ಕ್ರೀಡೆಗಳಿಂದ ಮಾನಸಿಕ ದೃಢತೆ, ಆತ್ಮಸ್ಥೈರ್ಯ ವೃದ್ಧಿ: ಶಿವಕುಮಾರಗೌಡ
ಶಿಡ್ಲಘಟ್ಟ: ಕ್ರೀಡೆಗಳಿಂದ ಮಾನಸಿಕ ದೃಢತೆ, ಆತ್ಮಸ್ಥೈರ್ಯ ಉಂಟಾಗುತ್ತದೆ ಎಂದು ಕರ್ಣಶ್ರೀ ಚಾರಿಟೆಬಲ್ ಟ್ರಸ್ಟಿನ ಅಧ್ಯಕ್ಷ ಡಿ.ಆರ್. ಶಿವಕುಮಾರಗೌಡ ಹೇಳಿದರು.
ತಾಲೂಕಿನ ಕನ್ನಪ್ಪನಹಳ್ಳಿ ಗ್ರಾಮದಲ್ಲಿ ಆಯೋಜನೆ ಮಾಡಲಾಗಿದ್ದ ಕ್ರಿಕೆಟ್ ಪಂದ್ಯಾವಳಿಯ ಸಮಾರಂಭದಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಿ ಮಾತನಾಡಿದ ಅವರು ಕ್ರೀಡೆಗಳು ಜನರನ್ನು ಒಟ್ಟಾಗಿ ಸೇರುವಂತೆ ಮಾಡುತ್ತವೆ, ವೈಮನಸ್ಯಗಳನ್ನು ಮರೆಯಲು ಸಹಕಾರಿಯಾಗುತ್ತವೆ, ಕ್ರೀಡೆಗಳಿಂದ ದೇಶಾಭಿಮಾನವೂ ಹೆಚ್ಚಾಗುತ್ತದೆ, ಸದೃಢವಾದ ಮೈಕಟ್ಟನ್ನು ಹೊಂದಲು ಸಹಕಾರಿಯಾಗುತ್ತದೆ ಇದರ ಪ್ರಯೋಜನವನ್ನು ಯುವಜನತೆ ಪಡೆದುಕೊಳ್ಳಬೇಕು ಎಂದರು.
ಪ್ರಥಮ ಬಹುಮಾನವನ್ನು ದೊಡ್ಡತೇಕಹಳ್ಳಿ ಗ್ರಾಮದ ಯುವಕರು ಪಡೆದುಕೊಂಡರೆ, ದ್ವಿತೀಯ ಬಹುಮಾನವನ್ನು ಕನ್ನಪ್ಪನಹಳ್ಳಿ ಗ್ರಾಮಸ್ಥರು ಪಡೆದುಕೊಂಡಿದ್ದಾರೆ.
ಸುರೇಂದ್ರಗೌಡ, ಬಾಲಮುರಳೀಕೃಷ್ಣ, ಮಲ್ಲಿಕಾರ್ಜುನ ರೆಡ್ಡಿ, ಚಲಪತಿ, ಮುನಿಕೃಷ್ಣಪ್ಪ, ರಜನಿಕಾಂತ್, ನವೀನ್, ಲೋಕೇಶ್, ಬೈರಾರೆಡ್ಡಿ, ಮುಂತಾದವರು ಹಾಜರಿದ್ದರು.
ಪರಸ್ಪರ ಹೊಡೆದಾಟ ಚಾಲಕ, ಪೇದೆಗೆ ಗಾಯ
ಕೆಜಿಎಫ್: ರಸ್ತೆ ನಿಯಮ ಪಾಲನೆಗೆ ಸಂಬಂಧಿಸಿದಂತೆ ಬಸ್ ಚಾಲಕ ಹಾಗೂ ಪೊಲೀಸ್ ಪೇದೆ ಮಧ್ಯೆ ಜಗಳ ನಡೆದು, ಪರಸ್ಪರ ಹೊಡೆದಾಡಿಕೊಂಡ ಘಟನೆ ರಾಬರ್ಟ್ಸನ್ಪೇಟೆ ಠಾಣೆ ವ್ಯಾಪ್ತಿಯಲ್ಲಿ ಮಂಗಳವಾರ ನಡೆದಿದೆ.
ಸೂರಜ್ಮುಲ್ ವೃತ್ತದಲ್ಲಿ ಸಿಗ್ನಲ್ ಬಿದ್ದರೂ ಸರ್ಕಾರಿ ಸಾರಿಗೆ ಬಸ್ ಚಾಲಕನು ಬಸ್ ತೆಗೆಯಲಿಲ್ಲ. ಈ ಬಗ್ಗೆ ಪೊಲೀಸ್ ಪೇದೆ ವಿಚಾರಿಸಿದ್ದಾರೆ. ಆಗ ಇಬ್ಬರ ನಡುವೆಯೂ ಗಲಾಟೆ ಸಂಭವಿಸಿ ಪರಸ್ಪರ ಕೈ ಕೈಮಿಲಾಯಿಸಿದ್ದಾರೆ. ಗಾಯಗೊಂಡಿದ್ದವರನ್ನು ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗಿದೆ. ಚಾಲಕ ಸೈಯದ್ ಮುಸ್ತಫಾ ಹಾಗೂ ಪೇದೆ ಶ್ಯಾಮಪ್ಪ ಹೊಡೆದಾಡಿಕೊಂಡವರು.
ವಿಷಯ ತಿಳಿಯುತ್ತಿದ್ದಂತೆ ಪ್ರಯಾಣಿಕರು ಮತ್ತು ಸಾರ್ವಜನಿಕರು ಧಾವಿಸಿದ್ದರಿಂದ ಸೂರಜ್ಮುಲ್ ವೃತ್ತದಲ್ಲಿ ಕೆಲಕಾಲ ಗೊಂದಲದ ವಾತಾವರಣ ಉಂಟಾಗಿತ್ತು. ಅಲ್ಲದೆ ಕೆಎಸ್ಆರ್ಟಿಸಿ ಬಸ್ ಚಾಲಕರು, ನಿರ್ವಾಹಕರು ಮತ್ತು ಸಿಬ್ಬಂದಿ ಕೆಲಸವನ್ನು ಸ್ಥಗಿತಗೊಳಿಸಿ ಚಾಲಕನ ಮೇಲೆ ದೌರ್ಜನ್ಯ ವೆಸಗಿದ ಪೊಲೀಸ್ ಪೇದೆ ವಿರುದ್ದ ಕಾನೂನು ರೀತ್ಯ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಕೂಡಲೇ ಡಿಪೋ ವ್ಯವಸ್ಥಾಪಕ ಮತ್ತು ಡಿವೈಎಸ್ಪಿ ಎ.ಕೆ.ವಿವೇಕಾನಂದ ಹಾಗೂ ರಾಬರ್ಟ್ಸನ್ಪೇಟೆ ಠಾಣಾ ಪಿಎಸ್ಐ ರಂಗಶಾಮಯ್ಯ ಆಸ್ಪತ್ರೆಗೆ ಭೇಟಿ ನೀಡಿ ಪರಿಶೀಲಿಸಿ, ಇಬ್ಬರ ಹೇಳಿಕೆಯನ್ನು ಪಡೆದು ಅಗತ್ಯ ಕ್ರಮವನ್ನು ಜರುಗಿಸುವುದಾಗಿ ತಿಳಿಸಿದ ನಂತರ ಪ್ರತಿಭಟನೆ ನಿರ್ಣಯವನ್ನು ಕೈಬಿಡಲಾಯಿತು.