ದೇವರ ಕಾರ್ಯದಲ್ಲಿ ದೇವೇಗೌಡರು ಭಾಗಿ
ಕೋಲಾರ: ಮಾಜಿ ಪ್ರಧಾನ ಮಂತ್ರಿ ಎಚ್.ಡಿ.ದೇವೇಗೌಡ ಅವರು ಮಂಗಳವಾರ ತಾಲೂಕಿನ ಛತ್ರಕೋಡಿಹಳ್ಳಿಗೆ ಭೇಟಿ ನೀಡಿ, ಊರ ದ್ಯಾವರ ಕಾರ್ಯದಲ್ಲಿ ಪಾಲ್ಗೊಂಡಿದ್ದರು.
ಇತ್ತೀಚೆಗೆ ತಾನೇ ತಾಲೂಕಿನ ನರಸಾಪುರ ಹೋಬಳಿಗೆ ಸೇರಿದ ಬೆಳ್ಳೂರು ಗ್ರಾಮಕ್ಕೆ ಭೇಟಿ ನೀಡಿ ಖ್ಯಾತ ಯೋಗ ಗುರು ಬಿಕೆಎಸ್ ಅಯ್ಯಂಗಾರ್ ಮನೆಯಲ್ಲಿ ಯೋಗದ ಬಗ್ಗೆ ಸಲಹೆ ಪಡೆದಿದ್ದರು.
ಒಂದೇ ವಾರದಲ್ಲಿ ಎರಡು ಬಾರಿ ಕೋಲಾರಕ್ಕೆ ಭೇಟಿ ನೀಡಿರುವುದು ರಾಜಕೀಯ ವಲಯದಲ್ಲಿ ಸಂಚಲನ ಉಂಟು ಮಾಡಿದೆ. ಕೋಮುಲ್ ಚುನಾವಣೆ, ಲೋಕಸಭಾ ಚುನಾವಣಾ ಫಲಿತಾಂಶ, ಆಗ್ನೇಯ ಪದವೀಧರರ ಕ್ಷೇತ್ರದ ಚುನಾವಣೆ ಸಮೀಪಿಸುತ್ತಿರುವ ಹೊತ್ತಿನಲ್ಲೇ ದೇವೇಗೌಡರು ಕೋಲಾರಕ್ಕೆ ಎರಡು ಬಾರಿ ಭೇಟಿ ನೀಡಿರುವುದು ಕುತೂಹಲಕ್ಕೆ ಎಡೆ ಮಾಡಿದೆ.
ಬೆಳ್ಳೂರು ಗ್ರಾಮಕ್ಕೆ ಭೇಟಿ ನೀಡಿದ್ದಾಗ ಕನ್ನಡ ಭಾಷೆಯ ಕುರಿತು ಸುಪ್ರೀಂ ಕೋರ್ಟ್ ನೀಡಿರುವ ತೀರ್ಪಿನ ಕುರಿತು ಮಾಧ್ಯಮದೊಂದಿಗೆ ಮಾತನಾಡಿ. ತಾವು ಮಧ್ಯಪ್ರವೇಶ ಮಾಡುವುದಿಲ್ಲ, ರಾಜ್ಯ ಸರ್ಕಾರವೇ ಸೂಕ್ತವಾದ ನಿರ್ಧಾರ ಕೈಗೊಳ್ಳುತ್ತದೆ ಎಂದಿದ್ದರು.
ಲೋಕಸಭಾ ಚುನಾವಣಾ ಫಲಿತಾಂಶದ ಬಳಿದ ಮುಂದಿನ ರಾಜಕೀಯ ನಿರ್ಧಾರ ತಿಳಿಸುವುದಾಗಿ ಹೇಳಿದ್ದರು. ಆದರೆ,ಮಂಗಳವಾರ ಯಾವುದೇ ವಿಚಾರಗಳ ಬಗ್ಗೆಯೂ ದೇವೇಗೌಡರು ಮಾತನಾಡಲಿಲ್ಲ. ಛತ್ರಕೋಡಿಹಳ್ಳಿಯ ಹಿರಿಯ ಮುಖಂಡ ಮುನೇಗೌಡರ ಮನೆಗೆ ಮಧ್ಯಾಹ್ನ 2.15ಕ್ಕೆ ಬಂದು ಊಟ ಮುಗಿಸಿ 3.15ಕ್ಕೆ ಬೆಂಗಳೂರಿಗೆ ಹಿಂತಿರುಗಿದರು. ಜೆಡಿಎಸ್ ಮುಖಂಡರಾದ ಶ್ರೀನಿವಾಸಪುರದ ಚೌಡರೆಡ್ಡ, ಚಿಂತಾಮಣಿ ತಾಲೂಕಿನ ಶಂಕರೇಗೌಡ, ಜೆಡಿಎಸಸ್ಜಿಲ್ಲಾ ಕಾರ್ಯಾಧ್ಯಕ್ಷ ಬಣಕನಹಳ್ಳಿ ನಟರಾಜು, ಛತ್ರಕೋಡಿಹಳ್ಳಿ ಸುಧಾಕರ್ ಮತ್ತಿತರರು ಇದ್ದರು.