ಕೋಲಾರಕ್ಕೆ ದಾಖಲೆ ಫಲಿತಾಂಶ!
ಕ.ಪ್ರ. ವಾರ್ತೆ ಟಿ ಕೋಲಾರ ಟಿ ಮೇ 12
ಕಳೆದ ತಿಂಗಳಲ್ಲಿ ನಡೆದ ಎಸ್ಸೆಸ್ಸೆಲ್ಸಿ ಪರೀಕ್ಷಾ ಫಲಿತಾಂಶದಲ್ಲಿ ಕೋಲಾರ ಜಿಲ್ಲೆಗೆ 7ನೇ ಸ್ಥಾನ ಲಭಿಸಿದೆ.
ಕಳೆದ ಬಾರಿ ಜಿಲ್ಲೆ 4ನೇ ಸ್ಥಾನ ಪಡೆದಿತ್ತು. ಈ ಬಾರಿ ಪರೀಕ್ಷೆಗೆ 21071 ವಿದ್ಯಾರ್ಥಿಗಳು ಕುಳಿತಿದ್ದರು. ಈ ಪೈಕಿ 18497 ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದಾರೆ. ಜಿಲ್ಲೆಯ ಇತಿಹಾಸದಲ್ಲೇ ಇದೇ ಮೊದಲ ಬಾರಿಗೆ ಶೇ.87.78 ರಷ್ಟು ದಾಖಲೆಯ ಫಲಿತಾಂಶ ಬಂದಿರುವುದು ಶೈಕ್ಷಣಿಕ ಸಾಧನೆಯ ಮೈಲಿಗಲ್ಲು ಎಂದು ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಎಸ್.ವಿ.ಪದ್ಮನಾಭ್ ಹರ್ಷ ವ್ಯಕ್ತಪಡಿಸಿದ್ದಾರೆ. ತಮ್ಮ ಕಚೇರಿಯಲ್ಲಿ ಪತ್ರಕರ್ತರಿಗೆ ಫಲಿತಾಂಶದ ಮಾಹಿತಿ ನೀಡಿದ ಅವರು, 4ನೇ ಸ್ಥಾನದಿಂದ 7 ನೇ ಸ್ಥಾನಕ್ಕೆ ಫಲಿತಾಂಶ ಕುಸಿದರೂ ಶೇಕಡಾವಾರು ಫಲಿತಾಂಶದಲ್ಲಿ ಶೇ.1.48 ರಷ್ಟು ಏರಿಕೆ ಕಂಡಿದೆ ಎಂದರು.
ಶ್ರೀನಿವಾಸಪುರಕ್ಕೆ 6ನೇ ಸ್ಥಾನ: ಇದೇ ಮೊದಲ ಬಾರಿಗೆ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ ಅಗ್ರಶ್ರೇಣಿ ಹಾಗೂ ಪ್ರಥಮ ಶ್ರೇಣಿಯನ್ನು ಮಾತ್ರ ಆಧಾರವಾಗಿಟ್ಟುಕೊಂಡು ಗುಣಾತ್ಮಕ ಫಲಿತಾಂಶದ ಅಂಕಪಟ್ಟಿ ಬಿಡುಗಡೆ ಮಾಡಿದ್ದು, ಇದರಲ್ಲಿ ಜಿಲ್ಲೆಗೆ 11ನೇ ಸ್ಥಾನ ಬಂದಿದೆ ಎಂದರು. ಗುಣಾತ್ಮಕ ರ್ಯಾಂಕ್‌ನ ತಾಲೂಕುವಾರು ಪಟ್ಟಿಯಲ್ಲಿ ರಾಜ್ಯದಲ್ಲೇ ಜಿಲ್ಲೆಯ ಶ್ರೀನಿವಾಸಪುರ ತಾಲೂಕಿಗೆ 6 ನೇ ಸ್ಥಾನ ಗಳಿಸುವ ಮೂಲಕ ಜಿಲ್ಲೆ ಫಲಿತಾಂಶದಲ್ಲಿ ಗಣನೀಯ ಸಾಧನೆ ತೋರಿದೆ ಎಂದರು. ಜಿಲ್ಲೆಯ 1469 ಅಗ್ರಶ್ರೇಣಿಯಲ್ಲಿ, 7461 ಪ್ರಥಮ, 4159 ದ್ವಿತೀಯ ಹಾಗೂ 6186 ಮಂದಿ ತೃತೀಯ ಶ್ರೇಣಿಯಲ್ಲಿ ಪಾಸಾಗಿದ್ದಾರೆ ಎಂದು ಅಧಿಕಾರಿ ನಾಗೇಂದ್ರ ಪ್ರಸಾದ್ ಹೆಚ್ಚಿನ ಮಾಹಿತಿ ನೀಡಿದರು. ನಗರ ಪ್ರದೇಶದಲ್ಲಿ ಪರೀಕ್ಷೆಗೆ ಕುಳಿತ 6572 ಬಾಲಕಿಯರಲ್ಲಿ 5779 ಮಂದಿ ತೇರ್ಗಡೆಯಾಗಿದ್ದು, 5814 ಬಾಲಕರಲ್ಲಿ 5400 ಮಂದಿ ಪಾಸಾಗಿದ್ದಾರೆ. ಗ್ರಾಮಾಂತರ ಪ್ರದೇಶದಲ್ಲಿ 4304 ಬಾಲಕಿಯರು ಪರೀಕ್ಷೆಗೆ ಕುಳಿತಿದ್ದು, 3523 ಮಂದಿ, 4381 ಬಾಲಕರಲ್ಲಿ 3795 ಮಂದಿ ಪಾಸಾಗಿದ್ದಾರೆ ಎಂದು ತಿಳಿಸಿದರು. ಒಟ್ಟಾರೆಯಾಗಿ ನಗರ ಪ್ರದೇಶದಲ್ಲಿ ಶೇ.87.93 ಬಾಲಕಿಯರು, 92.88 ಬಾಲಕರು ಉತ್ತೀರ್ಣರಾಗಿದ್ದರೆ, ಗ್ರಾಮಾಂತರದಲ್ಲಿ 81.85 ಬಾಲಕಿಯರು, 86.62 ಬಾಲಕರು ಪಾಸಾಗಿದ್ದಾರೆಂದರು.
ಶೇ.80ಕ್ಕೂ ಮೀರಿ ಸಾಧನೆ: ಜಿಲ್ಲೆಯ 325 ಶಾಲೆಗಳ ಪೈಕಿ ಶೇ.80ಕ್ಕೂ ಮೀರಿ ಫಲಿತಾಂಶವನ್ನು 263ಶಾಲೆಗಳು ಪಡೆದುಕೊಂಡಿದ್ದು, 111 ಸರ್ಕಾರಿ, 46 ಅನುದಾನಿತ ಹಾಗೂ 106 ಅನುದಾನ ರಹಿತ ಶಾಲೆಗಳಾಗಿವೆ ಎಂದರು.
ಕಿವುಡರು ಶೇ.100
ಜಿಲ್ಲೆಯಲ್ಲಿ ಮೂವರು ಕಿವುಡ ವಿದ್ಯಾರ್ಥಿಗಳು ಪರೀಕ್ಷೆ ತೆಗೆದುಕೊಂಡಿದ್ದು, ಅವರಲ್ಲಿ ಎಲ್ಲರೂ ತೇರ್ಗಡೆಯಾಗಿದ್ದು, ಶೇ.100 ಫಲಿತಾಂಶ ಬಂದಿದೆ. ನನ್ನನ್ನೊಮ್ಮೆ ಗಮನಿಸಿಇಲಾಖೆ ಹೊರ ತಂದಿದ್ದ ಮಾದರಿ ಪ್ರಶ್ನೆ ಪತ್ರಿಕೆಗಳ ಹೊತ್ತಿಗೆ ಹೆಚ್ಚು ಪರಿಣಾಮಕಾರಿಯಾಗಿದ್ದು, ಜಿಲ್ಲೆಯ ಈ ಸಾಧನೆಗೆ ಅತ್ಯಂತ ಪ್ರೇರಕವಾಗಿದೆ ಎಂದರು. ಜಿಲ್ಲೆಯ ಮುಳಬಾಗಿಲು ಅಮರಜ್ಯೋತಿ ಶಾಲೆಯ ವಿ.ಸಿ.ಸುನೀಲ್ ಚಂದ್ರಶೇಖರ್ 617 ಅಂಕಗಳೊಂದಿಗೆ ಪ್ರಥಮ ಹಾಗೂ ನಗರದ ಚಿನ್ಮಯ ಶಾಲೆಯ ಟಿ.ಎ.ಹರ್ಷಿತಾ 616 ಅಂಕಗಳೊಂದಿಗೆ ದ್ವಿತೀಯ ಸ್ಥಾನ ಗಳಿಸಿದ್ದಾರೆ.