ರಾಧಾಕೃಷ್ಣ ಕೊಲೆ ಆರೋಪಿಗಳ ಬಂಧಿಸುವಂತೆ ಆಗ್ರಹಿಸಿ ಧರಣಿ
ಕೋಲಾರ: ಮುಳಬಾಗಿಲು ತಾಲೂಕಿನ ಸಿಪಿಐ ಮುಖಂಡ ರಾಧಾಕೃಷ್ಣ ಅವರನ್ನು ಕೊಲೆ ಮಾಡಿದ ಆರೋಪಿಗಳನ್ನು ಶೀಘ್ರವಾಗಿ ಬಂಧಿಸಬೇಕು ಮತ್ತು ಮೃತನ ಕುಟುಂಬಕ್ಕೆ ಕನಿಷ್ಠ 30 ಲಕ್ಷ ಪರಿಹಾರ ನೀಡಬೇಕೆಂದು ಒತ್ತಾಯಿಸಿ ಸಿಪಿಐಎಂ ನೇತೃತ್ವದಲ್ಲಿ ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಸೋಮವಾರ ಪ್ರತಿಭಟನೆ ನಡೆಸಲಾಯಿತು.
ಬಡವರ ಮತ್ತು ದಲಿತರ ಪರವಾಗಿ ಹಲವಾರು ಹೋರಾಟಗಳನ್ನು ನಡೆಸಿದ್ದ ರಾಧಕೃಷ್ಣ ಅವರನ್ನು ಕೊಲೆ ಮಾಡಿ ಹಲವು ದಿನಗಳು ಕಳೆದಿದ್ದರೂ, ಇದುವರೆಗೂ ಆರೋಪಿಗಳನ್ನು ಬಂಧಿಸಿಲ್ಲ. ಕೊಲೆ ಆರೋಪಿಗಳ ಪೈಕಿ ಇಬ್ಬರು ಸ್ವತಃ ನ್ಯಾಯಾಲಯಕ್ಕೆ ಶರಣಾಗಿದ್ದಾರೆ. ಉಳಿದ ಮೂವರು ಆರೋಪಿಗಳನ್ನು ಇದುವರೆಗೂ ಬಂಧಿಸಲು ಪೊಲೀಸರು ಪ್ರಯತ್ನಿಸುತ್ತಿಲ್ಲ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು. ರಾಧಾಕೃಷ್ಣರವರ ಕುಟುಂಬಕ್ಕೆ ರಕ್ಷಣೆಯನ್ನು ನೀಡಬೇಕು. ಅವರ ಪತ್ನಿ ವಿರುದ್ಧ ದಾಖಲಾಗಿರುವ ಪ್ರಕರಣವನ್ನು ಕೈಬಿಡಬೇಕು. ಅಲ್ಲದೆ ಸರ್ಕಾರಿ ಉದ್ಯೋಗ ಮತ್ತು ಪರಿಹಾರ ಧನವನ್ನು ನೀಡಬೇಕು. ಕೊಲೆ ಆರೋಪಿಗಳನ್ನು ಪತ್ತೆ ಹಚ್ಚುವಲ್ಲಿ ನಿರ್ಲಕ್ಷ್ಯ ವಹಿಸಿದ ಪೊಲೀಸರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಜಿಲ್ಲಾಧಿಕಾರಿಗಳಿಗೆ ಸಲ್ಲಿಸಲಾದ ಮನವಿಯಲ್ಲಿ ಒತ್ತಾಯಿಸಿದ್ದಾರೆ.
ಪ್ರತಿಭಟನೆಯ ನೇತೃತ್ವವನ್ನು ಸಿಪಿಐ(ಎಂ) ಪಕ್ಷದ ಜಿಲ್ಲಾ ಕಾರ್ಯದರ್ಶಿ ಗಾಂಧಿನಗರ ನಾರಾಯಣಸ್ವಾಮಿ, ಮುಖಂಡರಾದ ಜಿ.ಅರ್ಜನ್, ಪಿ.ಆರ್.ಸೂರ್‌ಯನಾರಾಯಣ, ಬಿ.ವಿ.ಸಂಪಂಗಿ, ಹೆಚ್.ಎಂ.ಯಲ್ಲಪ್ಪ, ಗಂಗಮ್ಮ, ರಾಧಾಕೃಷ್ಣ ಅವರ ಪತ್ನಿ ಸುಮ ಇತರರು ಇದ್ದರು.