ನೀರು ಕೊಡದಿದ್ದರೆ ಜಾಗ ಖಾಲಿ ಮಾಡಿ
ಚಿಂತಾಮಣಿ: ಅಧಿಕಾರಿಗಳು ಕುಡಿಯುವ ನೀರಿನ ಸಮಸ್ಯೆ ನಿವಾರಿಸದಿದ್ದರೆ ಬೇರೆ ಕಡೆ ಹೋಗಿ ಎಂದು ಚಿಕ್ಕಬಳ್ಳಾಪುರ ಜಿಪಂ ಅಧ್ಯಕ್ಷ ಎಸ್.ಎನ್. ಚಿನ್ನಪ್ಪ ಎಚ್ಚರಿಸಿದರು. ನಗರದ ತಾಪಂ ಕಾರ್ಯಾಲಯದಲ್ಲಿ ತಾಲೂಕು ಮಟ್ಟದ ಅಧಿಕಾರಿಗಳ ಸಭೆಯಲ್ಲಿ ಅಧಿಕಾರಿಗಳ ಬೇಜವಾಬ್ದಾರಿತನದ ಆರೋಪ ಕೇಳಿ ಬರುತ್ತಿರುವುದರಿಂದ ಬೇರೆ ಕಡೆ ಹೋಗಿ ಕೆಲಸ ಮಾಡಿ ಎಂದು ಎಚ್ಚರಿಸಿದರು. ತಾಪಂ ಅಧ್ಯಕ್ಷೆ ಗೌರಮ್ಮ ಸಭೆಗೆ ಗೈರು ಹಾಜರಾದ ಅಧಿಕಾರಿಗಳ ವಿರುದ್ಧ ಸಭೆಯಲ್ಲಿ ಗುಡುಗಿದರು. ಕುಡಿಯುವ ನೀರಿನ ಸಮಸ್ಯೆ ಹಾಗೂ ವಿದ್ಯುತ್ ಕೊರತೆಯಿಂದ ಜನರು ರೊಚ್ಚಿಗೆದ್ದು ಜನಪ್ರತಿನಿಧಿಗಳ ಮೇಲೆ ತಿರುಗಿ ಬಿದ್ದು ಪ್ರತಿಭಟನೆ ನಡೆಸುತ್ತಿದ್ದು, ಈ ಬಗ್ಗೆ ಅಧಿಕಾರಿಗಳು ಬೇಜವಾಬ್ದಾರಿ ತನ ತೋರುತ್ತಿದ್ದಾರೆಂದು ಕಿಡಿಕಾರಿದರು.
ತಾಲೂಕಿನ ಬಹುತೇಕ ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ತಲೆದೋರಿದ್ದರೂ ಜಿಲ್ಲಾಡಳಿತ ಕಾಲ ಹರಣ ಮಾಡುತ್ತಿರುವುದಾಗಿ ಸದಸ್ಯರು ಆರೋಪಿಸಿದರು. ಅಧಿಕಾರಿಗಳು ಗ್ರಾಮಕ್ಕೆ ಭೇಟಿ ನೀಡಿ ಜನರ ಸಮಸ್ಯೆ ತಿಳಿಯಲಿ ಎಂದು ತಾಪಂ ಸದಸ್ಯರು ಸಭೆಯಲ್ಲಿ ಗದ್ದಲ ಮಾಡಿದರು. ಜಿಪಂ ಉಪಾಧ್ಯಕ್ಷ ರಾಘವೇಂದ್ರ ಹನುಮಾನ್ ಇದ್ದರು.