ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕೋಲಾರ

ಟೋಲ್ ದರ 4 ಪಟ್ಟು ಏರಿಕೆಗೆ ತೀವ್ರ ಆಕ್ರೋಶ

Rashmi Kasaragodu
Updated On : 15 May 2014, 1:04 am

ಚಿಕ್ಕಬಳ್ಳಾಪುರ: ರಾಷ್ಟ್ರೀಯ ಹೆದ್ದಾರಿ 7ರಲ್ಲಿ ಹಾದು ಹೋಗುವ ವಾಹನಗಳ ಸುಂಕದ ದರವನ್ನು ನಾಲ್ಕು ಪಟ್ಟು ಹೆಚ್ಚಿಸಿರುವುದನ್ನು ಖಂಡಿಸಿ ಬೃಹತ್ ಹೋರಾಟ ನಡೆಸಲು ಟೋಲ್ ವಿರೋಧಿ ಒಕ್ಕೂಟದ ಸಿದ್ಧತೆಗಳನ್ನು ಕೈಗೊಳ್ಳುತ್ತಿದೆ. ಈ ನಿಟ್ಟಿನಲ್ಲಿ ನಗರದ ಹೊರ ವಲಯದಲ್ಲಿರುವ ರೇಷ್ಮೆ ಬಿತ್ತನೆ ಕೋಠಿಯ ಸಭಾಂಗಣದಲ್ಲಿ ಪ್ರಗತಿಪರ ಸಂಘಟನೆಗಳ ಸಭೆ ನಡೆಸಿ ಚರ್ಚಿಸಲಾಯಿತು.
ದೇವನಹಳ್ಳಿ ಸಮೀಪವಿರುವ (ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಬಳಿ) ಸುಂಕ ವಸೂಲಾತಿ ಕೇಂದ್ರದಲ್ಲಿ ನಾಲ್ಕು ಪಟ್ಟು ಹೆಚ್ಚು ಸುಂಕ ವಸೂಲಿ ಮಾಡಲು ಮುಂದಾಗಿರುವ ಹಿನ್ನೆಲೆಯಲ್ಲಿ ರೈತರು, ಕಾರ್ಮಿಕರು ಸೇರಿದಂತೆ ಜನರು ಸಾಮಾನ್ಯರು ತೊಂದರೆಯನ್ನು ಅನುಭವಿಸುತ್ತಿದ್ದಾರೆ. ಇದರಿಂದ ಕೂಡಲೇ ಸುಂಕ ಸಂಗ್ರಹ ನೀತಿಯನ್ನು ಕೈಬಿಟ್ಟು ಜನ ಸಾಮಾನ್ಯರ ಬವಣೆಯನ್ನು ತಪ್ಪಿಸಬೇಕೆಂದು ಆಗ್ರಹಿಸಿ ಇದೇ ತಿಂಗಳಲ್ಲಿ (ಮೇ) ಸ್ವಾತಂತ್ರ್ಯ ಹೋರಾಟಗಾರ ಎಚ್.ಎಸ್. ದೊರೆಸ್ವಾಮಿ ನೇತೃತ್ವದಲ್ಲಿ ಬೃಹತ್ ಪ್ರತಿಭಟನೆಯನ್ನು ನಡೆಸಲಾಗುತ್ತಿದೆ ಎಂದು ಒಕ್ಕೂಟದ ರಾಜ್ಯ ಸಂಚಾಲಕ ಅಂಗರೇಖನಹಳ್ಳಿ ರವಿಕುಮಾರ್ ತಿಳಿಸಿದರು.
ಮಾಜಿ ಶಾಸಕ ಕೆ.ಪಿ. ಬಚ್ಚೇಗೌಡ ಮಾತನಾಡಿ, ಜನಸಾಮಾನ್ಯರಿಗೆ ಅನುಕೂಲವಾಗುವಂತೆ ಸುಂಕ ರಹಿತವಾಗಿ ಓಡಾಡಲು ಅನುಕೂಲ ಮಾಡಿಕೊಡಬೇಕು.ಆದರೆ, ಬಂಡವಾಳಶಾಹಿಗಳ ಹಿತಕ್ಕೆ ಮಣಿದು ಇಂತಹ ಜನವಿರೋಧಿ ನೀತಿಯನ್ನು ಕೈಗೊಂಡಿರುವುದು ಸರ್ಕಾರಕ್ಕೆ ಶೋಭೆ ತರುವುದಿಲ್ಲ ಎಂದ ಅವರು,ಹೆದ್ದಾರಿ ಪ್ರಾಧಿಕಾರದ ಅವೈಜ್ಞಾನಿಕ ರಸ್ತೆ ನಿರ್ಮಾಣದಿಂದಾಗಿ ರಸ್ತೆ ಬದಿಯ ಜಮೀನುಗಳ ರೈತರಿಗೆ ಓಡಾಡಲು ಅನನುಕೂಲವಾಗಿದೆ. ಇಂತಹ ಸಮಸ್ಯೆಗಳನ್ನು ಪ್ರಾಧಿಕಾರವು ಗಂಭೀರವಾಗಿ ಪರಿಗಣಿಸಿ, ಅವಶ್ಯಕತೆ ಇರುವಲ್ಲಿ ಮೇಲು ಸೇತುವೆ ಮತ್ತು ಕೆಳ ಸೇತುವೆಗಳನ್ನು ನಿರ್ಮಿಸಿ ಕೊಟ್ಟು ರೈತರಿಗೆ ಅನುಕೂಲ ಮಾಡಿಕೊಡಬೇಕೆಂದರು.
ಈ ಸಂದರ್ಭದಲ್ಲಿ ಜಿಲ್ಲಾ ಕೃಷಿಕ ಸಮಾಜದ ಅಧ್ಯಕ್ಷ ನಾರಾಯಣಸ್ವಾಮಿ, ತಾಲೂಕು ಬಲಿಜ ಸಂಘದ ಅಧ್ಯಕ್ಷ ಭದ್ರಚಲಂ, ನಗರಸಭೆ ಮಾಜಿ ಅಧ್ಯಕ್ಷ ಎಂ.ಪ್ರಕಾಶ್, ರೇಷ್ಮೆ ಕೃಷಿ ಹಿತರಕ್ಷಣಾ ವೇದಿಕೆಯ ಸಂಚಾಲಕ ಸೊಣ್ಣೇಗೌಡ, ಶಾಶ್ವತ ನೀರಾವರಿ ಹೋರಾಟ ಸಮಿತಿಯ ಅಧ್ಯಕ್ಷ ಆರ್. ಆಂಜನೇಯರೆಡ್ಡಿ, ಟಿಎಪಿಸಿಎಂಎಸ್ ಅಧ್ಯಕ್ಷ ವಾಸುದೇವ್, ತಾ.ಪಂ. ಮಾಜಿ ಉಪಾಧ್ಯಕ್ಷ ಕೆ.ಆರ್. ರೆಡ್ಡಿ, ಮುಖಂಡರಾದ ಸು.ಧಾ. ವೆಂಕಟೇಶ್, ಹರೀಶ್, ಭೈರೇಗೌಡ, ಚಲಪತಿ, ನಾರಾಯಣಸ್ವಾಮಿ, ವೆಂಕಟೇಶ್, ಆನಂದಮೂರ್ತಿ, ಕೃಷ್ಣಪ್ಪ, ರಾಮಲಿಂಗರಾಜು, ಆನಂದ್  ಮುಂತಾದವರು ಭಾಗವಹಿಸಿದ್ದರು.
ಸಭೆಯ ನಂತರ ಅವೈಜ್ಞಾನಿಕ ಸುಂಕ ಸಂಗ್ರಹ ನೀತಿಯನ್ನು ಕೈಬಿಡಬೇಕು. ಸೇವಾ ರಸ್ತೆಗಳನ್ನು ವೈಜ್ಞಾನಿಕವಾಗಿ ನಿರ್ಮಿಸಿ, ಸುಂಕರಹಿತವಾಗಿ ಆಯ್ಕೆಯನ್ನು ಮುಕ್ತವಾಗಿರಿಸಬೇಕು. ಗಣ್ಯ ವ್ಯಕ್ತಿಗಳಿಗೆ ಸುಂಕ ವಿನಾಯ್ತಿ ನೀಡಿರುವ ಮಾದರಿಯಲ್ಲಿ, ಭೂಮಿ ಕಳೆದುಕೊಂಡ ರೈತರಿಗೆ ಗುರುತಿನಪತ್ರ ವಿತರಿಸಿ, ಹಣ್ಣು, ತರಕಾರಿ, ಹಾಲು ಇತರೆ ರೈತ ಉತ್ಪನ್ನಗಳನ್ನು ಸಾಗಿಸುವ ವಾಹನಗಳಿಗೆ ಸುಂಕ ವಿನಾಯ್ತಿ ನೀಡಬೇಕು ಎನ್ನುವುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಯ ಮನವಿ ಪತ್ರವನ್ನು ಜಿಲ್ಲಾಡಳಿತದ ಮೂಲಕ ಸರ್ಕಾರಕ್ಕೆ ಸಲ್ಲಿಸಲಾಯಿತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement