ಅನೈತಿಕ ಸಂಬಂಧ: ಗೃಹಿಣಿ ಆತ್ಮಹತ್ಯೆ
ಬಂಗಾರಪೇಟೆ: ಅನೈತಿಕ ಸಂಬಂಧ ಅಣ್ಣನಿಗೆ ಗೊತ್ತಾದ್ದರಿಂದ ಹೆದರಿ ಗೃಹಿಣಿಯೊಬ್ಬಳ ಬೆಂಕಿ ಹಚ್ಚಿಕೊಂಡು ಮೃತಪಟ್ಟ ಘಟನೆ ನಡೆದಿದೆ. ತಾಲೂಕಿನ ಮಾವಹಳ್ಳಿ ಗ್ರಾಮದ ವಿಜಯಲಕ್ಷ್ಮೀ ಆತ್ಮಹತ್ಯೆ ಮಾಡಿಕೊಂಡವರು. ಮುಳಬಾಗಿಲು ತಾಲೂಕಿನ ಉಪ್ಪಾರಹಳ್ಳಿ ಗ್ರಾಮದ ವೆಂಕಟೇಶ್ ಎಂಬುವರೊಂದಿಗೆ ವಿವಾಹವಾಗಿದ್ದು, ಇಬ್ಬರ ನಡುವೆ ಸಾಮರಸ್ಯ ಕೊರತೆಯಿಂದ ಆಗಾಗ ಜಗಳವಾಗುತ್ತಿತ್ತು. ಈ ಹಿನ್ನೆಲೆಯಲ್ಲಿ ವಿಜಯಲಕ್ಷ್ಮೀ ಗಂಡನನ್ನು ಬಿಟ್ಟು ತವರು ಮನೆಗೆ ಬಂದಿದ್ದಳು. ನಂತರ ಪಟ್ಟಣದಲ್ಲಿ ಬಾಡಿಗೆ ಮನೆಯಲ್ಲಿ ವಾಸವಾಗಿ ಕೂಲಿ ಕೆಲಸ ಮಾಡಿಕೊಂಡು ಜೀವನ ಸಾಗಿಸುತ್ತಿದ್ದಳು. ಇದರ ನಡುವೆ ವಿಜಯಲಕ್ಷ್ಮೀ ಮತ್ತೊಬ್ಬರೊಂದಿಗೆ ಅನೈತಿಕ ಸಂಬಂಧ ಹೊಂದಿದ್ದಳು. ಈ ವಿಷಯ ಆಕೆಯ ಅಣ್ಣನಿಗೆ ಗೊತ್ತಾಗಿತ್ತು. ಇದರಿಂದ ಹೆದರಿದ ಆಕೆ ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.