ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕೋಲಾರ

ಎರಡು ಪ್ರತ್ಯೇಕ ರಸ್ತೆ ಅಪಘಾತ: ಮೂವರು ಸಾವು

Rashmi Kasaragodu
Updated On : 14 May 2014, 1:22 am

ಕೋಲಾರ: ಪ್ರತ್ಯೇಕ ಎರಡು ಅಪಘಾತದಲ್ಲಿ ಮೂವರು ಮೃತಪಟ್ಟ ಘಟನೆ ಮಂಗಳವಾರ ನಡೆದಿದೆ.  ನಗರ ಹೊರವಲಯದ ರಾಷ್ಟ್ರೀಯ ಹೆದ್ದಾರಿಯಲ್ಲಿನ ಪವನ್ ಕಾಲೇಜು ಮುಂಭಾಗ ಅಪರಿಚಿತ ಕಾರು ಡಿಕ್ಕಿ ಹೊಡೆದು ಸುಮಾರು 40 ವರ್ಷದ ಅಪರಿಚಿತರೊಬ್ಬ ಮೃತರಾಗಿದ್ದಾರೆ.  ಈ ವ್ಯಕ್ತಿ ರಸ್ತೆದಾಟುತಿದ್ದ ಸಂದರ್ಭದಲ್ಲಿ ಬೆಂಗಳೂರು ಕಡೆಯಿಂದ ಮುಳಬಾಗಲು ಕಡೆಗೆ ಹೋಗುತ್ತಿದ್ದ ಕಾರು ಡಿಕ್ಕಿ ಹೊಡೆದಿದೆ. ರಸ್ತೆ ದಾಟುತ್ತಿದ್ದ ವ್ಯಕ್ತಿ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಅಪಘಾತ ಮಾಡಿದ ಕಾರನ್ನು ಮುಳಬಾಗಲು ತಾಲೂಕಿನ ದೇವರಾಯ ಸಮುದ್ರ ಬಳಿ ಇರುವ ಲ್ಯಾಂಕೊ ಚೆಕ್ ಪೋಸ್ಟ್ನಲ್ಲಿ ಕಾರನ್ನು ಹಿಡಿಯಲಾಯಿತು. ಈ ಕಾರು ಬೆಂಗಳೂರಿನ ಶೇಷಾದ್ರಿಪುರ ನಿವಾಸಿಯೊಬ್ಬರಿಗೆ ಸೇರಿದ್ದಾಗಿದೆ. ಸಂಚಾರಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಯುವಕರಿಬ್ಬರು ಸಾವು: ತಾಲೂಕಿನ ರಾಷ್ಟ್ರೀಯ ಹೆದ್ದಾರಿ ಕೆಂದಟ್ಟಿ ಮತ್ತು ಅರಾಭಿಕೊತ್ತನೂರು ಗೇಟ್ ನಡುವೆ ದ್ವಿಚಕ್ರವಾಹನಕ್ಕೆ ಅಪರಿಚಿತ ವಾಹನ ಡಿಕ್ಕಿ ಹೊಡೆದು, ಇಬ್ಬರು ಯುವಕರು ಸ್ಥಳದಲ್ಲೇ ಮೃತಪಟ್ಟು ಮತ್ತೊಬ್ಬರು ತೀವ್ರವಾಗಿ ಗಾಯಗೊಂಡಿದ್ದಾರೆ.  ತಾಲೂಕಿನ ವೆಂಕಟಾಪುರ ಗ್ರಾಮದ ರಾಜಪ್ಪ (22) ಮತ್ತು ಚಿಕ್ಕ ಅಯ್ಯೂರು ಗ್ರಾಮದ ಸತೀಶ್ (23) ಮೃತರು. ಇವರೊಂದಿಗೆ ಇದ್ದ ವೆಂಕಟಾಪುರ ಗ್ರಾಮದ ಮಂಜುನಾಥ್ ತೀವ್ರವಾಗಿ ಗಾಯಗೊಂಡಿರುವ ಪರಿಣಾಮ ಈತನನ್ನು ಆರ್.ಎಲ್. ಜಾಲಪ್ಪ  ಆಸ್ಪತ್ರೆಗೆ ದಾಖಲಿಸಲಾಗಿದೆ. ಗ್ರಾಮಾಂತರ ಠಾಣೆಯ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.


ಒತ್ತುವರಿ ತೆರವಿಗೆ ಅಡ್ಡಿ: 6 ಜನ ಪೊಲೀಸ್ ವಶಕ್ಕೆ


ಕೋಲಾರ: ರಸ್ತೆ ಒತ್ತುವರಿಯನ್ನು ತೆರವುಗೊಳಿಸಲು ಹೋದ ಅಧಿಕಾರಿಗಳಿಗೆ ಅಡ್ಡಿಪಡಿಸಿದ ಆರೋಪದ ಮೇಲೆ 6 ಜನರನ್ನು ಪೊಲೀಸರು ವಶಕ್ಕೆ ತೆಗೆದುಕೊಂಡ ಘಟನೆ ಸೂಲೂರು ಗ್ರಾಮದಲ್ಲಿ ಮಂಗಳವಾರ ನಡೆದಿದೆ.  ಗ್ರಾಮದ ಕಾಲೋನಿಯಲ್ಲಿ ಉಯಪ್ಪ ಎಂಬಾತ ತನ್ನ ಮನೆಯ ಮುಂದಿನ ಸಾರ್ವಜನಿಕರಿಗೆ ಮೀಸಲಾದ ಜಾಗದಲ್ಲಿ ಸೌದೆಗಳನ್ನು, ಮರದ ದಿಮ್ಮಿಗಳನ್ನು ಹಾಕಿಕೊಂಡು ಸಂಚಾರಕ್ಕೆ ಅಡ್ಡಿ ಉಂಟು ಮಾಡಿದ್ದರ ವಿರುದ್ಧ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರನ್ನು ದಾಖಲಿಸಲಾಗಿತ್ತು.
ಜಾಗದ ತೆರವಿಗೆ ಈ ಹಿಂದೆ ಅನೇಕ ಬಾರಿ ನಡೆದ ಯತ್ನಗಳು ವಿಫಲಗೊಂಡಿದ್ದವು. ಕೊನೆಗೆ ಜಿಪಂ ಸಿಇಒ ಅವರೇ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ ಒತ್ತುವರಿ ತೆರವಿಗೆ ಸೂಚಿಸಿದ್ದರು. ಅನೇಕ ಕಾರಣಗಳಿಂದ ಇದು ಹಾಗೇಯೇ ಉಳಿದಿತ್ತು. ಕೊನೆಗೆ ಮಂಗಳವಾರ ಜಿ.ಪಂ ಯೋಜನಾಧಿಕಾರಿ ಚಲುವರಾಜ್, ತಾಪಂ ಕಾರ್ಯನಿರ್ವಹಣಾಧಿಕಾರಿ ಜಾನಕಿರಾಂ, ಸಹಾಯಕ ಕಾರ್ಯಪಾಲಕ ಅಭಿಯಂತರ ಮಂಜುನಾಥ್, ತಾ.ಪಂ. ಸಹಾಯಕ ನಿರ್ದೇಶಕ ರಾಜಣ್ಣ, ಸೂಲೂರು ಗ್ರಾಪಂ ಅಭಿವೃದ್ಧಿ ಅಧಿಕಾರಿಗಳಾದ ಹರೀಶ್, ಕುಮಾರ್ ಮತ್ತು ಮಂಜುನಾಥ್ ಪ್ರಸಾದ್, ಗ್ರಾಮಾಂತರ ವೃತ್ತ ನಿರೀಕ್ಷಕ ಎ.ಬಿ. ಸುಧಾಕರ್, ಪಿಎಸ್ಐ ಕೆ.ಎಸ್. ದೇವೇಂದ್ರಪ್ಪ ಮತ್ತು ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಒತ್ತುವರಿ ಜಾಗವನ್ನು ತೆರವುಗೊಳಿಸಲು ಮುಂದಾದರು. ಈ ಸಂದರ್ಭದಲ್ಲಿ ಉಯಪ್ಪನ ಪರವಾಗಿ ನಿಂತು ತೆರವು ಕಾರ್ಯಾಚರಣೆ ನಡೆಸದಂತೆ ಜೆಸಿಬಿಗೆ ಅಡ್ಡಲಾಗಿ ನಿಂತ ನಾರಾಯಣಸ್ವಾಮಿ, ತಿಮ್ಮಯ್ಯ, ಮುನಿಯಮ್ಮ, ಅಕ್ಕಮ್ಮ, ತೋಪಮ್ಮ, ಮುನಿರತ್ನ ಅವರನ್ನು ಪೊಲೀಸರು ವಶಕ್ಕೆ ಪಡೆದು ರಸ್ತೆಯ ಒತ್ತುವರಿಯನ್ನು ತೆರುವುಗೊಳಿಸಿದರು. ಈ ಸಂದರ್ಭದಲ್ಲಿ ಮುನಿರತ್ನ ಎಂಬಾಕೆ ತನ್ನ ಕೈ ಬಳೆಯನ್ನು ಒಡೆದು  ಮೈ ಕೈ ಮೇಲೆ ಗೀಚಿಕೊಂಡು ಗಾಯಗೊಂಡಾಗ ಈಕೆಯನ್ನು ಆಸ್ಪತ್ರೆಗೆ ದಾಖಲಿಸಬೇಕಾಯಿತು. ತೆರವು ಕಾರ್ಯಾಚರಣೆಗೆ ಅಡ್ಡಿಪಡಿಸಿ ಹಿನ್ನಲೆಯಲ್ಲಿ ಗ್ರಾಮಾಂತರ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement