ಲೋಕ ಸಮರದ ತೀರ್ಪು ಇಂದು
ಪಾ.ಶ್ರೀ. ಅನಂತರಾಮ್
ಕೋಲಾರ: ಎಂಟು ವಿಧಾನಸಭಾ ಕ್ಷೇತ್ರಗಳನ್ನು ಒಳಗೊಂಡ ಕೋಲಾರ ಲೋಕಸಭಾ ಕ್ಷೇತ್ರ(ಮೀಸಲು)ಕ್ಕೆ ಏ.17ರಂದು ನಡೆದಿದ್ದ ಚುನಾವಣೆಯ ಫಲಿತಾಂಶ ಶುಕ್ರವಾರ(ಮೇ 16)ಮಧ್ಯಾಹ್ನದ ವೇಳೆಗೆ ಪ್ರಕಟಗೊಳ್ಳುವ ಸಾಧ್ಯತೆಗಳಿವೆ.
ನಗರದ ಸರ್ಕಾರಿ ಬಾಲಕರ ಕಾಲೇಜಿನಲ್ಲಿ ಕೋಲಾರ ಜಿಲ್ಲೆಯ ಕೋಲಾರ, ಮಾಲೂರು, ಬಂಗಾರಪೇಟೆ, ಕೆಜಿಎಫ್, ಮುಳಬಾಗಿಲು, ಶ್ರೀನಿವಾಸಪುರ ಹಾಗೂ ಚಿಕ್ಕಬಳ್ಳಾಪುರ ಜಿಲ್ಲೆಗೆ ಒಳಪಟ್ಟಿರುವ ಚಿಂತಾಮಣಿ ಹಾಗೂ ಶಿಡ್ಲಘಟ್ಟ ವಿಧಾನಸಭಾ ಕ್ಷೇತ್ರದ ಮತಗಳ ಎಣಿಕೆ ಕಾರ್ಯ ನಡೆಯಲಿದೆ.
ಕಾಂಗ್ರೆಸ್ ಪಕ್ಷದ ಕೆ.ಎಚ್. ಮುನಿಯಪ್ಪ, ಬಿಜೆಪಿಯ ಎಂ. ನಾರಾಯಣಸ್ವಾಮಿ, ಜೆಡಿಎಸ್ನ ಕೆ. ಕೇಶವ, ಅಮ್ ಆದ್ಮಿ ಪಕ್ಷದ ಕೋಟಗಾನಹಳ್ಳಿ ರಾಮಯ್ಯ ಸೇರಿದಂತೆ ಒಟ್ಟು 22 ಮಂದಿಯ ರಾಜಕೀಯ ಭವಿಷ್ಯ ಅಡಗಿರುವ ಮತ ಯಂತ್ರಗಳನ್ನು ಶುಕ್ರವಾರ ಬೆಳಿಗ್ಗೆ 8ಕ್ಕೆ ಹೊರ ತೆಗೆಯಲಾಗುತ್ತದೆ.
ಕ್ಷೇತ್ರದ 7,53,783 ಪುರುಷರು, 7,36,924 ಮಹಿಳೆಯರು ಸೇರಿ ಒಟ್ಟು 14,90,848 ಮತದಾರರ ಪೈಕಿ 58,1,702 ಪುರುಷರು, 54,3,820 ಮಹಿಳೆಯರು ಸೇರಿ ಒಟ್ಟು 11,25,529(ಶೇ.75.50) ಮಂದಿ ಮತ ಚಲಾಯಿಸಿದ್ದಾರೆ. 2,041 ಮತಗಟ್ಟೆಗಳಲ್ಲಿ ಮತದಾನ ನಡೆದಿತ್ತು. ಮತ ಎಣಿಕೆ ಕಾರ್ಯಕ್ಕೆ ನಗರದ ಸರ್ಕಾರಿ ಬಾಲಕರ ಕಾಲೇಜಿನ 14 ಕಡೆ 112 ಮತ ಎಣಿಕೆ ಟೇಬಲ್ಗಳನ್ನು, 10 ಮಂದಿ ಸಹಾಯಕ ಮತ ಎಣಿಕೆ ಅಧಿಕಾರಿಗಳು ಸೇರಿದಂತೆ ಒಟ್ಟು 419 ಸಿಬ್ಬಂದಿಯನ್ನು ನಿಯೋಜಿಸಲಾಗಿದೆ.
156 ಸುತ್ತುಗಳ ಎಣಿಕೆ: ಎಲ್ಲಾ ಎಂಟು ವಿಧಾನಸಭಾ ಕ್ಷೇತ್ರಗಳ ಮತ ಎಣಿಕೆ 156 ಸುತ್ತುಗಳಲ್ಲಿ ನಡೆಸಲು ಜಿಲ್ಲಾ ಚುನಾವಣಾಧಿಕಾರಿಗಳು ಸಕಲ ಸಿದ್ಧತೆ ನಡೆಸಿದ್ದಾರೆ.
ಶಾಂತಿಯುತ ಹಾಗೂ ಪಾರದರ್ಶಕ ಮತ ಎಣಿಕೆಗಾಗಿ ಹತ್ತು ಹಲವು ಕ್ರಮಗಳನ್ನು ಕೈಗೊಳ್ಳಲಾಗಿದೆ. ಮತ ಎಣಿಕೆ ಕೇಂದ್ರದ ಸುತ್ತಮುತ್ತ ಮರದ ಕಟೆಕಟೆಯನ್ನು ನಿರ್ಮಿಸಲಾಗಿದೆ. ಮೆಕ್ಕೆ ಮೃತ್ತದಿಂದ ನೆಹರು ಯುವ ಕೇಂದ್ರದವರೆಗೆ ರಸ್ತೆ ಸಂಚಾರ ಬಂದ್ ಮಾಡಲಾಗಿದೆ, ಮದ್ಯ ಮಾರಾಟ, ಮೆರವಣಿಗೆ ನಿಷೇಧಿಸಲಾಗಿದೆ. ಯಾವುದೇ ಅಹಿತಕರ ಸಂಘಟನೆಗಳು ನಡೆಯದಂತೆ ಪೊಲೀಸ್ ಸರ್ಪಗಾವಲು ಹಾಕಲಾಗಿದೆ. ನಚಿಕೇತನ ನಿಲಯ, ಮೆಥೋಡಿಸ್ಟ್ ಶಾಲೆಯ ಆವರಣದಲ್ಲಿ ವಾಹನಗಳ ಫಾರ್ಕಿಂಗ್ ವ್ಯವಸ್ಥೆ ಮಾಡಲಾಗಿದೆ.
ಮತ ಎಣಿಕೆ ಕೇಂದ್ರದಲ್ಲಿ ಎಲ್ಲಾ ಪ್ರಕ್ರಿಯೆಗಳನ್ನು ಸೆರೆ ಹಿಡಿಯಲು ಸಿಸಿಟಿವಿಗಳನ್ನು ಅಳವಡಿಸಲಾಗಿದೆ. ಪ್ರತಿ ಸುತ್ತಿನ ಮತದಾನದ ವಿವರವನ್ನು ಸಾರ್ವಜನಿಕರಿಗೆ ಮೈಕ್ ಮೂಲಕ ಭಿತ್ತರಿಸಲು ವ್ಯವಸ್ಥೆ ಮಾಡಲಾಗಿದೆ.
ಆಗ್ನಿ ಪರೀಕ್ಷೆ: ಆರು ಬಾರಿ ಕೋಲಾರ ಕ್ಷೇತ್ರದಿಂದ ನಿರಂತವಾಗಿ ಗೆದ್ದು ಸಂಸತ್ ಪ್ರವೇಶಿಸಿ ಎರಡು ಬಾರಿ ಯುಪಿಎ ಒಂದು ಮತ್ತು ಎರಡರಲ್ಲಿ ಸಚಿವರಾಗಿದ್ದ ಕಾಂಗ್ರೆಸ್ನ ಕೆ.ಎಚ್. ಮುನಿಯಪ್ಪಗೆ ಈ ಚುನಾವಣೆ ಆಗ್ನಿ ಪರೀಕ್ಷೆಯಾಗಿದೆ. ಬಿಜೆಪಿಯ ಎಂ. ನಾರಾಯಣಸ್ವಾಮಿ, ಜೆಡಿಎಸ್ನ ಕೆ. ಕೇಶವ, ಎಎಪಿಯ ಕೋಟಿಗಾನಹಳ್ಳಿ ರಾಮಯ್ಯ ಸೇರಿದಂತೆ 22 ಮಂದಿ ತಡೆಗೋಡೆ ಮುಗಿದು ಮುನಿಯಪ್ಪ 7ನೇ ಬಾರಿಗೆ ಸಂಸತ್ ಪ್ರವೇಶಿಸುವ ಅದೃಷ್ಟಶಾಲಿ ಆಗುತ್ತಾರೆಯೇ ಇಲ್ಲವೇ ಚಕ್ರವೂಹ್ಯದಲ್ಲಿ ಸಿಲುಕುತ್ತಾರೆಯೇ ಎಂಬುದು ಇನ್ನು ಕೆಲವೇ ಗಂಟೆಗಳಲ್ಲಿ ಗೊತ್ತಾಗಲಿದೆ.
ಬಿಜೆಪಿಯ ಎಂ. ನಾರಾಯಣಸ್ವಾಮಿ ಗೆದ್ದರೆ ರಾಜ್ಯ ರಾಜಕಾರಣದಿಂದ ರಾಷ್ಟ್ರಕ್ಕೆ ಬಡ್ತಿ ಪಡೆದಂತಾಗುತ್ತದೆ, ಇದೇ ಮೊದಲ ಬಾರಿಗೆ ಚುನಾವಣೆಗೆ ಸ್ಪರ್ಧಿಸಿರುವ ಜೆಡಿಎಸ್ನ ಕೇಶವ, ಎಎಪಿಯ ರಾಮಯ್ಯನವರಿಗೂ ಆಗ್ನಿ ಪರೀಕ್ಷೆಯಾಗಿದೆ. 2009ರಲ್ಲಿ ನಡೆದ ಚುನಾವಣೆಯಲ್ಲಿ 1,912 ಮತಗಟ್ಟೆಗಳು, 6,77,785 ಪುರುಷ, 6,60,861 ಮಹಿಳೆ ಸೇರಿ 13,86,646 ಮತದಾರರ ಪೈಕಿ 4,82,868 ಪುರುಷರು, 4,42,820 ಮಹಿಳೆಯರು ಸೇರಿ 9,25,688 (ಶೇ.69.35) ಮತದಾರರು ತಮ್ಮ ಹಕ್ಕು ಚಲಾಯಿಸಿದ್ದರು. ಈ ಬಾರಿ 129 ಮತಗಟ್ಟೆಗಳು ಹೆಚ್ಚಾಗಿವೆ. 1,52,202 ಮತದಾರರು ಹೆಚ್ಚಾಗಿದ್ದಾರೆ. ಮತದಾರ ಪ್ರಮಾಣ ಕಳೆದ ಚುನಾವಣೆಗೆ ಹೋಲಿಕೆ ಮಾಡಿದಲ್ಲಿ ಶೇ.6.15ರಷ್ಟು ಹೆಚ್ಚಾಗಿದೆ.
ವಿಶೇಷ ಪೂಜೆ: ಶುಕ್ರವಾರ ಮತ ಎಣಿಕೆ ಹಿನ್ನಲೆಯಲ್ಲಿ ರಾಜಕೀಯ ಪಕ್ಷಗಳ ಮುಖಂಡರು ಹಾಗೂ ಕಾರ್ಯಕರ್ತರು ತಮ್ಮ ಇಷ್ಟ ದೇವರಿಗೆ ವಿಶೇಷ ಪೂಜೆ ಸಲ್ಲಿಸಿ ಪಕ್ಷದ ಗೆಲುವಿಗೆ ಬೇಡಿಕೊಂಡಿದ್ದಾರೆ. ಕಾಂಗ್ರೆಸ್ ಪಕ್ಷದಿಂದ 112 ಟೇಬಲ್ಗಳಿಗೆ ಅಗತ್ಯವಿರುವಷ್ಟು ಏಜೆಂಟರನ್ನು ನೇಮಕ ಮಾಡಿಕೊಂಡಿದ್ದರೆ,ಬಿಜೆಪಿಯಲ್ಲಿ ಕೊರತೆ ಉಂಟಾಗಿರುವುದರಿಂದ ಏಜೆಂಟರಿಗಾಗಿ ಹುಡುಕಾಟ ನಡೆಯುತ್ತಿದೆ, ಗುರುವಾರ ಮಧ್ಯಾಹ್ನದೊಳಗೆ ಸಾಧ್ಯವಾಗದಿದ್ದರೆ ಈಗ ನಿಯೋಜಿತರಾಗಿರುವವರಷ್ಟೇ ಮತ ಎಣಿಕೆಯ ಕಾರ್ಯದಲ್ಲಿ ಭಾಗವಹಿಸಬೇಕಾಗುತ್ತದೆ. ಜೆಡಿಎಸ್ನಲ್ಲೂ ಏಜೆಂಟರ ಕೊರತೆ ಇದ್ದರಿಂದ ಅಭ್ಯರ್ಥಿ ಕೇಶವ ಅವರು ತಮ್ಮ ಸಂಸ್ಥೆಯಿಂದ ಸಿಬ್ಬಂದಿಯನ್ನು ಮತ ಎಣಿಕೆ ಕಾರ್ಯಕ್ಕೆ ನಿಯೋಜನೆ ಮಾಡಿದ್ದಾರೆ.