ನೀರಿನ ಸಮಸ್ಯೆ: ಅಧಿಕಾರಿಗಳ ಪ್ರಾಮಾಣಿಕ ಸೇವೆಗೆ ಸೂಚನೆ
ಶಿಡ್ಲಘಟ್ಟ: ತಾಲೂಕಿನಲ್ಲಿ ಸಮರ್ಪಕವಾಗಿ ಕುಡಿಯುವ ನೀರಿನ ಸಮಸ್ಯೆ ಪರಿಹರಿಸಲು ಅಧಿಕಾರಿಗಳು ಪ್ರಾಮಾಣಿಕರಾಗಿ ಕೆಲಸ ನಿರ್ವಹಿಸಬೇಕು ಎಂದು ಜಿಪಂ ಅಧ್ಯಕ್ಷ ಎಸ್.ಎನ್. ಚಿನ್ನಪ್ಪ ಅಧಿಕಾರಿಗಳಿಗೆ ಸೂಚಿಸಿದರು.
ಪಟ್ಟಣದ ತಾಪಂ ಸಭಾಂಗಣದಲ್ಲಿ ಏರ್ಪಡಿಸಿದ್ದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅಧಿಕಾರಿಗಳಿಂದ ಮಾಹಿತಿ ಪಡೆದ ಅವರು, ತಾಲೂಕಿನ ಸಮಸ್ಯಾತ್ಮಕ ಹಳ್ಳಿಗಳಿಗೆ ಭೇಟಿ ನೀಡಿ ಅಧಿಕಾರಿಗಳೆ ಪರಿಶೀಲನೆ ನಡೆಸಿದ ನಂತರ ಕೊಳವೆ ಬಾವಿಗಳನ್ನು ಕೊರೆಸಬೇಕು ಎಂದು ಸೂಚಿಸಿದರು. ನೀರಿನ ಸಮಸ್ಯೆ ಪರಿಹಾರಕ್ಕಾಗಿ ತೆಗೆದುಕೊಂಡ ಕ್ರಮಗಳ ಬಗ್ಗೆ ವಿವರಣೆ ನೀಡಿದ ಜಿಪಂ ಎಂಜಿನಿಯರಿಂಗ್ ವಿಭಾಗದ ಎಇಇ ಗಣಪತಿ ಸಾಕರೆ, ತಾಲೂಕಿನಲ್ಲಿ ಸುಮಾರು 52 ಹಳ್ಳಿಗಳನ್ನು ಗುರ್ತಿಸಿದ್ದು, 74 ಕೊಳವೆಬಾವಿಗಳನ್ನು ಕೊರೆಸಲು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದ್ದು, ಸುಮಾರು 10 ಕೋಟಿ 31 ಲಕ್ಷ ರುಪಾಯಿ ಬಿಡುಗಡೆಗಾಗಿ ಪ್ರಸ್ತಾವನೆ ಸಲ್ಲಿಸಿರುವುದಾಗಿ ತಿಳಿಸಿದರು.
ಬಹಳಷ್ಟು ಗ್ರಾಪಂಗಳಿಗೆ ಪಂಚಾಯತ್ ರಾಜ್ ಎಂಜಿನಿಯರಿಂಗ್ ವಿಭಾಗದ ಮುಖಾಂತರ ಕೊರೆಸಿರುವ ಬೋರ್‌ವೆಲ್‌ಗಳನ್ನು ಹಸ್ತಾಂತರಿಸಿದ್ದರೂ ಹಳೆಯ ಪಂಪು ಮೋಟಾರುಗಳ ಬಗ್ಗೆ ಪಂಚಾಯ್ತಿಗಳಲ್ಲಿ ಮಾಹಿತಿ ಲಭ್ಯವಿಲ್ಲ ಎನ್ನುವ ಆರೋಪಗಳು ಕೇಳಿಬರುತ್ತಿವೆ ಎಂದು ತಾಪಂ ಅಧ್ಯಕ್ಷ ಯರಬಚ್ಚಪ್ಪ ಆರೋಪಿಸಿದರು. ಪಟ್ಟಣದ ಸಾರ್ವಜನಿಕ ಆಸ್ಪತ್ರೆಗೆ ಔಷಧಗಳ ಸರಬರಾಜಾಗುತ್ತಿಲ್ಲ, ನೀರಿನ ಸಮಸ್ಯೆ ತೀವ್ರವಾಗಿ ಕಾಡುತ್ತಿದೆ, ವೈದ್ಯರ ಕೊರತೆ ಕಾಡುತ್ತಿದೆ ಎಂದು ಸಾರ್ವಜನಿಕ ಆಸ್ಪತ್ರೆ ಆಡಳಿತಾಧಿಕಾರಿ ಅನಿಲ್‌ಕುಮಾರ್ ಮನವಿ ಮಾಡಿದರು.
ಶಿಕ್ಷಣ ಇಲಾಖೆ, ರೇಷ್ಮೆ ಇಲಾಖೆ, ಕೃಷಿ ಇಲಾಖೆ, ತೋಟಗಾರಿಕಾ ಇಲಾಖೆ, ಕೈಗಾರಿಕಾ ಇಲಾಖೆ, ಅರಣ್ಯ ಇಲಾಖೆ ಸೇರಿದಂತೆ ಅನೇಕ ಇಲಾಖೆಗಳ ಅಧಿಕಾರಿಗಳಿಂದ ಮಾಹಿತಿ ಪಡೆದರು. ಜಿಪಂ ಉಪಾಧ್ಯಕ್ಷ ರಾಘವೇಂದ್ರ ಹನುಮಾನ್, ಸದಸ್ಯರಾದ ಎಸ್.ಎಂ. ನಾರಾಯಣಸ್ವಾಮಿ, ಶಿವಲೀಲಾರಾಜಣ್ಣ, ತಾಪಂ ಅಧ್ಯಕ್ಷ ಯರಬಚ್ಚಪ್ಪ, ಉಪಾಧ್ಯಕ್ಷೆ ಸರಸ್ವತಮ್ಮ, ಸ್ಥಾಯಿ ಸಮಿತಿ ಅಧ್ಯಕ್ಷ ಗಂಜಿಗುಂಟೆ ನರಸಿಂಹಮೂರ್ತಿ, ಎಇಇ ಗಣಪತಿ ಎಸ್ ಸಾಕರೆ, ಚಂದ್ರಪ್ಪ, ರಾಘವೇಂದ್ರ ಇದ್ದರು.