ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕೋಲಾರ

ಗುಡಿಬಂಡೆ ತಾಲೂಕು ಜಿಲ್ಲೆಗೆ ಮೊದಲ ಸ್ಥಾನ

Rashmi Kasaragodu
Updated On : 15 May 2014, 1:05 am

ಗುಡಿಬಂಡೆ: ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ತಾಲೂಕಿನಾದ್ಯಂತ ಒಟ್ಟು 892 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು, ಈ ಪೈಕಿ 841 ವಿದ್ಯಾರ್ಥಿಗಳು ತೇರ್ಗಡೆಯಾಗಿ ಜಿಲ್ಲೆಯಲ್ಲಿ ಮೊದಲ ಸ್ಥಾನ ತಾಲೂಕಿಗೆ ಲಭ್ಯವಾಗಿದೆ. ತಾಲೂಕಿನಲ್ಲಿ ಒಟ್ಟು 12 ಸರ್ಕಾರಿ ಹಾಗೂ 1 ಖಾಸಗಿ ಪ್ರೌಢಶಾಲೆಗಳಿದ್ದು ಕಳೆದ ಸಾಲಿನಲ್ಲಿ ಶೇ.93.3 ರಷ್ಟು ಫಲಿತಾಂಶ ಲಭ್ಯವಾಗಿತ್ತು, ಕಳೆದ ಸಾಲಿಗಿಂತ ಈ ಬಾರಿ ಶೇ.94.28 ರಷ್ಟು ಫಲಿತಾಂಶ ಬಂದಿದೆ. ಇದರಲ್ಲಿ ತಾಲೂಕಿನ ಮಾಚಹಳ್ಳಿ, ಎಲ್ಲೋಡು, ಹಂಪಸಂದ್ರ ಪ್ರೌಢಶಾಲೆಗಳು ಶೇ.100 ರಷ್ಟು ಫಲಿತಾಂಶ ಪಡೆದಿದ್ದು, ಗುಡಿಬಂಡೆ ಪಟ್ಟಣದಲ್ಲಿರುವ ಸರ್ಕಾರಿ  ಬಾಲಕರ ಪ್ರೌಢಶಾಲೆ ಕೇವಲ ಶೇ.88.37 ಫಲಿತಾಂಶ ಪಡೆದು ತಾಲೂಕಿನಲ್ಲಿ ಕಡೆಯ ಸ್ಥಾನವನ್ನು ಪಡೆದಿದೆ. ಉಳಿದಂತೆ ಕಿತ್ತೂರು ರಾಣಿ ಚೆನ್ನಮ್ಮ ಶಾಲೆಯು ಶೇ.97.77, ವರ್ಲಕೊಂಡ ಸರ್ಕಾರಿ  ಪ್ರೌಢಶಾಲೆ ಶೇ.97.53, ಉಲ್ಲೋಡು ಸರ್ಕಾರಿ  ಪ್ರೌಢಶಾಲೆ ಶೇ.95.74, ಚೆಂಡೂರು ಸರ್ಕಾರಿ ಪ್ರೌಢಶಾಲೆ ಶೇ.93.75, ಸೋಮೇನಹಳ್ಳಿ ಸರ್ಕಾರಿ  ಪ್ರೌಢಶಾಲೆ ಶೇ.93.38, ಬೀಚಗಾನಹಳ್ಳಿ ಸರ್ಕಾರಿ ಪ್ರೌಢಶಾಲೆ ಶೇ.92.53, ಗುಡಿಬಂಡೆಯ ಸರ್ಕಾರಿ  ಬಾಲಕಿಯರ ಪ್ರೌಢಶಾಲೆ ಶೇ.90.90, ತಿರುಮಣಿ ಸರ್ಕಾರಿ ಪ್ರೌಢಶಾಲೆ ಶೇ.90.62 ಹಾಗೂ ಅರವಿಂದ ಖಾಸಗಿ ಪ್ರೌಢಶಾಲೆ ಶೇ.97.77 ರಷ್ಟು ಫಲಿತಾಂಶವನ್ನು ಪಡೆದುಕೊಂಡಿವೆ. ಪಟ್ಟಣದ ಬಾಲಕಿಯರ ಪ್ರೌಢಶಾಲೆಯ ಜಿ.ಎಂ. ದೀಕ್ಷ 598 (95.68) ಅಂಕ ಗಳಿಸಿ ತಾಲೂಕಿಗೆ ಮೊದಲ ಸ್ಥಾನ, ಇದೇ ಶಾಲೆಯ ಮೇಘನ 592 (94.72) ಗಳಿಸಿ ಎರಡನೇ ಸ್ಥಾನ, ತಾಲೂಕಿನ ಸೋಮೇನಹಳ್ಳಿ ಪ್ರೌಢಶಾಲೆಯ ವಿದ್ಯಾರ್ಥಿನಿ ಎಸ್.ಎಂ. ಶೃತಿ 587 (93.92) ಹಾಗೂ ಗುಡಿಬಂಡೆ ಪಟ್ಟಣದ ಸರ್ಕಾರಿ ಬಾಲಕಿಯರ ಪ್ರೌಢಶಾಲೆಯ ರಕ್ಷಾ 578 (92.48) ಅಂಕಗಳನ್ನು ಗಳಿಸಿ ನಾಲ್ಕನೇ ಸ್ಥಾನವನ್ನು ಪಡೆದುಕೊಂಡಿದ್ದಾರೆ.
ಬುದ್ಧ ಸತ್ಯ, ಅಂಹಿಸೆಯ ರೂವಾರಿ: ತಳಗವಾರ್ ಆನಂದ್
ಚಿಂತಾಮಣಿ: ಧರ್ಮಗಳಿಗೆಲ್ಲಾ ಮನಸ್ಸೇ ಆಧಾರ. ಶಾಂತಿಯೇ ಎಲ್ಲಾ ಧರ್ಮಗಳ ಸಾರ ಎಂದು ಸಾರಿದ ಗೌತಮ ಬುದ್ಧ ಸತ್ಯ ಮತ್ತು ಅಹಿಂಸಾ ತತ್ವದ ರೂವಾರಿ ಎಂದು ಪ್ರವಚನಕಾರ ತಳಗವಾರ ಆನಂದ್ ಅಭಿಪ್ರಾಯಪಟ್ಟರು. ತಾಲೂಕಿನ ಕೈವಾರ ಯೋಗಿನಾರೇಯಣ ಮಠದಲ್ಲಿ ನಡೆದ ಬುದ್ಧ ಹುಣ್ಣಿಮೆ ವಿಶೇಷ ಕಾರ್ಯಕ್ರಮದಲ್ಲಿ ಬುದ್ಧನ ಬದುಕು ಮತ್ತು ಸಂದೇಶಗಳು ಎಂಬ ವಿಷಯದ ಬಗ್ಗೆ ಎಂಬ ಉಪನ್ಯಾಸ ನೀಡಿದರು. ಹುಣ್ಣಿಮೆ ವಿಶೇಷ ಕೈಂಕರ್ಯದಲ್ಲಿ ಸದ್ಗುರು ತಾತಯ್ಯನವರ ಉತ್ಸವ ಮೂರ್ತಿಗೆ ವಿಶೇಷ ಅಭಿಷೇಕ ಮತ್ತು ಅಷ್ಟಾವಧಾನ ಸೇವೆಯನ್ನು ನೆರವೇರಿಸಿ ರಥೋತ್ಸವ ನಡೆಸಲಾಯಿತು. ಅಸಂಖ್ಯ ಭಕ್ತಾಧಿಗಳು ಭಾಗವಹಿಸಿದ್ದರು. ಹುಣ್ಣಿಮೆ ಪ್ರಯುಕ್ತ ನಾದಸುಧಾರಸ ವೇದಿಕೆಯಲ್ಲಿ ಅಖಂಡ ಸಂಕೀರ್ತನೆಯನ್ನು ಏರ್ಪಡಿಸಲಾಗಿತ್ತು.
'ಅಂಧಕಾರದಲ್ಲಿದ್ದವರಿಗೆ ಬುದ್ಧ, ಬಸವ, ಅಂಬೇಡ್ಕರ್ ದಾರಿ ದೀಪ'
ಕೋಲಾರ: ಅಂಧಕಾರದಲ್ಲಿದ್ದ ಲಕ್ಷಾಂತರ ಜನರಿಗೆ ಮುಕ್ತಿ ದಾರಿ ತೋರಿಸಿದವರು ಬುದ್ಧ, ಬಸವಣ್ಣ, ಅಂಬೇಡ್ಕರ್ ಅಂತಹವರ ತತ್ವ ಆದರ್ಶಗಳನ್ನು ನಾವು ಜೀವನದಲ್ಲಿ ಅನುಸರಿಸಿಕೊಂಡು ಹೋಗಬೇಕೆಂದು ಸಾಹಿತಿ, ಸಂಶೋಧಕ ಅರಿವು ಶಿವಪ್ಪ ಅಭಿಪ್ರಾಯಪಟ್ಟರು. ನಗರದ ಪತ್ರಕರ್ತರ ಭವನದಲ್ಲಿ ಭೀಮ ಬಳಗದ ವತಿಯಿಂದ ಹಮ್ಮಿಕೊಂಡಿದ್ದ ಬುದ್ಧ, ಬಸವಣ್ಣ, ಮತ್ತು ಅಂಬೇಡ್ಕರ್ ಜಯಂತ್ಯುತ್ಸವ ಹಾಗೂ  ಭೀಮ ವಾಯ್ಸ್ ಪತ್ರಿಕೆಯ 2 ನೇ ವಾರ್ಷಿಕೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು. ದಸಂಸ ರಾಜ್ಯ ಸಂಘಟನಾ ಕಾರ್ಯದರ್ಶಿ ಟಿ. ವಿಜಯಕುಮಾರ್ ಮಾತನಾಡುತ್ತಾ ಇಂದು ಕೆಲ ದಲಿತ ನಾಯಕರು ಬಿಕ್ಷೆ ಬೇಡಿ ಎಲ್ಲಾ ಬೋಗ ಭಾಗ್ಯಗಳನ್ನು ಪಡೆಯುತ್ತಿದ್ದಾರೆ. ಯಾರು ಎಂಜಲು ಕಾಸಿಗೆ ಆಸೆ ಪಡುತ್ತಾರೋ ಅಂತಹ ವ್ಯಕ್ತಿಗಳು ಶ್ರೀಮಂತರಾಗುತ್ತಿದ್ದಾರೆ, ನಮ್ಮಂತವರನ್ನು ತುಳಿಯುತ್ತಿದ್ದಾರೆಂದು ಆಕ್ರೋಶ ವ್ಯಕ್ತಪಡಿಸಿದರು. ಎಚ್. ಕೃಷ್ಣಮೂರ್ತಿ, ದಸಂಸ ರಾಜ್ಯ ಸಂಚಾಲಕ ಎಚ್. ಮಲ್ಲೇಶ್ ಸು.ದಾ.ವೆಂಕಟೇಶ್, ಆವಣೆಕಾಶಿ, ಪಲ್ಲವಿಮಣಿ, ಕೈವಾರ ಮಂಜುನಾಥ್, ಚಿಗುರು ಸಂಸ್ಥೆಯ ಅಧ್ಯಕ್ಷೆ ಎಸ್.ಪ್ರಭಾವತಿ, ಹುಣಸನಹಳ್ಳಿ ಎನ್.ವೆಂಕಟೇಶ್, ವಕೀಲ ಚಂದ್ರಶೇಖರ್, ಕಾರಬೆಲೆ ವೆಂಕಟೇಶ್ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement