ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕೋಲಾರ

ಜೆಸಿಬಿ ಬಳಕೆ: ಬಿಲ್ ಪಾವತಿ ವಿರೋಧ

Rashmi Kasaragodu
Updated On : 16 May 2014, 1:50 am

ಕೋಲಾರ: ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯ ಕಾಮಗಾರಿಯನ್ನು ಜೆಸಿಬಿ ಯಂತ್ರದಿಂದ ಮಾಡಿದ ಕಾಮಗಾರಿಗಳಿಗೆ ಬಿಲ್ ಪಾವತಿ ಮಾಡಿರುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿ ಡಿವೈಎಫ್‌ಐ ವತಿಯಿಂದ ಜಿಪಂ ಉಪ ಕಾರ್ಯದರ್ಶಿ ಬದನೂರುರವರಿಗೆ ಶುಕ್ರಾವರ ಮನವಿ ಸಲ್ಲಿಸಲಾಯಿತು.
ಕೋಲಾರ ತಾಲೂಕಿನ ಶಾಪೂರು ಗ್ರಾಪಂ ವ್ಯಾಪ್ತಿಯ ಅಗ್ರಹಾರ ಸೋಮರಸನಹಳ್ಳಿ ಕೆರೆಯಲ್ಲಿ ಗಿಡ, ಹೂಳು ತೆಗೆದು ರಿಪೇರಿ ಮಾಡಿಸುವುದಕ್ಕೆ, ಗ್ರಾಮದ ಪಟಾಲಮ್ಮ ದೇವಸ್ಥಾನದ ಹತ್ತಿರ ಗಿಡ ತೆಗೆದು, ಮೈದಾನ ಸಮತಟ್ಟು ಮಾಡುವ ಕಾಮಗಾರಿಗೆ ಕೂಲಿ ಕಾರ್ಮಿಕರನ್ನು ಬಳಸದೆ ಜೆಸಿಬಿ ಯಂತ್ರದಿಂದ ಕಾಮಗಾರಿ ಮಾಡಿಸಲಾಗಿದೆ ಎಂದು ದೂರಿದರು.
ಈ ಬಗ್ಗೆ ಜಿಪಂ ಸಿಇಒ, ತಾಪಂ ಇಒರವರಿಗೆ ಲಿಖಿತವಾಗಿ ದೂರು ಸಲ್ಲಿಸಲಾಗಿತ್ತು. ಇದಾದ ನಂತರ ತಾಪಂ ಸಹಾಯಕ ಅಭಿವೃದ್ಧಿ ಅಧಿಕಾರಿಗಳು ಸ್ಥಳ ಪರಿಶೀಲನೆ ಮಾಡಿ ಜೆಸಿಬಿ ಯಂತ್ರದಿಂದ ಮಾಡಿರುವುದನ್ನು ಪತ್ತೆ ಹಚ್ಚಿ, ಈ ಕಾಮಗಾರಿಗಳಿಗೆ ಬಿಲ್ ಮಾಡದಂತೆ ಪಿಡಿಒಗೆ ಸೂಚನೆ ನೀಡಿದ್ದರು. ಆದರೆ ಪಿಡಿಒ, ಗ್ರಾಪಂ ಅಧ್ಯಕ್ಷರು ಮತ್ತು ಜೆಇ ಸೇರಿ ಈ ಕಾಮಗಾರಿಗಳಿಗೆ ಬಿಲ್ ಮಾಡಿದ್ದಾರೆಂದು ಆರೋಪಿಸಿದರು.
ಜಿಲ್ಲೆಯಲ್ಲಿ ಬರಗಾಲದಿಂದ ಕೃಷಿ ಕೂಲಿಕಾರರು ಕೆಲಸವಿಲ್ಲದೇ ವಲಸೆ ಹೋಗುವಂತ ಪರಿಸ್ಥಿತಿ ನಿರ್ಮಾಣವಾಗುತ್ತಿದೆ. ಇಂತಹ ಪರಿಸ್ಥಿತಿಯಲ್ಲಿ ಕೂಲಿಕಾರರಿಗೆ ನೆರವಿಗೆ ಬರಬೇಕಾಗಿದ್ದ ನರೇಗಾ ಯೋಜನೆಯನ್ನು ಅಧಿಕಾರಿಗಳು ಸಮರ್ಪಕವಾಗಿ ಜಾರಿಗೊಳಿಸದೇ ಕೆಲವು ಗುತ್ತಿಗೆದಾರರ ಹೊಟ್ಟೆ ತುಂಬಿಸಲು ಹೊರಟಿರುವುದು ನಾಚಿಕೆಗೇಡಿನ ವಿಷಯವಾಗಿದೆ ಎಂದರು.
ಇಂತಹ ಭ್ರಷ್ಟ ಅಧಿಕಾರಿಗಳು ಮತ್ತು ಗುತ್ತಿಗೆದಾರರ ವಿರುದ್ಧ ಕೂಡಲೇ ಕಾನೂನು ರೀತ್ಯ ಕ್ರಮ ಕೈಗೊಳ್ಳಬೇಕು ಮತ್ತು ಇವರ ಮೇಲೆ ಕ್ರಿಮಿನಲ್ ಮೊಕದ್ದಮೆ ಹೂಡಬೇಕು, ನೀಡಿರುವ ಬಿಲ್ ಮೊತ್ತವನ್ನು ಇವರಿಂದ ಮರು ಪಾವತಿಸಿಕೊಳ್ಳಬೇಕು ಎಂದು ಒತ್ತಾಯಿಸಿದರು.
ನಿಯೋಗದಲ್ಲಿ ಡಿವೈಎಫ್‌ಐ ತಾಲೂಕು ಅಧ್ಯಕ್ಷ ಎ.ವಿ. ರಮೇಶ್, ಜಿಲ್ಲಾ ಉಪಾಧ್ಯಕ್ಷ ಎಂ. ವಿಜಯಕೃಷ್ಣ, ಸುಬ್ರಮಣಿ, ಶಿವಣ್ಣ, ವೆಂಕಟಮುನಿಯಪ್ಪ, ವೆಂಕಟರಮಣಪ್ಪ, ಆಂಜನಮ್ಮ, ಸುಶೀಲ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement