ಆಸ್ಪತ್ರೆಯ ಕಟ್ಟಡದ ಪ್ರಾರಂಭೋತ್ಸವ ಕಾರ್ಯಕ್ರಮಕ್ಕೆ ಡೆಪ್ಯೂಟಿ ಸ್ಪೀಕರ್ ಶಿವಶಂಕರರೆಡ್ಡಿ ಅವರು ಮುಖ್ಯ ಅತಿಥಿಗಳಾಗಿದ್ದರು. ಅವರು ಭಾಷಣ ಮಾಡುವ ವೇಳೆ ಕರೆಂಟ್ ಕೈಕೊಟ್ಟಿತ್ತು. ಆಗ ಭಾಷಣವನ್ನು ಅರ್ಧಕ್ಕೆ ನಿಲ್ಲಿಸಿ, ಮತ್ತೆ ಕರೆಂಟ್ ಬಂದ ಬಳಿಕ ಉಳಿದ ಭಾಷಣ ಮಾಡಬೇಕಾದ ಪ್ರಸಂಗ ನಡೆಯಿತು.



ಅದ್ಧೂರಿಯ ಕರಗ ಉತ್ಸವ
ಟೇಕಲ್: ಹುಣಸಿಕೋಟೆಯಲ್ಲಿ ಶನಿವಾರ ಶ್ರೀಪಟಾಲಮ್ಮ ಹೂವಿನ ಕರ ಮಹೋತ್ಸವ ನಡೆಯಿತು. ಬೆಳಗ್ಗೆಯಿಂದಲೇ ಗ್ರಾಮ ದೇವಿಗೆ ಪಂಚಾಮೃತ ಅಭಿಷೇಕ ಹೂವಿನ ಅಲಂಕಾರ ಹಾಗೂ ಮಹಾಮಂಗಳಾರತಿ ಮಾಡಿ ತೀರ್ಥ ಪ್ರಸಾದ ವಿನಿಯೋಗ ಮಾಡಲಾಯಿತು. ಸಂಜೆ ರಸಮಂಜರಿ ಕಾರ್ಯಕ್ರಮವಿತ್ತು. 9 ಗಂಟೆಗೆ ಸಕಲ ದೇವರುಗಳ ಪಲ್ಲಕ್ಕಿ ಉತ್ಸವಗಳು ನಡೆಯಿತು. ಕರಗ ಪೂಜಾರಿ ಮುದುವತ್ತಿ ಮುರುಳಿಯವರಿಂದ ಹೂವಿನ ಕರಗ ಜನಮನಸೊರೆಗೊಂಡಿತು. ಗ್ರಾಮದ ಪಟಾಲಮ್ಮ ದೇವಿಯ ಗುಡಿಯಿಂದ ಕರಗ ಹೊತ್ತ ಪೂಜಾರಿ ವಿವಿಧ ಭಂಗಿಗಳಲ್ಲಿ ನಾಟ್ಯ ಮಾಡಿದರು. ಗ್ರಾಮದ ರಾಜಬೀದಿಗಳಲ್ಲಿ ಪೂಜೆ ಸ್ವೀಕರಿಸಲಾಯಿತು. ತದನಂತರ ಮುಂಜಾನೆ 6 ಗಂಟೆಗೆ ಗ್ರಾಮದೇವತೆಯ ಗುಡಿಯ ಮುಂದೆ ಅಗ್ನಿಕುಂಡ ಪ್ರವೇಶ ಮಾಡಿ ವಸಂತೋತ್ಸವ ಆಚರಣೆ ಮಾಡಲಾಯಿತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement