ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕೋಲಾರ

ಅತಿಯಾದ ಆತ್ಮವಿಶ್ವಾಸ: ಕುಮಾರಸ್ವಾಮಿಗೆ ಮುಖಭಂಗ

Rashmi Kasaragodu
Updated On : 18 May 2014, 12:59 pm

ಚಿಕ್ಕಬಳ್ಳಾಪುರ: ಕ್ಷೇತ್ರಕ್ಕೆ ಹೋಗಿ ಪ್ರಚಾರ ಕೈಗೊಳ್ಳದಿದ್ದರೂ ಮತದಾರರು ಗೆಲ್ಲಿಸುತ್ತಾರೆ ಎಂಬ ಅತಿಯಾದ ಆತ್ಮವಿಶ್ವಾಸ ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿಗೆ ಮುಳುವಾಗಿದ್ದು, ಚುನಾವಣೆಯಲ್ಲಿ ಮೂರನೇ ಸ್ಥಾನಕ್ಕೆ ಕುಸಿದು ತೀವ್ರ ಮುಖಭಂಗ ಅನುಭವಿಸಿದ್ದಾರೆ.
ಮೊದಲಿನಿಂದಲೂ ಕ್ಷೇತ್ರದಲ್ಲಿ ತಮಗೆ ಗೆಲುವು ಎಂಬ ಭಾವನೆಯಲ್ಲಿದ್ದ ಅವರಿಗೆ ಕಾಂಗ್ರೆಸ್ ಅಭ್ಯರ್ಥಿ ಎಂ. ವೀರಪ್ಪ ಮೊಯ್ಲಿ, ಬಿಜೆಪಿ ಅಭ್ಯರ್ಥಿ ಬಿ.ಎನ್.ಬಚ್ಚೇಗೌಡರನ್ನು ಹಿಂದಿಕ್ಕಲು ಸಾಧ್ಯವಾಗದೇ ಕ್ಷೇತ್ರವನ್ನು ಕಳೆದುಕೊಂಡಿದ್ದಾರೆ. 2009 ರ ಲೋಕಸಭಾ ಚುನಾವಣೆಯಲ್ಲಿ 50 ಸಾವಿರ ಮತಗಳ ಅಂತರದಿಂದ ಭರ್ಜರಿ ಗೆಲವು ಸಾಧಿಸಿದ ಮಾಜಿ ಮುಖ್ಯಮಂತ್ರಿ ಎಂ. ವೀರಪ್ಪ ಮೊಯ್ಲಿ 2014 ರ ಲೋಕಸಭಾ ಚುನಾವಣೆಗೆ ಸ್ಪರ್ಧಿಸಲು ತೀವ್ರ ಪೈಪೋಟಿ ಎದುರಿಸಬೇಕಾಯಿತು. ಕೇವಲ ತಮ್ಮ ಸ್ವಾರ್ಥ ಲಾಭಕ್ಕಾಗಿ ಚುನಾವಣೆ ಘೋಷಣೆಯ ಸಂದರ್ಭದಲ್ಲಿ ಎತ್ತಿನಹೊಳೆ ಯೋಜನೆಗೆ ಶಂಕುಸ್ಥಾಪನೆ ನೆರವೇರಿಸಿದಲ್ಲದೇ ಪ್ರಭಾವಿ ಸಚಿವರಾಗಿದ್ದರೂ ಕೇಂದ್ರ ಸರ್ಕಾರದಿಂದ ಹೆಚ್ಚಿನ ಅನುದಾನ ತಂದು ಇಲ್ಲಿ ತ್ವರಿತಗತಿಯಲ್ಲಿ ಅಭಿವೃದ್ಧಿ ಕೆಲಸಗಳನ್ನು ಕೈಗೊಳ್ಳಲಿಲ್ಲ ಎಂಬ ಟೀಕೆಗೆ ಗುರಿಯಾಗಿದ್ದರು. ಇದರಿಂದ ನಿರ್ಮಾಣವಾದ  ಮೊಯ್ಲಿ ವಿರೋಧಿ ಅಲೆಯಿಂದ ಕ್ಷೇತ್ರದಲ್ಲಿ ಕಾಂಗ್ರೆಸ್ ಸೋಲನ್ನು ಅನುಭವಿಸುತ್ತದೆ ಎಂದೇ ಹೇಳಲಾಗಿತ್ತು. ಕುಮಾರಸ್ವಾಮಿ ಸ್ಪರ್ಧೆಯಿಂದ ಕ್ಷೇತ್ರದಲ್ಲಿ ರಾಜಕೀಯ ವಾತಾವರಣವೇ ಬದಲಾಯಿತು. ಮಾಜಿ ಮುಖ್ಯಮಂತ್ರಿಗಳಿಬ್ಬರ ಕದನದಿಂದ ಕ್ಷೇತ್ರ ಎಲ್ಲರ ಗಮನ ಸೆಳೆಯಿತು. ಕಾಂಗ್ರೆಸ್, ಬಿಜೆಪಿ ಮತ್ತು ಜೆಡಿಎಸ್ ನಡುವಿನ ತ್ರಿಕೋನ ಸ್ಪರ್ಧೆಯಿಂದ ಚುನಾವಣೆ ತೀವ್ರ ಕುತೂಹಲ ಮೂಡಿಸಿತು. ಸಮೀಕ್ಷಾ ವರದಿಗಳು ಕುಮಾರಸ್ವಾಮಿಯ ಗೆಲುವಿನ ಪರ ಹೇಳಿದ ಹಿನ್ನೆಲೆಯಲ್ಲಿ ಜೆಡಿಎಸ್ ಅತಿಯಾದ ವಿಶ್ವಾಸದಲ್ಲಿ ತೇಲಿ ಹೋಯಿತು. ಬಿಜೆಪಿ ಮತ್ತು ಕಾಂಗ್ರೆಸ್ ಪ್ರತಿ ಹೋಬಳಿಗಳಿಗೂ ತೆರಳಿ ಮತ ಯಾಚಿಸಿದರೆ, ಕುಮಾರಸ್ವಾಮಿ ಆತುರಾತುರವಾಗಿ ಕೆಲವು ಕಡೆ ಮಾತ್ರ ತಿರುಗಾಡಿದರು. ಇದರಿಂದ ಕ್ಷೇತ್ರದ ಜನರಿಗೆ ಕುಮಾರಸ್ವಾಮಿ ಮುಖದರ್ಶನವೇ ಆಗಲಿಲ್ಲ. ಪತ್ನಿ ಅನಿತಾ ಕುಮಾರಸ್ವಾಮಿ, ಪುತ್ರ ನಿಖಿಲ್ ಗೌಡ ಬಂದು ಹೋದರಷ್ಟೇ. ಪಕ್ಷದ ಸ್ಥಳೀಯ ಮುಖಂಡರು ಪ್ರಚಾರವನ್ನು ತಮ್ಮ ಹೆಗಲಿಗೆ ಹಾಕಿಕೊಂಡರು ಕೊನೆಗೆ ಜೆಡಿಎಸ್ ಗೆಲುವಿನ ತುತ್ತು ಕಳೆದುಕೊಳ್ಳಬೇಕಾಯಿತು.
ಬಿಜೆಪಿಗೆ ನಷ್ಟ: ಮೋದಿ ಅಲೆಯಲ್ಲಿ ಕ್ಷೇತ್ರದಲ್ಲಿ ಕಮಲವನ್ನು ಅರಳಿಸಬೇಕೆಂಬ ಉತ್ಸಾಹದಲ್ಲಿದ್ದ ಬಿಜೆಪಿ ಗೆಲುವಿಗೆ ಕುಮಾರಸ್ವಾಮಿ ಸ್ಪರ್ಧೆ ನಷ್ಟವನ್ನುಂಟು ಮಾಡಿದೆ. ಇಲ್ಲಿ ಬಲಿಜಿಗರ ನಂತರ ಒಕ್ಕಲಿಗ ಜನಾಂಗದವರು ಹೆಚ್ಚಿನ ಸಂಖ್ಯೆಯಲ್ಲಿದ್ದು ಕುಮಾರಸ್ವಾಮಿ ಮತ್ತು ಬಚ್ಚೇಗೌಡ ನಡುವೆ ಒಕ್ಕಲಿಗರ ಮತ ಹಂಚಿಕೆಯಾದ ಲಾಭ ಪರೋಕ್ಷವಾಗಿ ಕಾಂಗ್ರೆಸ್ ಗೆಲುವಿಗೆ ಅನುಕೂಲ ಮಾಡಿಕೊಟ್ಟಿದೆ. ಇದೇ ಲೆಕ್ಕಾಚಾರದಲ್ಲಿ ಕುಮಾರಸ್ವಾಮಿ ಒಳ ಒಪ್ಪಂದ ಮಾಡಿಕೊಂಡು ಬಂದು ಬಚ್ಚೇಗೌಡರನ್ನು ಸೋಲಿಸಲು ಕ್ಷೇತ್ರದಲ್ಲಿ ಅಂತಿವಾಗಿ ಚುನಾವಣೆಗೆ ನಿಂತರು ಎಂಬ ಆರೋಪ ಪ್ರಾರಂಭದಿಂದಲೂ ಕೇಳಿ ಬರುತ್ತಿದ್ದು ಕಾಂಗ್ರೆಸ್ ವಿರುದ್ಧ ಕಡಿಮೆ ಮತಗಳ ಅಂತರದಲ್ಲಿ ಸೋಲನ್ನು ಕಂಡ ಬಿಜೆಪಿ ಕುಮಾರಸ್ವಾಮಿ ವಿರುದ್ಧ ನೇರವಾಗಿ ಹರಿಹಾಯುತ್ತಿದೆ. ಕುಮಾರಸ್ವಾಮಿ ಸ್ಪರ್ಧಿಸದಿದ್ದರೆ ಒಕ್ಕಲಿಗರ ಮತ ವಿಭಜನೆಯಾಗುತ್ತಿರಲಿಲ್ಲ. ಆಗ ಬಚ್ಚೇಗೌಡರೇ ಗೆಲುವನ್ನು ಕಾಣುತ್ತಿದ್ದರು ಎಂದು ಆಕ್ರೋಶ ವ್ಯಕ್ತಪಡಿಸುತ್ತಿದೆ.



ಮೊಯ್ಲಿ ಮತ್ತು ಕುಮಾರಸ್ವಾಮಿ ನಡುವೆ ಒಳ ಒಪ್ಪಂದವಾಗಿದೆ. ಒಕ್ಕಲಿಗರ ಮತ ಹಂಚಿ ಹೋಗುವಂತೆ ಮಾಡುವ ಮೂಲಕ ಮೊಯ್ಲಿರನ್ನು ಗೆಲ್ಲಿಸಲು ಕುಮಾರಸ್ವಾಮಿ ದುರುದ್ದೇಶದಿಂದ ಚಿಕ್ಕಬಳ್ಳಾಪುರದಲ್ಲಿ ಚುನಾವಣೆಗೆ ನಿಂತರು.

ಟಿ ಬಿ.ಎನ್. ಬಚ್ಚೇಗೌಡ, ಬಿಜೆಪಿ ಅಭ್ಯರ್ಥಿ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement