ಹುಲ್ಲಿನ ಬಣವೆಗೆ ಬೆಂಕಿ: ಹಾನಿ
ಮಾಲೂರು: ಮನೆ ಪಕ್ಕ ಇಡಲಾಗಿದ್ದ ಐವತ್ತು ಸಾವಿರ ರು. ಮೌಲ್ಯದ ಹುಲ್ಲಿನ ಬಣವೆಗೆ ಕಿಡಿಗೇಡಿಗಳು ಬೆಂಕಿ ಹಚ್ಚಿದ ಪರಿಣಾಮ ಹುಲ್ಲಿನ ಬಣವೆ ಸಂಪೂರ್ಣ ಸುಟ್ಟು ಹೋಗಿರುವ ಘಟನೆ ತಾಲೂಕಿನ ನಿದರಮಂಗಲ ಗ್ರಾಮದಲ್ಲಿ ಮಂಗಳವಾರ ತಡರಾತ್ರಿ ಘಟಿಸಿದೆ. ಮುನಿರಾಜು ಎಂಬುವವರ ಹುಲ್ಲಿನ ಬಣವೆ ಬೆಂಕಿಗೆ ಆಹುತಿಯಾಗಿದೆ. ಬೆಂಕಿ ಹಚ್ಚುವ ಮುನ್ನ ಮನೆ ಕಾಯುತ್ತಿದ್ದ ಎರಡು ನಾಯಿಗಳಿಗೆ ವಿಷ ಹಾಕಿ ಸಾಯಿಸಿ ನಂತರ ಬೆಂಕಿ ಹಚ್ಚುವ ಕೃತ್ಯ ವೆಸಗಿದ್ದಾರೆ. ಪ್ರಕರಣವನ್ನು ದಾಖಲಿಸಿಕೊಂಡಿರುವ ಸ್ಥಳೀಯ ಪೊಲೀಸರು ತನಿಖೆ ಮುಂದುವರೆಸಿದ್ದಾರೆ.
ವೃದ್ಧಾಶ್ರಮಕ್ಕೆ ಊಟದ ತಟ್ಟೆ
ಚಿಂತಾಮಣಿ: 25ನೇ ಮದುವೆ ವಾರ್ಷಿಕೋತ್ಸವ ಪ್ರಯುಕ್ತ ನಗರದ ಟ್ಯಾಂಕ್ಬಂಡ್ ರಸ್ತೆಯಲ್ಲಿರುವ ವಾಸವಿ ವೃದ್ಧಾಶ್ರಮದಲ್ಲಿ ವೃದ್ಧರಿಗೆ ಮತ್ತು ಬಡಮಕ್ಕಳಿಗೆ ಮಧ್ಯಾಹ್ನದ ಊಟದ ವ್ಯವಸ್ಥೆ ಮತ್ತು ಊಟದ ತಟ್ಟೆ ವಿತರಿಸಿ ಸಿಹಿ ಊಟದ ವ್ಯವಸ್ಥೆ ಏರ್ಪಡಿಸಲಾಗಿತ್ತು. ನಗರದ ವೆಂಕಟಗಿರಿಕೋಟೆ ನಿವಾಸಿಗಳಾದ ಸರೋಜಾ ಮಂಜುನಾಥ್ ಅವರ 25 ನೇ ಮದುವೆ ವಾರ್ಷಿಕೋತ್ಸವ ದಿನವನ್ನು ವೃದ್ಧಾಶ್ರಮದಲ್ಲಿ ಸರಳವಾಗಿ ಮಕ್ಕಳು ಮತ್ತು ವೃದ್ಧರೊಂದಿಗೆ ಆಚರಿಸಲಾಯಿತು.ನಂತರ ಸರೋಜಾ ಮಾತನಾಡಿದರು. ಈ ವೇಳೆ, ಕೆಆರ್ ನರಸಿಂಹಪ್ಪ, ಜೆ.ಕೆ.ನಿರ್ಮಲ, ಶಿಲ್ಪ, ಶಿಕ್ಷಕಿ ಎಂ.ಭಾಗ್ಯಮ್ಮ, ಮೇಲ್ವಿಚಾರಕಿ ರೋಜ್ಮೇರಿ, ತನುಜ, ಲಕ್ಷ್ಮಿ ಹಾಗೂ ಮಂಜುನಾಥ್ ಕುಟುಂಬದ ಸದಸ್ಯರಾದ ಗೌತಮ್, ಶ್ರೀಧರ್, ಸುಶ್ಮಿತ, ಅಶ್ವಿನಿ, ಗಿರೀಶ್ ಸೇರಿದಂತೆ ಇನ್ನೂ ಹಲವರು ಉಪಸ್ಥಿತರಿದ್ದರು.
ಶೆಟ್ಟಹಳ್ಳಿ ಗ್ರಾಪಂ ಅಧ್ಯಕ್ಷೆ ಆಂಜಮ್ಮ
ಚಿಂತಾಮಣಿ: ಭೂಮಿಶೆಟ್ಟಹಳ್ಳಿ ಗ್ರಾಪಂ ನೂತನ ಅಧ್ಯಕ್ಷರಾಗಿ ಆಂಜಮ್ಮ ಆಯ್ಕೆಯಾಗಿದ್ದಾರೆ ಎಂದು ಚುನಾವಣಾಧಿಕಾರಿ ಇ.ಓ ವಸಂತ್ಕುಮಾರ್ ಘೋಷಣೆ ಮಾಡಿದ್ದಾರೆ. ತಾಲೂಕಿನ ಅಂಬಾಜಿದುರ್ಗ ಹೋಬಳಿ ಭೂಮಿಶೆಟ್ಟಹಳ್ಳಿ ಗ್ರಾಪಂ ಪರಿಶಿಷ್ಟ ಜಾತಿ ಮಹಿಳಾ ಮೀಸಲು ಅಧ್ಯಕ್ಷ ಸ್ಥಾನಕ್ಕೆ ಈ ಹಿಂದೆ ಇದ್ದ ಅಧ್ಯಕ್ಷೆ ನಾರೆಮ್ಮ ಅವಿಶ್ವಾಸ ನಿರ್ಣಯದಿಂದ ತೆರವಾಗಿದ್ದ ಅಧ್ಯಕ್ಷ ಸ್ಥಾನಕ್ಕೆ ಬುಧವಾರ ಚುನಾವಣೆ ನಡೆಯಲಾಯಿತು. ಆಂಜಮ್ಮ ಮತ್ತು ಶೋಭ ಇಬ್ಬರು ನಾಮಪತ್ರ ಸಲ್ಲಿಸಿದ್ದರು. 16 ಸದಸ್ಯರ ಪೈಕಿ 14 ಸದಸ್ಯರು ಮತಗಳು ಚಲಾಯಿಸಿದ್ದು, ಆಂಜಮ್ಮಗೆ 10 ಮತಗಳು ಪಡೆದು 6 ಮತಗಳ ಅಂತರದಿಂದ ಜಯಗಳಿಸಿ, ಪ್ರತಿಸ್ಪರ್ಧಿ ಶೋಭ ಅವರ 4 ಮತ ಪಡೆದು ಸೋಲೊಪ್ಪಿದ್ದಾರೆ ಎಂದು ಚುನಾವಣಾಧಿಕಾರಿ ಹಾಗೂ ಇ.ಓ ವಸಂತ್ ಕುಮಾರ್ ತಿಳಿಸಿದ್ದಾರೆ. ನೂತನ ಅಧ್ಯಕ್ಷೆಯಾದ ಆಂಜಮ್ಮ ಬೆಂಬಲಿತ ಕಾರ್ಯಕರ್ತರು ಹಾಗೂ ಅಭಿಮಾನಿಗಳು ಗ್ರಾಮದ ಪ್ರಮುಖ ಬೀದಿಗಳಲ್ಲಿ ಪಟಾಕಿ ಸಿಡಿಸಿ ವಿಜಯೋತ್ಸವ ಆಚರಿಸಿದ ನಂತರ ಸಿಹಿಯನ್ನು ಹಂಚಲಾಯಿತು.