ಶುದ್ಧ ಕುಡಿಯುವ ನೀರಿಗೆ ಪರದಾಟ
ಶಿಡ್ಲಘಟ್ಟ: ಬರಗಾಲ ಪೀಡಿತ ಪ್ರದೇಶವಾಗಿರುವ ಚಿಕ್ಕಬಳ್ಳಾಪುರ ಜಿಲ್ಲೆಯಾದ್ಯಂತ ಜನತೆ ಕುಡಿಯುವ ನೀರಿಗಾಗಿ ಪರದಾಡುತ್ತಿದ್ದಾರೆ. ಕೊಳವೆ ಬಾವಿಗಳಲ್ಲಿ ದೊರೆಯುತ್ತಿರುವ ನೀರು ಪ್ಲೋರೈಡಯುಕ್ತವಾಗಿದ್ದು, ಜನತೆಗೆ ಕುಡಿಯಲು ಯೋಗ್ಯವಾಗಿಲ್ಲ. ಹೀಗಾಗಿ ಜನತೆ ರೋಗಗಳಿಗೆ ತುತ್ತಾಗುತ್ತಿದ್ದಾರೆ.
ಬರಗಾಲ ಪೀಡಿತ ಪ್ರದೇಶಗಳ ಪಟ್ಟಿಗೆ ಸೇರಿರುವ ಶಿಡ್ಲಘಟ್ಟ ತಾಲೂಕಿನಲ್ಲಿಯೂ ಜನತೆಗೆ ನೀರಿಗಾಗಿ ಪರದಾಡುವಂತಾಗಿದೆ. ಜಿಲ್ಲೆಯ ಜನತೆಗೆ ಶುದ್ಧ ಕುಡಿಯುವ ನೀರನ್ನು ಪೂರೈಕೆ ಮಾಡಲು ತಾಲೂಕಿನಾದ್ಯಂತ ಸುಮಾರು 25 ಪಂಚಾಯ್ತಿಗಳಲ್ಲಿ ಜಿಪಂ ಎಂಜಿನಿಯರಿಂಗ್ ವಿಭಾಗ ಹಾಗೂ ಶ್ರೀ ಸಾಯಿ ವಾಟರ್ ಟ್ರೀಟಮೆಂಟ್ ಪ್ರೈವೆಟ್ ಲಿಮಿಟೆಡ್ ಸಹಬಾಗಿತ್ವದಲ್ಲಿ ಪ್ರತಿ ಘಟಕಕ್ಕೆ 8 ಲಕ್ಷ ವೆಚ್ಚದಲ್ಲಿ ನೀರು ಶುದ್ಧೀಕರಣ ಘಟಕ ನಿರ್ಮಾಣ ಮಾಡಲಾಗಿದೆ. ತಾಲೂಕಿನ ಮೇಲೂರು ಗ್ರಾಪಂನಲ್ಲಿ ಸಕ್ರಿಯವಾಗಿ ಘಟಕ ಕಾರ್ಯನಿರ್ವಹಿಸುತ್ತಿದೆಯಾದರೂ ಈ ಘಟಕದಲ್ಲಿ ಪ್ರತಿನಿತ್ಯ 1200ರಿಂದ 1500 ಲೀಟರ್ ನೀರನ್ನು ಸ್ಥಳೀಯರು ಕುಡಿಯಲು ಉಪಯೋಗಿಸುತ್ತಿದ್ದಾರೆ.
ಪ್ರತಿ ಲೀಟರು ನೀರಿಗೆ 0.25 ಪೈಸೆಯಂತೆ ಜನತೆ ನೀರನ್ನು ಖರೀದಿ ಮಾಡುತ್ತಿದ್ದಾರೆ. ಆದರೂ ಒಂದು ಲೀಟರು ಶುದ್ಧೀಕರಿಸಲ್ಪಟ್ಟ ನೀರು ಪಡೆಯಬೇಕಾದರೆ ಮೂರು ಲೀಟರ್ಗಳಷ್ಟು ನೀರು ವ್ಯರ್ಥವಾಗಿ ನಿರುಪಯುಕ್ತವಾಗಿ ಹೊರಹೋಗುತ್ತಿದೆ. ತೀವ್ರ ನೀರಿನ ಸಮಸ್ಯೆ ಎದುರಿಸುತ್ತಿರುವ ಪಂಚಾಯ್ತಿಗಳಲ್ಲಿ ಸಿಗುತ್ತಿರುವ ನೀರು ಉಪಯೋಗವಾಗುವುದಕ್ಕಿಂತ ಹೆಚ್ಚಾಗಿ ಪೋಲಾಗುತ್ತಿರುವುದೇ ಹೆಚ್ಚಾಗಿ ಕಂಡುಬರುತ್ತಿದೆ. ತಾಲೂಕಿನಲ್ಲಿ ನಿರ್ಮಾಣ ಮಾಡಿರುವ ಬಹಳಷ್ಟು ಘಟಕಗಳು ಸ್ಥಗಿತವಾಗಿವೆ.