ಉಪಾಹಾರ: 20ಕ್ಕೂ ಹೆಚ್ಚು ಮಂದಿ ಅಸ್ವಸ್ಥ
ಕೆಜಿಎಫ್: ವಿವಾಹಕ್ಕೆ ಬಂದಿದ್ದವರು ಉಪಾಹಾರ ಸೇವಿಸಿ 20ಕ್ಕೂ ಹೆಚ್ಚು ಮಂದಿ ಅಸ್ವಸ್ಥಗೊಂಡ ಘಟನೆ ರಾಬರ್ಟ್ಸನ್ ಪೇಟೆ ಠಾಣೆ ವ್ಯಾಪ್ತಿಯಲ್ಲಿ ಮಂಗಳವಾರ ನಡೆದಿದೆ. ಬೌರಿಲಾಲ್ಪೇಟೆ ನಿವಾಸಿ ರಿಯಾಜ್ಪಾಷಾ ಎಂಬುವವರ ಮೊಮ್ಮಗಳ ಮದುವೆಯನ್ನು ನಗರದ ಕಲ್ಯಾಣ ಮಂಟಪದಲ್ಲಿ ಸೋಮವಾರ ಆಯೋಜಿಸಲಾಗಿತ್ತು. ಮದುವೆಗೆ ಹಾಸನ ಜಿಲ್ಲೆ ಸೇರಿದಂತೆ ಇತರೆಡೆಯಿಂದ ಸಂಬಂಧಿಕರು ಆಗಮಿಸಿದ್ದರು. ಮಂಗಳವಾರ ಬೆಳಗ್ಗೆ 10.30ರ ಸಮಯದಲ್ಲಿ ಇಡ್ಲೀ ಮತ್ತು ಚಪಾತಿ ಸಾಂಬರ್ ಮತ್ತು ಬದಣೆಕಾಯಿ ಸಾರು ತಿಂದಿದ್ದರು. ಮಧ್ಯಾಹ್ನದ ಹೊತ್ತಿಗೆ ವಾಂತಿಯಾಗಿ ತಲೆಸುತ್ತಿ ಕೆಳಗೆ ಬಿದ್ದು ಅಸ್ವಸ್ಥಗೊಂಡ ಸುಮಾರು 20ಕ್ಕೂ ಹೆಚ್ಚು ಮಂದಿಯನ್ನು ಆಟೋಗಳಲ್ಲಿ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಿದ್ದು, ಇದೀಗ ಪ್ರಾಣಪಾಯದಿಂದ ಪಾರಾಗಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ.