ಜಿಲ್ಲೆಯ ಎಲ್ಲ ಜನಪ್ರತಿನಿಧಿಗಳ ಸಭೆ ಕರೆಯಿರಿ
ಕೋಲಾರ: ಬೆಂಗಳೂರು ವಿವಿಗೆ ಸೇರಿದ ಕೋಲಾರ ಸ್ನಾತಕೋತ್ತರ ಕೇಂದ್ರದಲ್ಲಿ ನಡೆಯುತ್ತಿರುವ ಹಿಟ್ಲರ್ ದರ್ಬಾರ್‌ಗೆ ಇತಿಶ್ರೀ ಹಾಡಲು ಕೂಡಲೇ ಜಿಲ್ಲೆಯ ಎಲ್ಲಾ ಜನಪ್ರತಿನಿಧಿಗಳ ಸಭೆ ಕರೆಯಬೇಕೆಂದು ವಿಧಾನ ಪರಿಷತ್ ಸದಸ್ಯ ವೈ.ಎ.ನಾರಾಯಣಸ್ವಾಮಿ ಆಗ್ರಹಿಸಿದರು. ವಿದ್ಯಾರ್ಥಿನಿ ಮೇಲೆ ಅಧ್ಯಾಪಕರೊಬ್ಬರು ಲೈಂಗಿಕ ದೌರ್ಜನ್ಯವೆಸಗಿರುವ ಪ್ರಕರಣದ ಹಿನ್ನಲೆಯಲ್ಲಿ ವೈ.ಎ.ನಾರಾಯಣಸ್ವಾಮಿ ಸೋಮವಾರ ತಾಲೂಕಿನ ಮಂಗಸಂದ್ರದಲ್ಲಿರುವ ಪಿಜಿ ಕೇಂದ್ರಕ್ಕೆ ಭೇಟಿ ನೀಡಿ ವಿದ್ಯಾರ್ಥಿಗಳ ಕುಂದು ಕೊರತೆ ಅಲಿಸಿದ ಬಳಿಕ ದೂರವಾಣಿ ಮುಖೇನ ಉಪ ಕುಲಪತಿಯೊಂದಿಗೆ ಮಾತನಾಡಿ, ಕೋಲಾರ ಪಿಜಿ ಕೇಂದ್ರದ ಸುಧಾರಣೆ ಹಾಗೂ ಅಭಿವೃದ್ಧಿಗಾಗಿ ಜಿಲ್ಲೆಯ ಶಾಸಕರನ್ನೊಳಗೊಂಡ ಸಭೆಯನ್ನು ವಾರದೊಳಗೆ ಪಿಜಿ ಕೇಂದ್ರದಲ್ಲಿ ಕರೆಯುವಂತೆ ತಿಳಿಸಿದರು.
ಕಳೆದ 4 ವರ್ಷಗಳಿಂದ ಪಿಜಿ ನಿರ್ದೇಶಕರ ಅವಧಿಯಲ್ಲಿನ ಪ್ರಗತಿ ಕುರಿತು ಪರಿಶೀಲನೆ ನಡೆಸಬೇಕು. ವಿದ್ಯಾರ್ಥಿಗಳ ಹಿತ ಮರೆತು ಗುಂಪುಗಾರಿಕೆಯಲ್ಲಿ ನಿರತರಾಗಿರುವ ಹಾಗೂ ವಿದ್ಯಾರ್ಥಿಗಳಲ್ಲಿ ಜಾತಿ ವಿಷ ಬೀಜ ಬಿತ್ತುತ್ತಿರುವ ಬೋಧಕ-ಬೋಧಕೇತರ ಸಿಬ್ಬಂದಿಯನ್ನು ಎತ್ತಗಂಡಿ ಮಾಡಿ ಉತ್ತಮ ವಾತಾವಣ ಕಲ್ಪಿಸಬೇಕಾಗಿರುವುದರಿಂದ ಜನಪ್ರತಿನಿಧಿಗಳೊಂದಿಗೆ ಚರ್ಚಿಸುವುದು ಸೂಕ್ತವೆಂದು ಸಲಹೆ ನೀಡಿದರು. ಈ ಸಂದರ್ಭದಲ್ಲಿ ಉಪನ್ಯಾಸಕ ನಾಗನಂದ ಕೆಂಪರಾಜ್,ಹೂವಳ್ಳಿ ರಂಗಪ್ಪ ಇದ್ದರು.
ಬೆಂಗಳೂರು ವಿವಿಯಲ್ಲೇ ಹಲವು ಅಕ್ರಮ
ಪಿಎಚ್.ಡಿ ಸಂಶೋಧನಾ ವಿದ್ಯಾರ್ಥಿನಿ ಮೇಲೆ ಲೈಂಗಿಕ ದೌರ್ಜನ್ಯವೆಸಗಿರುವ ಆರೋಪ ಹೊತ್ತಿರುವ ಕೋಲಾರ ಸ್ನಾತಕೋತ್ತರ ಕೇಂದ್ರದ ಕನ್ನಡ ವಿಭಾಗದ ಅಧ್ಯಾಪಕ ಡಾ. ಕಾ. ವೆಂ. ಶ್ರೀನಿವಾಸಮೂರ್ತಿ ವಿರುದ್ಧ ಸ್ವಯಂ ಪ್ರೇರಿತ ಪ್ರಕರಣ ದಾಖಲಿಸಿ ಕೂಡಲೇ ಬಂಧಿಸಬೇಕೆಂದು ವಿಧಾನ ಪರಿಷತ್ ಸದಸ್ಯ ವೈ. ಎ.ನಾರಾಯಣ ಸ್ವಾಮಿ ಒತ್ತಾಯಿಸಿದರು. ಪಿಜಿ ಕೇಂದ್ರದಲ್ಲಿ ವಿದ್ಯಾರ್ಥಿನಿಗಳೊಂದಿಗೆ ಚರ್ಚಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿ, ಬೆಂಗಳೂರು ವಿವಿಯಲ್ಲಿ ಈಗಾಗಲೇ ಹಲವಾರು ಅಕ್ರಮಗಳು, ಅದ್ವಾನಗಳ ಜೊತೆಗೆ ಉನ್ನತ ಶಿಕ್ಷಣ ಪಡೆಯಲು ಬರುವ ಹೆಣ್ಣು ಮಕ್ಕಳಿಗೆ ರಕ್ಷಣೆ ಇಲ್ಲದಂತಾಗಿದೆ. ಅಧ್ಯಾಪಕರೇ ಶಿಷ್ಯರ ಮೇಲೆ ಲೈಂಗಿಕ ಕಿರಕುಳ ನೀಡುತ್ತಿರುವುದು ಶೋಚನಿಯ. ಸರ್ಕಾರ ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಆರೋಪಿಯನ್ನು ಬಂಧಿಸಿ ತನಿಖೆ ನಡೆಸಬೇಕೆಂದು ಒತ್ತಾಯಿಸಿದರು.
ಅಮಾನತು ಮಾಡಲು ಆಗ್ರಹ
ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ಅನೇಕ ಸಾರಿ ವಿದ್ಯಾರ್ಥಿನಿಯನ್ನು ತನ್ನ ಕಾರಿನಲ್ಲಿ ಡ್ರಾಪ್ ಮಾಡಿರುವುದಾಗಿ ಹೇಳಿರುವುದನ್ನು ಪರಿಗಣಿಸಿ ಸ್ವಯಂ ಪ್ರೇರಿತ ಪ್ರಕರಣ ದಾಖಲಿಸಿ ಕಾನೂನಿಗೆ ಒಪ್ಪಿಸಬೇಕು. ಕೂಡಲೇ ಆರೋಪಿಯನ್ನು ಅಮಾನತುಗೊಳಿಸಬೇಕೆಂದರು. ವಿವಿಯಲ್ಲಿ ರಚನೆಗೊಂಡಿರುವ ಲೈಂಗಿಕ ದೌರ್ಜನ್ಯ ತಡೆ ಸಮಿತಿ ಹಲ್ಲು ಇಲ್ಲದ ಹಾವಿನಂತಾಗಿದೆ ಎಂದು ಟೀಕಿಸಿದರು.
ಪೊಲೀಸ್ ಅಧಿಕಾರಿಯನ್ನು ನೇಮಿಸಲಿ
ಸರ್ಕಾರಕ್ಕೆ ಹೆಣ್ಣು ಮಕ್ಕಳ ಉನ್ನತ ಶಿಕ್ಷಣದ ಕಾಳಜಿ ಇದ್ದರೆ ಲೈಂಗಿಕ ದೌರ್ಜನ್ಯ ತಡೆ ಸಮಿತಿಗೆ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರನ್ನು ನೇಮಿಸಿ, ತುರ್ತು ಕ್ರಮ ಜರುಗಿಸಬೇಕು. ಹೀಗೆ ಮಾಡಿದಲ್ಲಿ ಮಾತ್ರ ಬೇರೆಯವರಿಗೆ ಭಯ ಉಂಟಾಗಿ ದೌರ್ಜನ್ಯಗಳು ನಿಯಂತ್ರಗೊಳ್ಳುತ್ತವೆ ಎಂದು ಅಭಿಪ್ರಾಯಿಸಿದರು.