ಕೋಲಾರ ನಗರದಲ್ಲಿ ಎಬಿವಿಪಿಯಿಂದ ಭಾರಿ ಪ್ರತಿಭಟನೆ
ಕೋಲಾರ: ಲೈಗಿಂಕ ಕಿರುಕುಳ ಹೊತ್ತಿರುವ ಡಾ. ಕಾ.ವೆಂ. ಶ್ರೀನಿವಾಸ ಮೂರ್ತಿಯನ್ನು ಸೇವೆಯಿಂದ ಅಮಾನತು ಮಾಡಬೇಕೆಂದು ಒತ್ತಾಯಿಸಿ ಎಬಿವಿಪಿ ವತಿಯಿಂದ ನಗರದಲ್ಲಿ ಪ್ರತಿಭಟನೆ ನಡೆಸಲಾಯಿತು.
ನಗರದ ಬಸ್ ನಿಲ್ದಾಣದ ವೃತ್ತದಲ್ಲಿ ಜಮಾಯಿಸಿದ ವಿದ್ಯಾರ್ಥಿಗಳು, ವಿದ್ಯಾರ್ಥಿನಿಗೆ ಕಿರುಕುಳ ನೀಡಿರುವ ಇಲ್ಲಿನ ಡಾ.ಕಾ.ವೆಂ. ಶ್ರೀನಿವಾಸಮೂರ್ತಿಯನ್ನು ಬಂಧಿಸಬೇಕೆಂದು ಒತ್ತಾಯಿಸಲಾಯಿತು. ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸುವ ಮೂಲಕ ಮುಂದೆ ಇಂಥ ಘಟನೆಗಳು ನಡೆಯದಂತೆ ಎಚ್ಚರಿಕೆ ವಹಿಸಬೇಕು. ದೌರ್ಜನ್ಯಕ್ಕೊಳಗಾದ ವಿದ್ಯಾರ್ಥಿನಿಗೆ ಬೆಂವಿವಿ ನೈತಿಕಸ್ಥೈರ್ಯ, ಸೂಕ್ತ ರಕ್ಷಣೆಯನ್ನು ಒದಗಿಸಬೇಕು. ಮನವಿಯಂತೆ ಮಾರ್ಗದರ್ಶಕರನ್ನು ಬದಲಾಯಿಸಬೇಕು ಎಂದು ಆಗ್ರಹಿಸಲಾಯಿತು.
ಎಫ್‌ಐಆರ್ ದಾಖಲು, ಪ್ರತಿಭಟನೆ: ಎಬಿವಿಪಿ ಜಿಲ್ಲಾ ಸಂಘಟನಾ ಕಾರ್ಯದರ್ಶಿ ಮುರಳಿ ವಿರುದ್ಧ ಎಸ್‌ಎಫ್‌ಐ ಜಿಲ್ಲಾಧ್ಯಕ್ಷ ವಾಸುದೇವರೆಡ್ಡಿ ನೀಡಿರುವ ದೂರಿನ ಮೇರೆಗೆ ಗ್ರಾಮಾಂತರ ಪೊಲೀಸರು ಎಫ್‌ಐಆರ್ ದಾಖಲಿಸಿರುವುದನ್ನು ಖಂಡಿಸಿ, ಬಿಜೆಪಿಯ ಯುವ ಮೋರ್ಚಾ ವತಿಯಿಂದ ಸೋಮವಾರ ರಾತ್ರಿ ಗ್ರಾಮಾಂತರ ಪೊಲೀಸ್ ಠಾಣೆ ಮುಂದೆ ಪ್ರತಿಭಟನೆ ನಡೆಯಿತು. ಪೊಲೀಸರು ಕೇವಲ ಮುರಳಿ ವಿರುದ್ಧ ಪ್ರಕರಣ ದಾಖಲು ಮಾಡಿಕೊಂಡು ಘಟನೆಗೆ ಕಾರಣರಾದ ವಾಸುದೇವರೆಡ್ಡಿಯನ್ನು ಬಚಾವ್ ಮಾಡಲು ಹೊರಟಿರುವುದು ಪಕ್ಷಪಾತ ಧೋರಣೆ ಎಂದು ಖಂಡಿಸಿದರು.
ವಿದ್ಯಾರ್ಥಿನಿಗೆ ಲೈಂಗಿಕ ಕಿರಕುಳ ನೀಡಿರುವ ಕಾ.ವೆಂ.ಶ್ರೀನಿವಾಸಮೂರ್ತಿಯನ್ನು ರಕ್ಷಣೆ ಮಾಡಲು ಎಸ್‌ಎಫ್‌ಐ ಮುಂದಾಗಿರುವುದು ಸರಿಯಲ್ಲ, ವಿದ್ಯಾರ್ಥಿನಿಗೆ ಆಗಿರುವ ಅನ್ಯಾಯಕ್ಕೆ ಎಲ್ಲರೂ ಸೇರಿ ನ್ಯಾಯ ಕೊಡಿಸಬೇಕು ಎಂದು ಒತ್ತಾಯಿಸಿದರು. ಜಿಲ್ಲಾ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ವಾಸುದೇವರೆಡ್ಡಿ ವಿರುದ್ಧವೂ ಪ್ರಕರಣ ದಾಖಲಿಸುವುದಕ್ಕೆ ಭರವಸೆ ನೀಡಿದ ನಂತರ ಪ್ರತಿಭಟನೆ ಹಿಂದಕ್ಕೆ ಪಡೆಯಲಾಯಿತು.