ಇದೇನು ಸಭ್ಯತೇ? ಇದೇನು ಸಂಸ್ಕೃತಿ?
ಕ.ಪ್ರ. ವಾರ್ತೆ ಟಿ ಕೋಲಾರ ಟಿ ಮೇ 13
ಬೆಂಗಳೂರು ವಿವಿಗೆ ಸೇರಿದ ಕೋಲಾರ ಸ್ನಾತಕೋತ್ತರ ಕೇಂದ್ರದಲ್ಲಿ ವಿದ್ಯಾರ್ಥಿ ಸಂಘಟನೆಗಳ ಮುಖಂಡರಿಬ್ಬರ ನಡುವೆ ಸೋಮವಾರ ನಡೆದ ಮುಷ್ಟಿ ಕಾಳಗಕ್ಕೆ ವ್ಯಾಪಕ ಖಂಡನೆ, ಅಸಮಾಧಾನ ವ್ಯಕ್ತವಾಗಿದೆ.
ಅಖಿಲ ಭಾರತ ವಿದ್ಯಾರ್ಥಿ ಪರಿಷತ್(ಎಬಿವಿಪಿ) ಮತ್ತು ಅಖಿಲ ಭಾರತ ವಿದ್ಯಾರ್ಥಿ ಫೆಡರೇಷನ್(ಎಸ್ಎಫ್ಐ)ನಡುವೆ ಸೈದ್ಧಾಂತಿಕ ವ್ಯತ್ಯಾಸಗಳು ಇದ್ದರೂ ಈ ಎರಡೂ ಸಂಘಟನೆಗಳು ಶೈಕ್ಷಣಿಕ ರಂಗದಲ್ಲಿ ಸುಧಾರಣೆಗೆ ಹೋರಾಟ ನಡೆಸುತ್ತಿರುವುದರಲ್ಲಿ ಅನುಮಾನವಿಲ್ಲ. ಆದರೆ, ಯುವಶಕ್ತಿಯ ಪ್ರಬುದ್ಧಮಾನಕ್ಕೆ ಜ್ಞಾನ ತುಂಬಬೇಕಾದ ಪಿಜಿ ಕೇಂದ್ರಗಳಲ್ಲಿ ಕ್ಷುಲ್ಲಕ ಕಾರಣಗಳಿಗೆ ಮುಷ್ಠಿ ಕಾಳಗ ಪ್ರದರ್ಶನ, ಅಸಭ್ಯ ವರ್ತನೆ ತೋರುವುದು ಸಂಘಟನೆಗಳ ಮೇಲೆ ದುಷ್ಪರಿಣಾಮ ಬೀರುತ್ತದೆ ಎಂಬುದನ್ನು ಅರಿತುಕೊಳ್ಳಬೇಕಾಗಿದೆ.
ಜಿಲ್ಲೆಯ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ವಿದ್ಯಾರ್ಥಿ ಮುಖಂಡರು ಎಂದು ಗುರುತಿಸಲ್ಪಟ್ಟಿರುವ ಎಸ್ಎಫ್ಐ ವಾಸುದೇವರೆಡ್ಡಿ ಹಾಗೂ ಎಬಿವಿಪಿಯ ಮುರಳಿ ವಿವೇಕ ಅವರು ತಾಳ್ಮೆಯ ಕೊರತೆ ಹಾಗೂ ಆವೇಶದಿಂದ ಪರಸ್ವರ ಗುದ್ದಾಟಕ್ಕೆ ಇಳಿದು ಅಹಿತಕರ ವಾತಾವರಣ ಸೃಷ್ಟಿಗೆ ಕಾರಣವಾಗಿರುವುದು ಪ್ರಜ್ಞಾವಂತರು ತಲೆತಗ್ಗಿಸುವಂತಾಗಿದೆ.
ಎಬಿವಿಪಿಯ ಮುಖಂಡರು ಪಿಜಿ ಕೇಂದ್ರಕ್ಕೆ ಅನುಮತಿ ಇಲ್ಲದೆ ಪ್ರವೇಶ ಮಾಡಿದ್ದು ತಪ್ಪೇ ಇರಬಹುದು. ಇದರ ವಿರುದ್ಧ ಕಾನೂನಾತ್ಮಕವಾಗಿ ಪ್ರಶ್ನೆ ಮಾಡಬಹುದಿದ್ದ ವಾಸುದೇವರೆಡ್ಡಿ ಇನ್ನಿತರರು ಎಬಿವಿಪಿಯ ಬಾವುಟವನ್ನು ಕಸಿದುಕೊಂಡಿದ್ದು ಸರಿಯೇ ಎಂಬ ಪ್ರಶ್ನೆಗೆ ಉತ್ತರ ಈಗ ಅಪ್ರಸ್ತುತ. ಜೊತೆಗೆ ಏನೇ ಸಮಸ್ಯೆ ಇದ್ದರೂ ಪರಿಹಾರಕ್ಕೂ ದಾರಿ ಇರುತ್ತದೆ. ವಿವೇಚನೆ ಕಳೆದುಕೊಂಡರೆ ಸಂಘರ್ಷಕ್ಕೆ ಹಾದಿ ಮಾಡಿಕೊಟ್ಟಂತಾಗುತ್ತದೆ. ವಾಸುದೇವರೆಡ್ಡಿ ಎಬಿವಿಪಿಯ ಮುಖಂಡರ ವಿರುದ್ಧ ಪಿಜಿ ಕೇಂದ್ರದ ಆಡಳಿತ ವರ್ಗಕ್ಕೆ ದೂರು ನೀಡಿ ಹೊರ ಹಾಕಿಸಬಹುದಿತ್ತು. ಇಲ್ಲವೇ ಕೇಂದ್ರಕ್ಕೆ ಭೇಟಿ ನೀಡಿದ್ದ ವಿಧಾನ ಪರಿಷತ್ ಸದಸ್ಯರ ಗಮನಕ್ಕೆ ತಂದು ಶಾಂತಿ-ಸೌಹಾರ್ದತೆಗೆ ಒತ್ತಾಯಿಸಬಹುದಾಗಿತ್ತು. ಇದನ್ನು ಬಿಟ್ಟು ಮುರಳಿಯ ಕೈಯಿಂದ ಎಬಿವಿಪಿಯ ಬಾವುಟ ಕಸಿದುಕೊಂಡಿದ್ದು, ಗಲ್ಲಾಪಟ್ಟಿ ಹಿಡಿದು ಹಲ್ಲೆಗೆ ಮುಂದಾಗಿದ್ದು ಘಟನೆ ಅತಿರೇಕಕ್ಕೆ ತಿರುಗಲು ಕಾರಣವಾಯಿತು ಎಂದರೆ ತಪ್ಪಾಗಲಾರದು. ವಾಸುದೇವರೆಡ್ಡಿ ಎಬಿವಿಪಿಯ ಬಾವುಟ ಕಸಿದುಕೊಂಡ ನಂತರ ಮುರಳಿ ಸಹ ತಾಳ್ಮೆ ಕಳೆದುಕೊಂಡು ವೀರಾವೇಷದಿಂದ ಅರ್ಭಟಿಸಿದ್ದು ಅತಿ ಎನಿಸಿತು. ವಾಸುದೇವರೆಡ್ಡಿಯ ಕುತ್ತಿಗೆಯನ್ನು ಹಿಡಿದಿಟ್ಟುಕೊಂಡು ಆಕ್ರೋಶ ವ್ಯಕ್ತಪಡಿಸಿದ್ದು ಎಬಿವಿಪಿಯ ಸಿದ್ದಾಂತ, ಉದ್ದೇಶಗಳಿಗೆ ಧಕ್ಕೆ ಉಂಟು ಮಾಡಿದಂತಿತ್ತು ಎಂಬ ಮಾತು ಕೇಳಿ ಬರುತ್ತಿದೆ.
ಪಿಜಿ ಕೇಂದ್ರದ ವಿದ್ಯಾರ್ಥಿನಿಯ ಮೇಲೆ ನಡೆದಿದೆ ಎನ್ನಲಾದ ಲೈಂಗಿಕ ದೌರ್ಜನ್ಯ ಪ್ರಕರಣ ಬೆಂಗಳೂರು ವಿವಿಯ ಉಪ ಕುಲಪತಿಗಳ ಬಳಿಗೆ ಹೋಗಿದೆ. ಈ ವಿಚಾರ ಪಿಜಿ ಕೇಂದ್ರ ನಿರ್ದೇಶಕರಿಗೆ ಗೊತ್ತಿದ್ದರೂ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳದಿರುವುದೇ ಸೋಮವಾರದ ಘಟನೆಗೆ ಕಾರಣವೆಂಬುದು ಅನೇಕರ ಆರೋಪ.
ಜಟಾಪಟಿಗೆ ಏನು ಕಾರಣ?
ಕನ್ನಡ ಪ್ರಾಧ್ಯಾಪಕ ಕಾ.ವೆಂ.ಶ್ರೀನಿವಾಸಮೂರ್ತಿ ಪಿಎಚ್ಡಿ ವಿದ್ಯಾರ್ಥಿನಿಗೆ ಮೇಲೆ ಲೈಂಗಿಕ ದೌರ್ಜನ್ಯವೆಸದಿದ್ದಾರೆಂಬ ಹಿನ್ನಲೆಯಲ್ಲಿ ಎಬಿವಿಪಿಯಿಂದ ಸೋಮವಾರ ನಗರದಲ್ಲಿ ಪ್ರತಿಭಟನೆ ಹಮ್ಮಿಕೊಳ್ಳಲಾಗಿತ್ತು. ವಿಧಾನ ಪರಿಷತ್ ಸದಸ್ಯ ವೈ.ಎ.ನಾರಾಯಣಸ್ವಾಮಿ ಪಿಜಿ ಕೇಂದ್ರಕ್ಕೆ ಭೇಟಿ ನೀಡಿರುವ ವಿಷಯ ಗೊತ್ತಾಗಿ ಎಬಿವಿಪಿಯ ಮುಖಂಡರು ಮಂಗಸಂದ್ರ ಗ್ರಾಮದಲ್ಲಿನ ಪಿಜಿ ಕೇಂದ್ರಕ್ಕೆ ಹೋಗಿದ್ದರು. ಪಿಜಿ ಕೇಂದ್ರಕ್ಕೆ ಎಬಿವಿಪಿಯ ಮುಖಂಡರು ಏಕಾಏಕಿ ಪ್ರವೇಶ ಮಾಡಿದ್ದಾರೆಂಬ ಕಾರಣಕ್ಕೆ ಇದೇ ಕೇಂದ್ರದಲ್ಲಿ ವಿದ್ಯಾರ್ಥಿ ಆಗಿರುವ ಎಸ್ಎಫ್ಐ ಜಿಲ್ಲಾಧ್ಯಕ್ಷ ವಾಸುದೇವರೆಡ್ಡಿ ಇನ್ನಿತರರು ವಿರೋಧ ವ್ಯಕ್ತಪಡಿಸಿ ಇಲ್ಲಿನ ಸಮಸ್ಯೆಯನ್ನು ಇಲ್ಲಿನವರೇ ಬಗೆಹರಿಸಿಕೊಳ್ಳುತ್ತಾರೆ. ನಿಮ್ಮ ಮಧ್ಯ ಪ್ರವೇಶ ಬೇಡವೆಂದು ವಿರೋಧಿಸಿದರು. ಇದರಿಂದ ಕುಪಿತರಾದ ಎಬಿವಿಪಿಯ ಮುರಳಿ ಮತ್ತು ವಾಸುದೇವರೆಡ್ಡಿ ನಡುವೆ ಮಾತಿನ ಚಕಮಕಿ ನಡೆಯಿತು, ವಿಧಾನ ಪರಿಷತ್ ಸದಸ್ಯ ನಾರಾಯಣಸ್ವಾಮಿ ಜೊತೆ ಸಮಸ್ಯೆಗಳನ್ನು ಹಂಚಿಕೊಳ್ಳಲು ಸೇರಿದ್ದ ವಿದ್ಯಾರ್ಥಿಗಳು ಗಾಬರಿಯಿಂದ ಓಡಿ ತರಗತಿಗಳನ್ನು ಸೇರಿದರು. ಅನೇಕರು ಇಬ್ಬರು ಮುಖಂಡರನ್ನು ಸಮಾಧಾನಪಡಿಸಲು ಹರ ಸಾಹಸ ಮಾಡಬೇಕಾಯಿತು.