ಜಿಪಂ ಮಾಜಿ ಅಧ್ಯಕ್ಷ ಜಂಪಯ್ಯ ನಿಧನ
ಕ.ಪ್ರ. ವಾರ್ತೆ ಪಾವಗಡ ಮೇ 16
ಅನಾರೋಗ್ಯದಿಂದ ಬಳಲುತ್ತಿದ್ದ ತಾಲೂಕು ಕಾಂಗ್ರೆಸ್ ಹಿರಿಯ ಮುಖಂಡ ಹಾಗೂ ಜಿಪಂ ಮಾಜಿ ಅಧ್ಯಕ್ಷ ಜಂಪಯ್ಯ(82)ಅವರು ಬುಧವಾರ ರಾತ್ರಿ ನಿಧನರಾಗಿದ್ದಾರೆ.
ಜಂಪಯ್ಯ ಅವರು ಕಳೆದ 50 ವರ್ಷಗಳಿಂದ ಕಾಂಗ್ರೆಸ್ನ ಸಕ್ರಿಯ ರಾಜಕಾರಣಿಗಳಾಗಿ ಕಳೆದ 30ವರ್ಷಗಳಿಂದ ತಾಲೂಕು ಕಾಂಗ್ರೆಸ್ ಅಧ್ಯಕ್ಷರಾಗಿ ಕಾಂಗ್ರೆಸ್ ಭದ್ರಕೋಟೆ ನಿರ್ಮಿಸುವಲ್ಲಿ ಯಶ್ವಸಿಯಾಗಿದ್ದರು. ಸರಳ ಸಜ್ಜನಿಕೆಗೆ ಹೆಸರಾಗಿದ್ದ ಜಂಪಯ್ಯ ಅವರು ತಾಲೂಕಿನ ಎಲ್ಲಾ ರಾಜಕೀಯ ಪಕ್ಷಗಳ ಮುಖಂಡರಲ್ಲಿ ಉತ್ತಮ ಒಡನಾಟ ಹೊಂದಿ ಆರೋಗ್ಯಕರ ಸಮಾಜ ನಿರ್ಮಾಣದಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಅನಾರೋಗ್ಯಕ್ಕೆ ತುತ್ತಾಗಿ ಕೆಲ ದಿನಗಳ ಹಿಂದೆ ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದರು.
ಅವರು ಇತ್ತೀಗಷ್ಟೆ ಬೆಂಗಳೂರು ಖಾಸಗಿ ಆಸ್ವತ್ರೆಯಿಂದ ಬಿಡುಗಡೆಯಾಗಿ ಮದ್ದಿಮಂಡೆ ಗ್ರಾಮದ ತಮ್ಮ ಮನೆಯಲ್ಲಿ ನೆಲೆಸಿದ್ದು ಉಸಿರಾಟದ ತೊಂದರೆಯಿಂದ ಕೊನೆಯುಸಿರೆಳೆದರೆಂದು ಕುಟುಂಬದ ಮೂಲಗಳಿಂದ ತಿಳಿದುಬಂದಿದೆ. ಅವರಿಗೆ ಇಬ್ಬರು ಪುತ್ರರು ಮತ್ತು ಪುತ್ರಿಯ ಇದ್ದಾರೆ.
ಅವರ ನಿಧನದ ಸುದ್ದಿ ಹರಡುತ್ತಿದ್ದಂತೆ ತಾ.ಕಾಂಗ್ರೆಸ್ ಪಾಳೆಯದಲ್ಲಿ ಮೌನ ನೆಲೆಸಿತು. ಕಾಂಗ್ರೆಸ್ ಸೇರಿದಂತೆ ತಾ. ವಿವಿಧ ಪಕ್ಷಗಳ ಮುಖಂಡರು ಮತ್ತು ಕಾರ್ಯಕರ್ತರು ತಂಡೋಪತಂಡವಾಗಿ ತೆರಳಿ ಮೃತರ ಅಂತಿಮ ದರ್ಶನ ಪಡೆದರು.
ಶಾಸಕ ಕೆ.ಎಂ. ತಿಮ್ಮರಾಯಪ್ಪ, ಮಾಜಿ ಸಚಿವ ವೆಂಕಟರಮಣಪ್ಪ, ಹಿರಿಯ ಮುಖಂಡ ಡಾ.ಜಿ. ವೆಂಕಟರಾಮಯ್ಯ, ಮಾಜಿ ಶಾಸಕ ಸೋಮ್ಲನಾಯ್ಕ್, ಕಾಂಗ್ರೆಸ್ ಮುಖಂಡರಾದ ತಾಳೇ ಮರದಹಳ್ಳಿ ನರಸಿಂಹಯ್ಯ, ಮಾನಂ ವೆಂಕಟಸ್ವಾಮಿ, ಜಿಪಂ ಸದಸ್ಯ ಎಚ್.ವಿ. ವೆಂಕಟೇಶ್, ತಾ.ಕಾಂಗ್ರೆಸ್ ಅಧ್ಯಕ್ಷ ಸುದೇಶ್ಬಾಬು, ಜೆಡಿಎಸ್ ಉಪಾಧ್ಯಕ್ಷ ಬಲರಾಮರೆಡ್ಡಿ, ಆರ್.ಟಿ ಖಾನ್, ತಾ.ಕಾಂಗ್ರೆಸ್ ಯುವ ಘಟಕದ ಅಧ್ಯಕ್ಷ ಮೈಲಾರರೆಡ್ಡಿ, ಸ್ಟುಡಿಯೋ ಅಮರ್ ಹಾಗೂ ಸರ್ಕಾರಿ ನೌಕರರು ತೆರಳಿ ಮೃತರ ಅಂತಿಮ ದರ್ಶನ ಪಡೆದ ಸಂತಾಪ ವ್ಯಕ್ತಪಡಿಸಿದರು.