ಲಕ್ಷ್ಮೀವರದರಾಜ ಬ್ರಹ್ಮ ರಥೋತ್ಸವ
ಟೇಕಲ್: ಐತಿಹಾಸಿಕ ದೇವಾಲಯ ಶ್ರೀ ಲಕ್ಷ್ಮೀವರದರಾಜಸ್ವಾಮಿ ಬ್ರಹ್ಮರಥೋತ್ಸವವು ಸಾವಿರಾರು ಭಕ್ತಾಧಿಗಳ ಸಮ್ಮುಖದಲ್ಲಿ ಬಹಳ ವೈಭವದಿಂದ ನೆರವೇರಿತು.
ರಥೋತ್ಸವಕ್ಕೆ ವಿಶೇಷವಾಗಿ ಹೂವಿನ ಅಲಂಕಾರ ಮಾಡಲಾಗಿತ್ತು. ಭಕ್ತರಿಂದ ರಥದ ಮೂಲದೇವರಿಗೆ ಧವನ, ಬಾಳೆಹಣ್ಣು, ಹೂವು ಅರ್ಪಿಸುವ ಮೂಲಕ ತಮ್ಮ ಹರಕೆಯನ್ನು ಸಲ್ಲಿಸಿದರು.
ಉತ್ಸವ ಮೂರ್ತಿಗೆ ಪ್ರಧಾನ ಅರ್ಚಕ ರಮೇಶಾಚಾರ್ ಅವರ ಮನೆಯ ಅಂಗಳದಲ್ಲಿ ವಿಶೇಷ ಪೂಜೆ ಸಲ್ಲಿಸಲಾಯಿತು. ಸರ್ಕಾರದ ವತಿಯಿಂದ ಟೇಕಲ್ ನಾಡ ಕಚೇರಿಯ ಉಪತಹಸೀಲ್ದಾರ್ ಶ್ರೀಧರ್ ಅವರು ಚಾಲನೆ ನೀಡಿದರು. ಈ ವೇಳೆ ಟಿ.ಜಿ.ಸೀನಪ್ಪ, ಮುನಿರತ್ನಮ್ಮ ಕೃಷ್ಣಪ್ಪಸ, ಕೆ.ರಾಮಚಂದ್ರಪ್ಪ, ರಾಮಶೆಟ್ಟಿ, ಟಿ.ವಿ. ಪ್ರಕಾಶ್ ಶೆಟ್ಟಿ, ಟೇಕಲ್ ಆಂಜಿನಪ್ಪ, ಕೃಷ್ಣಪ್ಪ, ತಾಪಂ ಸದಸ್ಯೆ ನಿರ್ಮಲಾ ಆಂಜಿನಪ್ಪ, ಜಿಪಂ ಮಾಜಿ ಸದಸ್ಯ ಆರ್.ರಾಜಣ್ಣ, ಕೆಪಿಸಿಸಿ ಕಾರ್ಯದರ್ಶಿ ರಘುನಾಥ್, ಅಶೋಕಕುಮಾರ್ ಯಲ್ಲಪ್ಪ ಸೇರಿದಂತೆ ಅನೇಕರು ಹಾಜರಿದ್ದರು.
ವಿದ್ಯಾರ್ಥಿಗಳ ಪುರಸ್ಕಾರಕ್ಕೆ ಆಹ್ವಾನ
ಟೇಕಲ್: ಮಾಲೂರು ತಾಲೂಕಿನಾದ್ಯಂತ ನೆಲೆಸಿರುವ ನಗರ್ತ ಜನಾಂಗದ ಪ್ರತಿಭಾವಂತ ವಿದ್ಯಾರ್ಥಿಗಳ ಪುರಸ್ಕಾರಕ್ಕೆ ಎಸ್ಎಸ್ಎಲ್ಸಿಯಲ್ಲಿ ಶೇ.70 ಹಾಗೂ ಪಿಯುಸಿಯಲ್ಲಿ ಶೇ.80ಕ್ಕೂ ಹೆಚ್ಚು ಅಂಕ ಗಳಿಸಿರುವ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ. ಕಾರ್ಯಕ್ರಮವನ್ನು ಮಾಲೂರು ತಾಲ್ಲೂಕು ನಗರ್ತ ಜನಾಂಗದ ಕ್ಷೇಮಾಭಿವೃದ್ಧಿ ಸಂಘದವತಿಯಿಂದ ಆಯೋಜಿಸಲಾಗಿದ್ದು, ವಿದ್ಯಾರ್ಥಿಗಳು ಸೂಕ್ತ ದಾಖಲೆಗಳೊಂದಿಗೆ ಸಂಘದ ಪ್ರಧಾನ ಕಾರ್ಯದರ್ಶಿ ಅಶೋಕ್ ಬಾಬು ಅವರನ್ನು ಹಾಗೂ ದೂರವಾಣಿ ಸಂಖ್ಯೆ 9448402622, 9036436562 ಗೆ ಸಂಪರ್ಕಿಸಲು ಕೋರಲಾಗಿದೆ.