ಯೋಧ ಅಂಬರೀಶ್ ಅಂತ್ಯಕ್ರಿಯೆ
ಕ.ಪ್ರ.ವಾರ್ತೆ ಕೋಲಾರ ಮೇ 14
ಮಣಿಪುರದ ಶಿಲ್ಲಿಫಾಂಗ್‌ನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಕೋಲಾರದ ಯೋಧ ಅಂಬರೀಶ್ ಶಾರ್ಟ್ ಸರ್ಕೀಟ್‌ನಿಂದ ಮೃತಪಟ್ಟಿದ್ದು ಇವರ ಅಂತ್ಯಕ್ರಿಯೆ ಮಂಗಳವಾರ ರಾತ್ರಿ ತಾಲೂಕಿನ ವೇಮಗಲ್ ಹೋಬಳಿಯ ಬೆದ್ರಿ ಗ್ರಾಮದಲ್ಲಿ ಸರ್ಕಾರಿ ಗೌರವಗಳೊಂದಿಗೆ ನೆರವೇರಿತು.
ಸೇನೆಯಲ್ಲಿದ್ದ ಅಂಬರೀಶ್ ಮಣಿಪುರದ ಶಿಲ್ಲಿಫಾಂಗ್ ಎಂಬಲ್ಲಿ ವಾಹನ ತೊಳೆಯುತ್ತಿದ್ದಾಗ ಅವಘಡ ನಡೆದು ತೀವ್ರವಾಗಿ ಗಾಯಗೊಂಡು ಆಸ್ಪತ್ರೆಗೆ ದಾಖಲು ಮಾಡಿತ್ತಾದರೂ ಚಿಕಿತ್ಸೆ ಫಲಕಾರಿ ಆಗದೆ ಮೃತಪಟ್ಟಿದ್ದರು.
ಸೈನಿಕರೊಬ್ಬರ ಸಾವಿನ ಕಾರಣ ಹಾಗೂ ಶವ ಆಗಮನದ ಬಗ್ಗೆ ಯಾವುದೇ ರೀತಿಯ ಖಚಿತ ಮಾಹಿತಿಯಿಲ್ಲದೆ, ಆತನ ಪೋಷಕರು ಗೊಂದಲದಲ್ಲಿ ಮುಳುಗಬೇಕಾಯಿತು.
ಕೊನೆಗೆ ಮಧ್ಯರಾತ್ರಿಯಲ್ಲಿ ಶವವನ್ನು ಸೇನಾ ಇಲಾಖೆಯವರು ಬೆದ್ಲಿ ಗ್ರಾಮಕ್ಕೆ ತಂದು ಪೋಷಕರ ವಶಕ್ಕೆ ನೀಡಿದರು. ಶವ ಸಂಸ್ಕಾರ ನಡೆದಾಗ ವೇಮಗಲ್ ಪೋಲೀಸ್ ಠಾಣೆ ಸಬ್‌ಇನ್ಸ್‌ಪೆಕ್ಟರ್ ಯಶ್ವಂತ್ ಹಾಗೂ ಸಿಬ್ಬಂದಿ ಹಾಜರಿದ್ದರು.
ಮೃತ ತಂದೆ ನಾರಾಯಣಪ್ಪ ಮಗನ ಸಾವಿನ ಸುದ್ದಿ ತಿಳಿದು ಶೋಕ ಸಾಗರದಲ್ಲಿ ಮುಳುಗಿದರು, ಗ್ರಾಮಸ್ಥರು ಅಂತ್ಯಕ್ರಿಯೆಯಲ್ಲಿ ಭಾಗವಹಿಸಿ ಅಂತಿಮ ನಮನ ಸಲ್ಲಿಸಿದರು.